Advertisement

ಜಲಜೀವನ ಅಸ್ತವ್ಯಸ್ತ: ಜಲಪ್ರಳಯಕ್ಕೆ ಕರುನಾಡು ಕಂಗಾಲು ಉಕ್ಕೇರಿದ ನದಿಗಳು, ನೆರೆ ಭೀತಿ

01:17 AM Jul 24, 2023 | Team Udayavani |

ಹುಬ್ಬಳ್ಳಿ/ಬೆಂಗಳೂರು: ಮುಂಗಾರು ಮಳೆ ಅಬ್ಬರಕ್ಕೆ ಕರುನಾಡು ಅಕ್ಷರಶಃ ಮಳೆನಾಡಾಗಿದೆ. ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಜಲಪ್ರಳಯವೇ ಉಂಟಾಗಿದೆ. ಭೂಕುಸಿತ, ಸೇತುವೆಗಳ ಮುಳುಗಡೆಯಿಂದ ಹಲವೆಡೆ ಸಂಪರ್ಕ ಕಡಿತ ಗೊಂಡಿದೆ. ಮಳೆ ಅನಾಹುತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

Advertisement

ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿನ ಧಾರಾಕಾರ ಮಳೆಗೆ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ವೇದಗಂಗಾ, ದೂಧಗಂಗಾ, ಹಿರಣ್ಯಕೇಶಿ, ಮಾರ್ಕಂಡೇಯ, ಭೀಮಾ, ಮಲೆನಾಡು ಭಾಗದ ತುಂಗಾ, ಭದ್ರಾ, ಹೇಮಾವತಿ, ಕುಮದ್ವತಿ, ವರದಾ, ಕಾಳಿ, ಅಘನಾಶಿನಿ, ಗಂಗಾವಳಿ, ಬೇಡ್ತಿ, ಶರಾಬಿ ನದಿಗಳು ಉಕ್ಕಿ ಹರಿಯುತ್ತಿದ್ದು, ತೀರ ಪ್ರದೇಶದಲ್ಲಿ ನೆರೆ ಭೀತಿ ಎದುರಾಗಿದೆ. ಹಲವು ಗ್ರಾಮಗಳ ಜನರ ಸ್ಥಳಾಂತರಕ್ಕೆ ಜಿಲ್ಲಾಡಳಿತಗಳು ಸಿದ್ಧತೆ ನಡೆಸಿವೆ.
ತುಂಗಾ ನದಿ ಅಬ್ಬರಕ್ಕೆ ಶೃಂಗೇರಿ ಶಾರದಾ ದೇವಸ್ಥಾನದ ಸ್ನಾನಘಟ್ಟ, ಕಪ್ಪೆ ಶಂಕರ ಜಲಾವೃತವಾಗಿವೆ. ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಟಾಳೆ ಸೇತುವೆ ಭದ್ರಾ ನದಿ ನೀರಿನಲ್ಲಿ ಮುಳುಗಿ ಸಂಪರ್ಕ ಕಡಿತಗೊಂಡಿದೆ. ಕಳಸ, ಕುದುರೆಮುಖ, ಮಂಗಳೂರು ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಜಾಂಬಳೆ ಸಮೀಪ ರಸ್ತೆ ಮೇಲೆ ನೆರೆ ನೀರು ಹರಿಯುತ್ತಿದ್ದು ಸಂಚಾರ ವ್ಯತ್ಯಯಗೊಂಡಿದೆ. ಮೂಡಿಗೆರೆಯ ಬಕ್ಕಿ, ಕಿತ್ತಲಗಂಡೆ ಭಾಗದಲ್ಲಿ ಹೇಮಾವತಿ ನದಿ ಆರ್ಭಟಕ್ಕೆ ಕಳಸೇಶ್ವರ ದೇಗುಲದ ಮೆಟ್ಟಿಲಿನಿಂದ ನೀರು ಹರಿಯುತ್ತಿದೆ. ಕಾರ್ಕಳ, ಶೃಂಗೇರಿ ರಸ್ತೆ ಸಂಚಾರ ವ್ಯತ್ಯಯಗೊಂಡಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಜತೆಗೆ ಕಡಲ್ಕೊರೆತ ಬಿರು ಸಾಗಿದೆ. ದೇವಭಾಗ ಜಂಗಲ್‌ ಲಾಡ್ಜ್ ರೆಸಾರ್ಟ್‌ನ ವಸತಿ ಕೋಣೆ ಕಡಲ್ಕೊರೆತಕ್ಕೆ ಉರುಳಿ ಬಿದ್ದಿದೆ. ಯಲ್ಲಾಪುರ, ಶಿರಸಿ, ಸಿದ್ದಾಪುರದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.

