Advertisement

ತುಪ್ಪದಹಳ್ಳಿ ಕೆರೆಗೆ ಹರಿದು ಬಂದ ಭದ್ರೆ

05:05 PM Apr 06, 2022 | Team Udayavani |

ಜಗಳೂರು: ಆ ಕ್ಷಣ ನಿಜಕ್ಕೂ ವಿಸ್ಮಯ. ತುಪ್ಪದಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರು ಬೃಹತ್‌ ರೈಸಿಂಗ್‌ ಮೇನ್‌ (ಪೈಪ್‌ಲೈನ್‌) ಇಣುಕಿ ನೋಡುತ್ತಿದ್ದರು. ಇದ್ದಕ್ಕಿದ್ದಂತೆ ಶಿವನ ಜಡೆಯಿಂದ ಗಂಗೆ ಆವಿರ್ಭವಿಸಿದಂತೆ ನೀರು ಚಿಮ್ಮಿತು. ಅಲ್ಲಿ ಸೇರಿದ್ದ ಜನರ ಹರ್ಷಕ್ಕೆ ಪಾರವೇ ಇರಲಿಲ್ಲ.

Advertisement

ಈ ದೃಶ್ಯ ಕಂಡು ಬಂದಿದ್ದು ಜಗಳೂರು ತಾಲೂಕಿನ ತುಪ್ಪದಹಳ್ಳಿ ಕೆರೆಯ ಮತ್ತು ಚಟ್ನಳ್ಳಿ ಗುಡ್ಡದಲ್ಲಿ ನಿರ್ಮಿಸಲಾಗಿರುವ ಡಿಲೆವರಿ ಚೇಂಬರ್‌ನಲ್ಲಿ (ನೀರಿನ ಕಾರಂಜಿ). ಕೆಂಪು ಮಿಶ್ರಿತ ಹಾಲ್ನೋರೆಯ ತುಂಗಭದ್ರೆಯ ಆಗಮನ ಇಡೀ ಜಗಳೂರು ತಾಲೂಕಿನ ಜನರಿಗೆ ಭರವಸೆಯ ಬೆಳ್ಳಿರೇಖೆಯನ್ನು ಮೂಡಿಸಿದವು.

ಹರಪನಹಳ್ಳಿಯ ದೀಟೂರಿನ ತುಂಗಭದ್ರಾ ನದಿಯಿಂದ ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಚಟ್ನಳ್ಳಿ ಗುಡ್ಡದಲ್ಲಿ ನಿರ್ಮಿಸಲಾಗಿರುವ ಡಿಲೆವರಿ ಚೇಂಬರ್‌ನಿಂದ ನೀರು ಚಿಮ್ಮುತ್ತಿದ್ದಂತೆ ಬರಗಾಲದಿಂದ ತತ್ತರಿಸಿ ಹೋಗಿದ್ದ ಜಗಳೂರು ತಾಲೂಕಿನ ಜನರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅಲ್ಲಿಂದ 8 ಕಿಮೀ ದೂರದ ತುಪ್ಪದಹಳ್ಳಿ ಕೆರೆಗೆ ಅಳವಡಿಸಲಾಗಿರುವ ಪೈಪ್‌ಲೈನ್‌ ಮೂಲಕ ನೀರು ಬರುತ್ತಿರುವುದನ್ನೇ ಇಣುಕಿ ನೋಡುತ್ತಿದ್ದ ಜನರಿಗೆ ನೀರು ಕೆರೆ ಹರಿಯುತ್ತಿದ್ದಂತೆ ಜನರ ಮುಖದಲ್ಲಿ ಮಂದಹಾಸದ ಗೆರೆಗಳು ಮೂಡತೊಡಗಿದವು. ಸುಮಾರು ಮೂರು ವರ್ಷಗಳ ನಿರಂತರ ಪರಿಶ್ರಮದ ಫಲವಾಗಿ ಬರದ ನಾಡಿಗೆ ನೀರು ಬಂದಿರುವುದು ಮಹತ್ವದ ಮೈಲುಗಲ್ಲು.

ಏತ ನೀರಾವರಿ ಯೋಜನೆ ಹಿನ್ನೆಲೆ

2018ರಲ್ಲಿ ಜಗಳೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆಯಂದು ಕಡೆಯ ದಿನ ಜಗಳೂರು ಮತ್ತು ಭರಮಸಾಗರ ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ತರಳಬಾಳು ಜಗದ್ಗುರುಗಳು ಅಂದಿನ ಸಿಎಂ ಸಿದ್ದರಾಮಯ್ಯ ಅವರ ಗಮನ ಸೆಳೆದರು. ಬಜೆಟ್‌ ನಲ್ಲಿ ಯೋಜನೆಗೆ ಅನುದಾನ ಮೀಸಲಿರಿಸುವಂತೆ ಮಾಡಿದರು. ಸಿದ್ದರಾಮಯ್ಯನವರು ಭರಮಸಾಗರ ಮತ್ತು ಜಗಳೂರು ಎರಡು ಯೋಜನೆಗಳಿಗೆ ತಲಾ 250 ಕೋಟಿ ರೂ. ಮೀಸಲಿಟ್ಟರು. ಆಗ ಶಾಸಕರಾಗಿದ್ದ ಎಚ್‌.ಪಿ. ರಾಜೇಶ್‌ ಮತ್ತು ಹಾಲಿ ಶಾಸಕ ಎಸ್‌.ವಿ. ರಾಮಚಂದ್ರ ತಮ್ಮ ಪಕ್ಷಗಳ ಸರ್ಕಾರಗಳ ಅವಧಿಯಲ್ಲಿ ಏತ ನೀರಾವರಿ ಯೋಜನೆ ಜಾರಿಗೆ ಶ್ರಮಿಸಿದರು.

