Advertisement

ನದಿಗಳ ನೀರು ನಿರ್ವಹಣಾ ಮಂಡಳಿ ರದ್ದತಿಗೆ ಆಗ್ರಹ

06:03 PM May 05, 2020 | Suhan S |

ಆಲಮಟ್ಟಿ: ಕೇಂದ್ರದ ಜಲಶಕ್ತಿ ಸಚಿವಾಲಯದ ಅಧೀನದಲ್ಲಿ ನೂತನವಾಗಿ ಗೋದಾವರಿ, ಕೃಷ್ಣಾ, ಕಾವೇರಿ ನದಿಗಳ ನೀರು ನಿರ್ವಹಣಾ ಮಂಡಳಿ ರಚಿಸಿದ್ದು, ಇದರಿಂದ ರಾಜ್ಯದ ಹಕ್ಕು ಕಸಿದುಕೊಂಡಂತಾಗಿದೆ. ಆದ್ದರಿಂದ ರಾಷ್ಟ್ರಪತಿಗಳು ಇದನ್ನು ಮರುಪರಿಶೀಲಿಸಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು.

Advertisement

ಆಲಮಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಡೀ ದೇಶವೇ ಲಾಕ್‌ಡೌನ್‌ ಇರುವ ಸಂದರ್ಭದಲ್ಲಿ ರಾಜ್ಯದ ರೈತರ ಗಮನಕ್ಕೆ ತಾರದೇ ಕೇಂದ್ರ  ಸರ್ಕಾರ ತರಾತುರಿಯಲ್ಲಿ ಮಂಡಳಿ ರಚಿಸಿದೆ. ಇದರಿಂದ ಕೃಷ್ಣಾ ಒಡಲ ಮಕ್ಕಳಿಗೆ ದೊಡ್ಡ ಆಘಾತವಾದಂತಾಗಿದೆ. ಶಾಶ್ವತ ಬರಗಾಲ ಅನುಭವಿಸುತ್ತಿರುವ ಜಿಲ್ಲೆಗಳ ಅಭಿವೃದ್ಧಿಗಾಗಿ ಕೃಷ್ಣೆಗೆ ಜಲಾಶಯ ನಿರ್ಮಿಸಿದ್ದರೂ ಅಖಂಡ ವಿಜಯಪುರ ಜಿಲ್ಲೆಗೆ ಇನ್ನೂ ಸಮರ್ಪಕವಾಗಿ ನೀರು ದೊರೆಯುತ್ತಿಲ್ಲ. ಅಲ್ಲದೇ ಜಿಲ್ಲೆಯ ಜನ-ಜಾನುವಾರುಗಳಿಗೆ ಕುಡಿಯುವ ನೀರು ಪಡೆಯಲೂ ಹೋರಾಟ ಮಾಡಬೇಕಾದ ಸ್ಥಿತಿಯಿದೆ. ಆದ್ದರಿಂದ ನೀರು ನಿರ್ವಹಣಾ ಮಂಡಳಿ ರದ್ದುಪಡಿಸುವಂತೆ ಮುಖ್ಯಮಂತ್ರಿಗಳು ಶಾಸಕರು, ಸಂಸದರನ್ನೊಳಗೊಂಡ ನಿಯೋಗವನ್ನು ತಗೆದುಕೊಂಡು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.

2010ರ ಡಿಸೆಂಬರ್‌ನಲ್ಲಿ ಎರಡನೇ ಕೃಷ್ಣಾ ನ್ಯಾಯಾಧಿಕರಣ ತನ್ನ ತೀರ್ಪಿನಲ್ಲಿ ಜಲಾಶಯ ಎತ್ತರಿಸಲು ಅನುಮತಿ ನೀಡಿದ್ದರೂ ರಾಜ್ಯಕ್ಕೆ ಮಾರಕವಾಗುವ ಹಲವಾರು ಅಂಶಗಳ ತೀರ್ಪು ನೀಡಿದೆ. ಇದರಲ್ಲಿಯೂ ಪ್ರಾಧಿಕಾರ ರಚಿಸುವಂತೆ ತಿಳಿಸಿದೆ.  ಈಗ ರಚಿಸಿರುವ ಮಂಡಳಿಯು ಅದರ ಭಾಗವಾದಂತಾಗಿದೆ. ಇದು ಜಾರಿಯಾದರೆ ಈ ಭಾಗದ ರೈತರಿಗೆ ಮರಣ ಶಾಸನವಾಗಲಿದೆ. ಆದ್ದರಿಂದ ಕೇಂದ್ರದ ಜಲಶಕ್ತಿ ಸಚಿವಾಲಯದ ವ್ಯಾಪ್ತಿಯಲ್ಲಿ ರಚಿಸಿರುವ ನೀರು ನಿರ್ವಹಣಾ ಮಂಡಳಿಯನ್ನು ರದ್ದುಗೊಳಿಸದಿದ್ದರೆ ನಾಡಿನ ಮಠಾಧೀಶ ರೊಂದಿಗೆ ಲಕ್ಷಾಂತರ ರೈತರು ಸಂಸತ್‌ ಭವನಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಸವನಬಾಗೇವಾಡಿ ವಿರಕ್ತಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಕೃಷ್ಣೆ ವ್ಯಾಪ್ತಿಯ ಎಲ್ಲ ಜಿಲ್ಲೆಗಳ ಶಾಸಕರು, ಸಂಸದರು ಪಕ್ಷಾತೀತವಾಗಿ ಧ್ವನಿಯೆತ್ತಿ ಕೇಂದ್ರ  ಸರ್ಕಾರದ ಮೇಲೆ ಒತ್ತಡ ತಂದು ರಾಜ್ಯದ ಹಕ್ಕನ್ನು ಉಳಿಸಿಕೊಳ್ಳಬೇಕು. ಜಿಲ್ಲೆಯ ಜನತೆಗೆ ನ್ಯಾಯ ಒದಗಿಸಲು ಪಕ್ಷಾತೀತವಾಗಿ ಎಲ್ಲರೂ ಒಗ್ಗಟ್ಟಿನಿಂದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕೇಂದ್ರ ಸರ್ಕಾರಕ್ಕೆ ನಿಯೋಗದೊಂದಿಗೆ ತೆರಳಿ ಪ್ರಾಮಾಣಿಕವಾಗಿ ನ್ಯಾಯ ಒದಗಿಸಲು ಶ್ರಮಿಸಬೇಕು ಇದರಲ್ಲಿ ಯಾರೂ ಕೂಡ ರಾಜಕೀಯ ಬೆರೆಸಬಾರದು ಎಂದು ಸಲಹೆ ನೀಡಿದರು. ತಾಲೂಕು ಅಧ್ಯಕ್ಷ ಸಿದ್ರಾಮ ಅಂಗಡಗೇರಿ, ವಿಠಲ ಬಿರಾದಾರ, ನಾಗಪ್ಪ ಚಿಗರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next