ಬೆಳಗಾವಿ ಜಿಲ್ಲೆ ತತ್ತರ
ಬೆಳಗಾವಿ ಮತ್ತು ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಯಾ ಗುತ್ತಿದ್ದು, ಜಿಲ್ಲೆಯ 7 ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. 15 ಕೆಳಮಟ್ಟದ ಸೇತುವೆಗಳು ಮುಳುಗಿ ಸಂಪರ್ಕ ಕಡಿತಗೊಂಡಿದೆ. ಮಹಾರಾಷ್ಟ್ರದ ಅಂಬೋಲಿ ಮತ್ತು ಚಂದಗಢ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಮಳೆ ಬೀಳುತ್ತಿದ್ದು ಘಟಪ್ರಭಾ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ನಾಲ್ವರು ಸಾವು
ರಾಣಿಬೆನ್ನೂರು ತಾಲೂಕಿನಲ್ಲಿ ಮಂಜುನಾಥ ಆನಂದಿ (27) ಕೊಚ್ಚಿ ಹೋಗಿದ್ದಾನೆ. ತುಂಗಭದ್ರಾ ನದಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹವೊಂದು ತೇಲಿ ಬಂದಿದೆ. ಕಲಬುರಗಿ ನಗರದ ದುಬೈ ಕಾಲೋನಿಯಲ್ಲಿ ನಿರ್ಮಾಣ ಹಂತದ ನೀರಿನ ಟ್ಯಾಂಕ್‌ನಲ್ಲಿ ಮುಳುಗಿ ಅಭಿಷೇಕ ಸುರೇಶ ಕನ್ನೊಳಿ (12), ಅಜಯ ಭೀಮರಾವ ನೆಲೋಗಿ (12) ಮೃತಪಟ್ಟಿದ್ದಾರೆ. ಹಾನ ಗಲ್ಲ ತಾಲೂ ಕಿನದಲ್ಲಿ ಯಮ ನಪ್ಪ ಬಂಡಿ ವ ಡ್ಡ ರ್‌ ( 24) ಎಂಬ ವರು ಕೊಚ್ಚಿ ಹೋಗಿ ದ್ದಾರೆ.

Advertisement

ಕರಾವಳಿಯಲ್ಲಿ ಭರ್ಜರಿ ಮಳೆ
ಮಂಗಳೂರು/ಉಡುಪಿ: ಶನಿವಾರ ಮತ್ತು ರವಿವಾರ ಪೂರ್ತಿ ಸುರಿದ ಮಳೆಯಿಂದ ಕರಾವಳಿ ತೋಯ್ದು ಹೋಗಿದೆ. ಅತ್ತ ಕೊಡಗು ಜಿಲ್ಲೆಯಲ್ಲಿಯೂ ಭರ್ಜರಿ ಮಳೆಯಾಗುತ್ತಿದೆ. ಮೂರೂ ಜಿಲ್ಲೆಗಳ ಹಳ್ಳ, ಹೊಳೆ, ನದಿಗಳು ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಿಗೆ ನೆರೆ ನೀರು ನುಗ್ಗಿ ಸಂಕಷ್ಟ ಉಂಟಾಗಿದೆ. ರಸ್ತೆಗಳು ಕೊಚ್ಚಿಹೋದ, ಮನೆಗಳ ಮೇಲೆ ಮರಗಳು ಮುರಿದು ಬಿದ್ದ ಘಟನೆಗಳು ಕೂಡ ವರದಿಯಾಗಿವೆ.