Advertisement

ಅಲ್ಲದೆ ತರಳಬಾಳು ಜಗದ್ಗುರುಗಳ ಇಚ್ಛಾಶಕ್ತಿಯ ಫಲವಾಗಿ ತುಪ್ಪದಹಳ್ಳಿ ಕೆರೆಗೆ ಭದ್ರಾ ನೀರು ಹರಿದಿದೆ. ಹರಪನಹಳ್ಳಿ ಬಳಿಯ ದೀಟೂರಿನಲ್ಲಿ ಹರಿಯುತ್ತಿರುವ ತುಂಗಭದ್ರಾನದಿಯಿಂದ ಚಟ್ನಳ್ಳಿ ಗುಡ್ಡದ ಡಿಲೆವರಿ ಚೇಂಬರ್‌ವರೆಗೆ ರೈಸಿಂಗ್‌ ಮೇನ್‌ ನ ದೂರು 32 ಕಿಮೀ. ಅಲ್ಲಿಂದ ಹರಪನಹಳ್ಳಿಯ 6 ಕೆರೆಗಳಿಗೆ ಮತ್ತು ಜಗಳೂರು ತಾಲೂಕಿನ 51 ಕೆರೆಗಳಿಗೆ ಪ್ರತ್ಯೇಕವಾಗಿ ಎರಡು ಬೃಹತ್‌ ಪೈಪ್‌ ಲೈನ್‌ ಮಾರ್ಗಗಳನ್ನು ನಿರ್ಮಿಸಲಾಗಿದೆ. ಪ್ರಸ್ತುತ ಜಗಳೂರಿನ ತುಪ್ಪದಹಳ್ಳಿ ಕೆರೆಗೆ ಮಾತ್ರ ಗುರುತ್ವಾಕರ್ಷಣೆ ಮೂಲಕ ಅಳವಡಿಸಲಾಗಿರುವ ಪೈಪ್‌ಲೈನ್‌ನಲ್ಲಿ ಪ್ರಾಯೋಗಿಕವಾಗಿ ನೀರು ಹರಿಯುತ್ತಿದೆ. ದೀಟೂರಿನ ಜಾಕ್‌ವೆಲ್‌ನಲ್ಲಿ ಅಳವಡಿಸಲಾಗಿರುವ 9 ಬೃಹತ್‌ ಮೋಟಾರ್‌ಗಳಲ್ಲಿ 2 ಮೋಟಾರ್‌ಗಳನ್ನು ಮಾತ್ರ ಪ್ರಾಯೋಗಿಕವಾಗಿ ಕಾರ್ಯ ನಿರ್ವಹಿಸುತ್ತಿವೆ.

ಇನ್ನೊಂದು ಮೋಟಾರ್‌ ಅನ್ನು ಹೆಚ್ಚುವರಿಯಾಗಿ ಮೀಸಲಿಡಲಾಗಿದೆ. ಎರಡು ಮೋಟಾರ್‌ಗಳಿಂದ ಪ್ರತಿ ಸೆಕೆಂಡ್‌ಗೆ 30 ಕ್ಯೂಸೆಕ್‌ ನೀರು ತುಪ್ಪದಹಳ್ಳಿ ಕೆರೆಗೆ ಹರಿಯುತ್ತಿದೆ. ಮಳೆಗಾಲದಲ್ಲಿ 57 ಕೆರೆಗಳಿಗೂ ನೀರು ಹರಿಯಲಿದೆ. ಸಣ್ಣಪುಟ್ಟ ಕಾಮಗಾರಿಗಳು ಬಾಕಿ ಉಳಿದಿದ್ದುಪೂರ್ಣಗೊಳಿಸಲು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಮತ್ತು ಗುತ್ತಿಗೆ ಪಡೆದಿರುವ ಉಡುಪಿ ಮೂಲಕ ಜಿ. ಶಂಕರ್‌ ಕಂಪನಿಯ ಅಧಿಕಾರಿಗಳು, ಕಾರ್ಮಿಕರು ಶ್ರಮಿಸುತ್ತಿದ್ದಾರೆ.

 -ರವಿಕುಮಾರ ಜೆ.ಓ. ತಾಳಿಕೆರೆ

 

Advertisement

Udayavani is now on Telegram. Click here to join our channel and stay updated with the latest news.

Next