ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಗೆದ್ದ ಟೀಂ ಇಂಡಿಯಾ ಸರಣಿ ಜಯಿಸಿದೆ. ಇಲ್ಲಿನ ಓಲ್ಡ್ ಟ್ರಾಫರ್ಡ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯರ ಆಲ್ ರೌಂಡ್ ಪ್ರದರ್ಶನ ಮತ್ತು ರಿಷಭ್ ಪಂತ್ ರ ಶತಕದ ನೆರವಿನಿಂದ ಭಾರತ ತಂಡ ಐದು ವಿಕೆಟ್ ಅಂತರದ ಗೆಲುವು ಸಾಧಿಸಿತು.
ಇಂಗ್ಲೆಂಡ್ ನೀಡಿದ 260 ರನ್ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಒಂದು ಹಂತದಲ್ಲಿ ಕೇವಲ 72 ರನ್ ಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಜೊತೆಗೂಡಿದ ಪಾಂಡ್ಯ ಮತ್ತು ಪಂತ್ 133 ರನ್ ಗಳ ಜೊತೆಯಾಟವಾಡಿದರು. ಭಾರತ ಐದು ವಿಕೆಟ್ ಕಳೆದುಕೊಂಡು ಇನ್ನೂ 47 ಎಸೆತ ಬಾಕಿ ಇರುವಂತೆ ಜಯ ಸಾಧಿಸಿತು.
ಬೌಲಿಂಗ್ ನಲ್ಲಿ ನಾಲ್ಕು ವಿಕೆಟ್ ಕಿತ್ತಿದ್ದ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ನಲ್ಲಿ 55 ಎಸೆತಗಳಲ್ಲಿ 71 ರನ್ ಗಳಿಸಿದರು. ಅಜೇಯರಾಗುಳಿದ ರಿಷಭ್ ಪಂತ್ 113 ಎಸೆತಗಳಲ್ಲಿ 125 ರನ್ ಬಾರಿಸಿದರು. ಈ ಇನ್ನಿಂಗ್ ನಲ್ಲಿ 16 ಬೌಂಡರಿ ಮತ್ತು ಎರಡು ಸಿಕ್ಸರ್ ಬಾರಿಸಿದ್ದರು.
ಇದನ್ನೂ ಓದಿ:‘ವಿಕ್ರಾಂತ್ ರೋಣ’ನಿಗೆ ಸಾಥ್ ನೀಡಿದ ದುಲ್ಕರ್ ಸಲ್ಮಾನ್
ಇದೇ ವೇಳೆ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ನಲ್ಲಿ ಶತಕ ಬಾರಿಸಿದ ಏಷ್ಯಾದ ಏಕೈಕ ವಿಕೆಟ್ ಕೀಪರ್ ಎಂಬ ದಾಖಲೆಯನ್ನೂ ಪಂತ್ ಬರೆದರು. ಇದರೊಂದಿಗೆ, ಏಷ್ಯಾದ ಹೊರಗೆ ಏಕದಿನ ಮಾದರಿಯಲ್ಲಿ ಶತಕ ಗಳಿಸಿದ ರಾಹುಲ್ ದ್ರಾವಿಡ್ ಮತ್ತು ಕೆಎಲ್ ರಾಹುಲ್ ಅವರಂತಹ ವಿಕೆಟ್ ಕೀಪರ್-ಬ್ಯಾಟರ್‌ಗಳ ಗುಂಪಿಗೆ ಪಂತ್ ಸೇರಿಕೊಂಡಿದ್ದಾರೆ.