ಮಂಗಳೂರು ನಗರದಲ್ಲಿ ಗಾಳಿ ಮಳೆಯಿಂದ ಇಬ್ಬರಿಗೆ ಗಾಯಗಳಾಗಿವೆ. ಬಂಟ್ವಾಳದ ಕಾಂತುಕೋಡಿಯಲ್ಲಿ ಮುಳುಗಿದ್ದ ಸೇತುವೆಯ ಮೇಲೆ ಸಾಗಿದ ಪಿಕ್‌ಅಪ್‌ ವಾಹನವೊಂದು ನೆರೆಯಲ್ಲಿ ಸಿಲುಕಿದ್ದು, ಸ್ಥಳೀಯರು ಚಾಲಕ, ಪ್ರಯಾಣಿಕ ಹಾಗೂ ವಾಹನವನ್ನು ರಕ್ಷಿಸಿದ್ದಾರೆ. ಬಂಟ್ವಾಳದ ಪಾಲಡ್ಕದಲ್ಲಿ ನೇತ್ರಾವತಿ ನದಿ ಉಕ್ಕಿ ಹರಿದು 9 ಮನೆಗಳು ಜಲಾವೃತ ಆಗಿವೆ. ಚಾರ್ಮಾಡಿ ಘಾಟಿರಸ್ತೆಗೆ ಮರ ಉರುಳಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಕುಮಾರಧಾರಾ, ನೇತ್ರಾವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆಯಾಗಿದೆ. ಪಂಜ ಸಮೀಪ ಹೆದ್ದಾರಿಗೆ ನೆರೆ ನೀರು ನುಗ್ಗಿ ಸಂಚಾರ ಕಡಿತಗೊಂಡಿತ್ತು.
ಉಡುಪಿ ಜಿಲ್ಲೆಯಲ್ಲಿಯೂ ಧಾರಾಕಾರ ಮಳೆಯಾಗಿದ್ದು, ಕಾಪು, ಪಡುಬಿದ್ರಿ, ಬ್ರಹ್ಮಾವರ, ನಾವುಂದ, ಕುಂದಾಪುರ ಕಡೆಗಳಲ್ಲಿ ಮನೆಗಳಿಗೆ ನೆರೆ ನೀರು ನುಗ್ಗಿದೆ.

ಬೋಟ್‌ನಲ್ಲಿ ರಕ್ಷಣೆ
ಉಡುಪಿಯಲ್ಲಿ ಮೂಡನಿಡಂಬೂರಿನ ಬ್ರಹ್ಮಬೈದರ್ಕಳ ಗರೋಡಿ ಪರಿಸರ ಜಲಾವೃತ ಗೊಂಡಿದ್ದು, ಜನರು ಬೋಟ್‌ನಲ್ಲಿ ಸಂಚರಿಸ ಬೇಕಾಯಿತು. ಕಟ ಪಾ ಡಿ ಯಲ್ಲಿ ವೃದ್ಧೆ ಸಹಿತ 7 ಮಂದಿ ಯನ್ನು ಸ್ಥಳಾಂತ ರಿ ಸ ಲಾ ಯಿತು. ಕುಕ್ಕೆ ಸುಬ್ರಹ್ಮಣ್ಯದಲ್ಲಿ 8 ಮಂದಿಯನ್ನು ಬೋಟ್‌ ಮೂಲಕ ರಕ್ಷಿಸಲಾಯಿತು. ಅಪಾಯ ಸಂಭಾವ್ಯ ಸ್ಥಳಗಳಲ್ಲಿ ದೋಣಿಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

