ಜಗಳೂರು: ತಾಲೂಕಿನ ತುಪ್ಪದಹಳ್ಳಿ, ಬಿಳಿಚೋಡು, ಹಾಲೇಕಲ್ಲು ಸೇರಿದಂತೆ 22 ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ ಎಂದು ಸಿರಿಗೆರೆ ತರಳುಬಾಳು ಮಠದ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದರು. ತಾಲೂಕಿನ ಮುಚ್ಚುನೂರು ಗ್ರಾಮದಲ್ಲಿ ಮರುಳ ಸಿದ್ದೇಶ್ವರ ದೇವಸ್ಥಾನದವರೆಗೆ 35 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಯ ಶಂಕುಸ್ಥಾಪನೆ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ತಾಂತ್ರಿಕ ಕಾರಣ ಒಂದು ಕಡೆಯಾದರೆ ನಮ್ಮ ಕೆರೆಗಳಿಗೆ ನೀರು ತುಂಬಲಿ ಎಂಬುದಾಗಿ ಜನ ವಾಲ್ವಗಳನ್ನು ತಿರುವಿಕೊಳ್ಳುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕೆರೆಗಳಿಗೆ ನೀರು ಹರಿಯುವ ಜಾಕ್‌ವೆಲ್ ಒಂದರಲ್ಲಿ ಸಮಸ್ಯೆಯಾಗಿದ್ದು, ಈ ಕುರಿತು ಸೂಕ್ತ ನಿರ್ಣಯ ಕೈಗೊಳ್ಳಲು ಅ. 30 ರಂದು ನೀರಾವರಿ ಇಲಾಖೆಯ ಎಂ.ಡಿ. ಸಮಕ್ಷಮ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಜಗಳೂರು ತಾಲೂಕು ಬರಪಿಡಿತ ಪಟ್ಟಿಗೆ ತಡವಾಗಿ ಸೇರ್ಪಡೆಯಾಗಿದೆ. ಕೆಂದ್ರ ಸರ್ಕಾರ ಮೆಕ್ಕೆಜೋಳಕ್ಕೆ 1700 ರೂ. ಬೆಂಬಲ ಬೆಲೆ ಘೋಷಿಸಿದ್ದು, ರಾಜ್ಯ ಸರ್ಕಾರ ಕೂಡಲೇ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು. ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ತರಳು ಬಾಳು ಹುಣ್ಣಿಮೆ ನೆನಪಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಿ 52 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೊಳಿಸಲಾಗಿದೆ. ಈಗಾಗಲೇ ಸರ್ಕಾರದಿಂದ 250 ಕೋಟಿ ರೂ. ಮಂಜೂರಾಗಿದೆ. ಜನಪ್ರತಿನಿಧಿಗಳ ಕೈಲಿ ಆಗದ ಕೆಲಸವನ್ನು ಸಿರಿಗೆರೆ ಶ್ರೀಗಳು ಮಾಡಿ ತೋರಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷರಾದ ರಶ್ಮಿ ರಾಜಪ್ಪ, ಸದಸ್ಯರಾದ ಎಸ್.ಕೆ. ಮಂಜುನಾಥ್, ಉಮಾ ವೆಂಕಟೇಶ್, ಯರಬಳ್ಳಿ ಸಿದ್ದಪ್ಪ, 22 ಕೆರೆಗಳ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಡಾ|ಮಂಜುನಾಥ್‌ಗೌಡ್ರು, ತಾಲೂಕು ಬಿಜೆಪಿ ಅಧ್ಯಕ್ಷ ಡಿ.ವಿ. ನಾಗಪ್ಪ, ಭೂಸೇನಾ ನಿಗಮದ ಅಧಿಕಾರಿ ವೀರಯ್ಯ, ಚಂದ್ರಶೇಖರ್, ನಿವೃತ್ತ ಉಪನ್ಯಾಸಕ ಸುಭಾಶ್ಚಂದ್ರ ಬೋಸ್, ಇತರರು ಇದ್ದರು.