ಜಮ್ಮು-ಕಾಶ್ಮೀರ: ಕೋವಿಡ್ 19 ಲಾಕ್ ಡೌನ್ ನಡುವೆ ವ್ಯಾಪಾರ, ವಹಿವಾಟು ಸ್ಥಗಿತಗೊಂಡಿದ್ದರೆ, ಮತ್ತೊಂದೆಡೆ ಕಣಿವೆ ರಾಜ್ಯದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿತ್ತು. ಇತ್ತೀಚೆಗಷ್ಟೇ ಭಾರತೀಯ ಸೇನೆಯ ಐವರು ಯೋಧರನ್ನು ಕಳೆದುಕೊಳ್ಳುವಂತಾಗಿತ್ತು. ಇದಕ್ಕೆ ಪ್ರತೀಕಾರ ಎಂಬಂತೆ ಗುರುವಾರ ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆಯ ಜಮ್ಮು ಕಾಶ್ಮೀರದ ಕಮಾಂಡರ್ ರಿಯಾಝ್ ನೈಕೂ ಜಂಟಿ ಕಾರ್ಯಾಚರಣೆಯ ಎನ್ ಕೌಂಟರ್ ಗೆ ಬಲಿಯಾಗಿದ್ದಾನೆ.
ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರದ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ನೈಕೂ ಹತ್ಯೆಗೈದಿರುವುದು ಜಮ್ಮು ಕಾಶ್ಮೀರದ ಸ್ಥಳೀಯ ಉಗ್ರಗಾಮಿ ಸಂಘಟನೆಗಳಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಅದರಲ್ಲಿಯೂ ಮುಖ್ಯವಾಗಿ ಪಾಕ್ ಬೆಂಬಲಿತ ಹಿಜ್ಬುಲ್ ಮುಜಾಹಿದೀನ್ ಸಂಘಟನೆಗೆ ಎಂದು ವರದಿ ತಿಳಿಸಿದೆ.
ರಿಯಾಜ್ ನೈಕೂ 1985ರಲ್ಲಿ ಪುಲ್ವಾಮಾ ಜಿಲ್ಲೆಯ ಆವಂತಿಪೋರಾದ ಬೈಗ್ ಪೋರಾ ಗ್ರಾಮದಲ್ಲಿ ಜನಿಸಿದ್ದ, ತನ್ನ 33ನೇ ವಯಸ್ಸಿಗೆ ಗನ್ ಹಿಡಿಯಲು ಆರಂಭಿಸಿದ್ದ. ಪುಲ್ವಾಮಾ ಜಿಲ್ಲೆಯ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದ. ಉಗ್ರಗಾಮಿ ಸಂಘಟನೆಗೆ ಸೇರುವ ಮುನ್ನ ನೈಕೂ ಖಾಸಗಿ ಶಾಲೆಯಲ್ಲಿ ಎರಡು ವರ್ಷಗಳ ಕಾಲ ಗಣಿತ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಎಂದು ವರದಿ ವಿವರಿಸಿದೆ! 2010-12ರಲ್ಲಿ ಶಿಕ್ಷಕನಾಗಿದ್ದ ಈತ 2012ರಲ್ಲಿ ನಾಪತ್ತೆಯಾಗಿದ್ದ.
ಹೀಗೆ ನಾಪತ್ತೆಯಾಗಿದ್ದ ರಿಯಾಜ್ ಉಗ್ರಗಾಮಿ ಸಂಘಟನೆ ಸೇರ್ಪಡೆಗೊಂಡಿದ್ದ. ನೈಕೂ ಅಲಿಯಾಸ್ ಮೊಹಮ್ಮದ್ ಬಿನ್ ಖ್ವಾಸಿಂ ಬರೋಬ್ಬರಿ 11 ಭಯೋತ್ಪಾದಕ ಸಂಬಂಧಿ ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್ ಆಗಿದ್ದ ೀ ಹಿನ್ನೆಲೆಯಲ್ಲಿ ಆತನ ತಲೆಗೆ ಜಮ್ಮು ಕಾಶ್ಮೀರ ಸರ್ಕಾರ 12 ಲಕ್ಷ ರೂಪಾಯಿ ಘೋಷಿಸಿತ್ತು.
2016ರಲ್ಲಿ ಹಿಜ್ಜುಲ್ ಮುಜಾಹಿದೀನ್ ಸಂಘಟನೆಯ ಕಮಾಂಡರ್ ಬುರ್ಹಾನ್ ವಾನಿಯ ಹತ್ಯೆಯ ನಂತರ ರಿಯಾಝ್ ನೈಕೂ ನೂತನ ಕಮಾಂಡರ್ ಆಗಿ ಆಯ್ಕೆಯಾಗಿದ್ದ. 2017ರಲ್ಲಿ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯಿಂದ ಝಾಕೀರ್ ಮೂಸಾ ಹೊರಬಂದು ಸ್ವಂತ ಅನ್ಸಾರ್ ಘಾಜ್ ವಾತುಲ್ ಹಿಂದ್ ಎಂಬ ಉಗ್ರಗಾಮಿ ಸಂಘಟನೆ ಹುಟ್ಟುಹಾಕಿದ್ದ. ಅಲ್ಲದೇ ಇದು ಅಲ್ ಖೈದಾ ಜತೆ ಕೈಜೋಡಿಸಿರುವುದಾಗಿಯೂ ಘೋಷಿಸಿದ್ದ. 2019ರ ಮೇ 23ರಂದು ತ್ರಾಲ್ ನಲ್ಲಿ ಭದ್ರತಾಪಡೆಯ ಎನ್ ಕೌಂಟರ್ ಗೆ ಮೂಸಾ ಬಲಿಯಾಗಿದ್ದ.
ಮೋಸ್ಟ್ ವಾಂಟೆಡ್ ಉಗ್ರ ರಿಯಾಝ್ ನ್ನು ಪುಲ್ವಾಮಾ ಜಿಲ್ಲೆಯ ಹುಟ್ಟೂರು ಬೈಗ್ ಪೋರಾ ಗ್ರಾಮದಲ್ಲಿ ಮಂಗಳವಾರ ಸೇನಾಪಡೆ ಪತ್ತೆ ಹಚ್ಚಿ ಕಾರ್ಯಾಚರಣೆಗೆ ಇಳಿದಿದ್ದವು. ಸತತ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಕಮಾಂಡರ್ ರಿಯಾಝ್ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.