ಕರಾವಳಿಯಲ್ಲಿ ಮುಂದುವರಿದ ಮಳೆ; ನದಿಗಳಲ್ಲಿ ಹೆಚ್ಚಿದ ಪ್ರವಾಹ
ಮಂಗಳೂರು/ಉಡುಪಿ/ಮಡಿಕೇರಿ: ಮುಂಗಾರು ಬಿರುಸುಗೊಂಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಯಲ್ಲಿ ರವಿವಾರವೂ ಧಾರಾಕಾರ ಮಳೆ ಮುಂದುವರಿದಿದೆ. ನದಿ, ತೊರೆಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ತಗ್ಗು ಪ್ರದೇಶಗಳಲ್ಲಿ ನೆರೆಯುಂಟಾಗಿದೆ.

ಮಂಗಳೂರು ನಗರದಲ್ಲಿ ಮುಂಜಾನೆ ಬಿರುಸಾಗಿತ್ತು. ಮಧ್ಯಾಹ್ನವಾಗುತ್ತಲೇ ಮಳೆ ಕಡಿಮೆಯಾಗಿದೆ. ಶನಿವಾರ ರಾತ್ರಿ ಉತ್ತಮ ಮಳೆಯಾಗಿತ್ತು.

ಪುತ್ತೂರು-ಪಾಣಾಜೆ ಸಂಪರ್ಕ ರಸ್ತೆಯ ಚೆಲ್ಯಡ್ಕ ಮುಳುಗುಸೇತುವೆ ಮುಳುಗಿದೆ. ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ಮಟ್ಟ 29.5 ಮೀ.ಗೆ ಏರಿಕೆಯಾಗಿದ್ದು, ಗರಿಷ್ಠ ಮಟ್ಟ 31.5ಮೀ.ಗೆ ತಲುಪಲು ಇನ್ನು 2 ಮೀ. ಮಾತ್ರ ಬಾಕಿ ಇದೆ. ಇದು ಈ ಬಾರಿಯ ಗರಿಷ್ಠ ಮಟ್ಟವೂ ಹೌದು.

ಮೂಡುಬಿದಿರೆ ಧರೆಗುಡ್ಡೆಯ ಭೂತರಾಜಗುಡ್ಡೆಯಲ್ಲಿ ನೂತನ ಸಂಪರ್ಕ ರಸ್ತೆ ಮಳೆಗೆ ಕೊಚ್ಚಿ ಹೋಗಿದೆ. ಅಶ್ವತ್ಥಪುರದಲ್ಲಿ ರಿಚರ್ಡ್‌ ಅವರಿಗೆ ಸೇರಿದ 10 ಅಡಿಕೆ ಮರಗಳು ನೆಲಕ್ಕುರುಳಿವೆ. ಬೆಳುವಾಯಿ ಕಾನದಲ್ಲಿ ಬಿದಿರಿನ ಹಿಂಡು ವಿದ್ಯುತ್‌ ತಂತಿಗೆ ವಾಲಿ ನಿಂತು ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ. ಚಾರ್ಮಾಡಿ ಘಾಟಿ ಬ್ಲಾಕ್‌ ಆಗಿ ಸಂಚಾರ ವ್ಯತ್ಯಯವಾಗಿತ್ತು. ಹರೇಕಳದಲ್ಲಿ 20 ಮನೆಗಳು ಜಲಾವೃತವಾಗಿವೆ.

ಮನೆಗಳಿಗೆ ಹಾನಿ
ರವಿವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಜಿಲ್ಲೆಯಲ್ಲಿ 6 ಮನೆಗಳು ಬಹುತೇಕ ಹಾನಿಗೀಡಾಗಿದ್ದು, 31 ಮನೆಗಳು ಭಾಗಶಃ ಹಾನಿಗೀಡಾಗಿವೆ. 227 ವಿದ್ಯುತ್‌ ಕಂಬಗಳು, 5 ವಿದ್ಯುತ್‌ ಪರಿವರ್ತಕಗಳು, 9.79 ಕಿ.ಮೀ. ವ್ಯಾಪ್ತಿಯಲ್ಲಿ ವಿದ್ಯುತ್‌ ಲೈನ್‌ಗೆ ಹಾನಿಯಾಗಿದೆ.

ಸುಬ್ರಹ್ಮಣ್ಯದಲ್ಲಿ ಕಾಳಜಿ ಕೇಂದ್ರ
ಕಡಬ ತಾಲೂಕಿಗೆ ಸಂಬಂಧಿಸಿದಂತೆ 1 ಕಾಳಜಿ ಕೇಂದ್ರವನ್ನು ಸುಬ್ರಹ್ಮಣ್ಯದಲ್ಲಿ ತೆರೆಯಲಾಗಿದ್ದು, 20 ಮಂದಿ ಪುರುಷರು, 15 ಮಂದಿ ಮಹಿಳೆಯರು ಆಶ್ರಯ ಪಡೆದಿದ್ದಾರೆ.

ಇಂದು ಆರೆಂಜ್‌ ಅಲರ್ಟ್‌
ಕರಾವಳಿಗೆ ಸೋಮವಾರವೂ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ಘೋಷಿಸಿದೆ. ಮಂಗಳವಾರದಿಂದ 4 ದಿನ ಎಲ್ಲೋ ಅಲರ್ಟ್‌ ಇದೆ. ಕರಾವಳಿಯ ಕೆಲವು ಕಡೆಗಳಲ್ಲಿ ಭಾರಿಯಿಂದ ಅತೀ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಸಮುದ್ರದ ಕಡೆಯಿಂದ ಗಂಟೆಗೆ 40-45 ಕಿ.ಮೀ.ನಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಯಿದ್ದು, ಮೀನು ಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇಬ್ಬರಿಗೆ ಗಾಯ
ಮಂಗಳೂರಿನ ಮಾರ್ಗನ್ಸ್‌ ಗೇಟ್‌ನ ಮೊಲಿ ಕೆರೆ ಬಳಿ ಫ್ಲೆ$çವುಡ್‌ ಸಂಸ್ಥೆಯೊಂದರ ಸೆಕ್ಯುರಿಟಿ ಕ್ಯಾಬಿನ್‌ ಮಳೆಗೆ ಕುಸಿದು ಬಿದ್ದಿದ್ದು, ಕ್ಯಾಬಿನ್‌ ಒಳಗಿದ್ದ ವಿಷ್ಣು ಮತ್ತು ಚಂದ್ರಶೇಖರ ಪೂಜಾರಿ ಗಾಯಗೊಂಡಿದ್ದಾರೆ. ಅವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಭದ್ರತಾ ಸಿಬಂದಿಗೆ ಮಳೆ ನೀರು ಹಾದು ಹೋಗುವ ಚರಂಡಿ ಮೇಲೆಯೇ ಕೊಠಡಿ ನಿರ್ಮಿಸಲಾಗಿತ್ತು. ರವಿವಾರ ಬೆಳಗ್ಗೆ ನೀರಿನ ರಭಸಕ್ಕೆ ಕಟ್ಟಡ ಕುಸಿಯಿತು. ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ
ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ರವಿವಾರ ಉತ್ತಮ ಮಳೆಯಾಗಿದೆ. ಪಡುಬಿದ್ರಿ, ಉಚ್ಚಿಲ, ಕಾಪು, ಬೆಳ್ಮಣ್‌, ಕಾರ್ಕಳ, ಹೆಬ್ರಿ, ಶಿರ್ವ, ಮಂಚಕಲ್‌, ಬೈಲೂರು, ಉಡುಪಿ, ಮಣಿಪಾಲ, ಕಾಪು, ಕಟಪಾಡಿ, ಉದ್ಯಾವರ, ಬ್ರಹ್ಮಾವರ, ಕೋಟ, ಸಾಲಿಗ್ರಾಮ, ತೆಕ್ಕಟ್ಟೆ, ಕುಂದಾಪುರ ಹಾಗೂ ಬೈಂದೂರು ಭಾಗದಲ್ಲಿ ಬೆಳಗ್ಗಿನಿಂದ ಸಂಜೆಯವರೆಗೂ ಉತ್ತಮ ಮಳೆಯಾಗಿದೆ. ಕೆಲವೆಡೆ ಹಾನಿಯೂ ಸಂಭವಿಸಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ಮನೆಗಳಿಗೆ ಹಾನಿ
ಪೆರ್ಡೂರಿನ ಯಶೋದಾ, ಹಿರೇಬೆಟ್ಟುವಿನ ನಯನಾ ಶೆಟ್ಟಿ, ಬೊಮ್ಮರಬೆಟ್ಟುವಿನ ಜಯಲಕ್ಷ್ಮೀ, ಬೆಳ್ಳಂಪಳ್ಳಿಯ ಅಶೋಕ್‌ ಕುಮಾರ್‌, ಲೀಲಾವತಿ ಕೊರಂಗ್ರಪಾಡಿಯ ಜಯಲಕ್ಷ್ಮೀ ಅವರ ಮನೆಗೆ ಮರ ಬಿದ್ದು ಹಾಗೂ ಗಾಳಿಯಿಂದಾಗಿ ಹಾನಿಯಾಗಿದೆ. ಜಿಲ್ಲೆಯಲ್ಲಿ ಇಂದು ಹಾಗೂ ನಾಳೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಬಜೆ ಅಣೆಕಟ್ಟಿನ ನೀರಿನ ಮಟ್ಟ 7.60 ಮೀ. ಹಾಗೂ ಕಾರ್ಕಳ ಮುಂಡ್ಲಿ ನೀರಿನ ಮಟ್ಟ 6.7ಮೀ. ಗೆ ತಲುಪಿದೆ.

ಕಟಪಾಡಿ: ವೃದ್ಧೆ ಸಹಿತ 7 ಮಂದಿ ಸ್ಥಳಾಂತರ
ಕಟಪಾಡಿ: ಉಕ್ಕೇರಿ ಹರಿಯುತ್ತಿರುವ ಪಾಪನಾಶಿನಿ ನದಿ ಪಾತ್ರದ ಏಣಗುಡ್ಡೆ ಫಾರೆಸ್ಟ್‌ ಗೇಟ್‌ ಸಮೀಪದ ಶಿವಾನಂದ ಭಜನ ಮಂದಿರದ ಬಳಿಯ ನಿವಾಸಿ ಸುರೇಶ್‌ ಮುಖಾರಿ ಅವರ ಮನೆಯ ಆವರಣಕ್ಕೆ ಜಲಾವೃತವಾದ ಕಾರಣ ವೃದ್ಧೆ ಮನೆಯ 7 ಮಂದಿ ಸದಸ್ಯರನ್ನು ದೋಣಿಯ ಮೂಲಕ ಸ್ಥಳಾಂತರಿಸಲಾಯಿತು. ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಸಭಾಂಗಣದಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಕಾಪು ಪೊಲೀಸ್‌ ಠಾಣೆಯ ಎಎಸ್‌ಐ ದಯಾ ನಂದ್‌, ಆರಕ್ಷಕ ಸಿಬಂದಿ ಮೋಹನ್‌ಚಂದ್ರ, ಸಮಾಜ ಸೇವಕ ಕಮಲಾಕ್ಷ ಸುವರ್ಣ, ಕಟಪಾಡಿ ಗ್ರಾ.ಪಂ. ಸಿಬಂದಿ ಹರೀಶ್‌ ಪಾಲ್ಗೊಂಡಿದ್ದರು.

 

 

Advertisement

Udayavani is now on Telegram. Click here to join our channel and stay updated with the latest news.

Next