Advertisement
ಚಿತ್ರರಂಗ, ರಾಜಕೀಯ, ಧಾರ್ಮಿಕ, ಕ್ರೀಡೆ ಹೀಗೆ ನಾನಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿ ಖ್ಯಾತಿ ಗಳಿಸಿದವರು ಸಾವಿರಾರು ಮಂದಿ ಇದ್ದಾರೆ. ಅದೇ ರೀತಿ ಸ್ಟಾರ್ ಪಟ್ಟ ಗಿಟ್ಟಿಸಿ ಖ್ಯಾತರಾದ ಮೇಲೆ ತಮ್ಮದೇ ಅಹಂನಿಂದಾಗಿ ಮೂಲೆ ಗುಂಪು ಆಗಿದ್ದಾರೆ. ಸಿನಿಮಾ ರಂಗ ಕೂಡಾ ಇದಕ್ಕೆ ಹೊರತಲ್ಲ. ಸ್ಟಾರ್ ನಟರ ವಿರುದ್ಧ ಯಾವುದೇ ಅವಹೇಳನ ಮಾಡುವಂತಿಲ್ಲವಾಗಿತ್ತು. ಒಂದೋ ಅಭಿಮಾನಿಗಳ ಕೆಂಗಣ್ಣಿಗೆ ಇಲ್ಲವೇ ವೈಯಕ್ತಿಕ ದ್ವೇಷಕ್ಕೆ ಗುರಿಯಾಗಬೇಕಾಗುತ್ತಿತ್ತು.
Related Articles
Advertisement
ಸುಮಾರು 1940-50ರ ದಶಕದಲ್ಲಿ ನಾಯಕ ನಟರಿಗಿಂತ ಕೃಷ್ಣನ್ ಬಹುಬೇಡಿಕೆಯ ಹಾಗೂ ಅತ್ಯಧಿಕ ಸಂಭಾವನೆ ಪಡೆಯುವ ಸ್ಟಾರ್ ಹಾಸ್ಯನಟರಾಗಿದ್ದರು.
ಚಿತ್ರರಂಗದ ಘಟಾನುಘಟಿಗಳು “ಈ” ಪತ್ರಕರ್ತನಿಗೆ ಹೆದರುತ್ತಿದ್ದರು; ಕೊಲೆ ಕೇಸ್ ನಲ್ಲಿ ಬಂಧಿಯಾದ ಸ್ಟಾರ್ ನಟರು!
ಚಿತ್ರರಂಗದಲ್ಲಿ ಸ್ಟಾರ್ ನಟರ ಅಬ್ಬರ ಒಂದೆಡೆಯಾದರೆ, ಮತ್ತೊಂದೆಡೆ 1943ರಲ್ಲಿ ಮದ್ರಾಸ್ ಪ್ರಾಂತ್ಯದಲ್ಲಿ ಸಿನಿಮಾ ಪತ್ರಕರ್ತರಾಗಿ ಸಿಎನ್ ಲಕ್ಷ್ಮೀಕಾಂತನ್ ಖ್ಯಾತರಾಗಿದ್ದರು. ಸಿನಿಮಾ ತೂಥು ಎಂಬ ವಾರಪತ್ರಿಕೆಯ ಮೂಲಕ ಸಿಎನ್ ಅಂದಿನ ಸ್ಟಾರ್ ನಟ, ನಟಿಯರ ಖಾಸಗಿ ಬದುಕಿನ ಬಗ್ಗೆ ಬರೆಯುತ್ತಿದ್ದ ಅಂಕಣ ಜನಪ್ರಿಯವಾಗಿತ್ತು. ಸಿಎನ್ ಲೇಖನ ಪ್ರಕಟವಾಗದಂತೆ ಬಾಯಿಮುಚ್ಚಿಸಲು ಘಟಾನುಘಟಿ ಸ್ಟಾರ್ ನಟರು ಭಾರೀ ಹಣವನ್ನೂ ಸಂದಾಯ ಮಾಡುತ್ತಿದ್ದರಂತೆ. ಆದರೆ ಅದಕ್ಕೆ ಜಗ್ಗದ ಸಿಎನ್ ನಿರ್ಭಿಡೆಯಿಂದ ಲೇಖನ ಪ್ರಕಟಿಸುತ್ತಿದ್ದರಂತೆ!
ಏತನ್ಮಧ್ಯೆ ಗಾಸಿಫ್ ನಿಂದ ಕಂಗೆಟ್ಟಿದ್ದ ಅಂದಿನ ಖ್ಯಾತ ನಟರಾದ ಎಂಕೆ ತ್ಯಾಗರಾಜ ಭಾಗವತರ್, ಎನ್ ಎಸ್ ಕೃಷ್ಣನ್ ಹಾಗೂ ನಿರ್ದೇಶಕ ಶ್ರೀರಾಮುಲು ರೆಡ್ಡಿ ಮದ್ರಾಸ್ ಗವರ್ನರ್ ಅವರ ಬಳಿ ಹೋಗಿ, ಲಕ್ಷ್ಮೀಕಾಂತನ್ ಪತ್ರಿಕೆ ಪರವಾನಗಿಯನ್ನು ರದ್ದುಮಾಡುವಂತೆ ಮನವಿ ಕೊಟ್ಟುಬಿಟ್ಟಿದ್ದರು. ಇದರಿಂದಾಗಿ ಸಿನಿಮಾ ತೂಥು ಪತ್ರಿಕೆಯ ಲೈಸೆನ್ಸ್ ರದ್ದಾಗಿತ್ತು. ಪಟ್ಟು ಬಿಡದ ಲಕ್ಷ್ಮೀಕಾಂತನ್ ನಕಲಿ ದಾಖಲೆ ಸೃಷ್ಟಿಸಿ ಕೆಲವು ತಿಂಗಳು ಪತ್ರಿಕೆ ನಡೆಸಿದರೂ ಕೂಡಾ ಕೊನೆಗೆ ಬಲವಂತವಾಗಿ ಪತ್ರಿಕಾ ಕಚೇರಿಯನ್ನು ಮುಚ್ಚಿಸಿದ್ದರು. ತದನಂತರ ಲಕ್ಷ್ಮೀಕಾಂತನ್ “ಹಿಂದೂ ನೇಷನ್” ಹೆಸರಿನ ಪತ್ರಿಕೆ ಆರಂಭಿಸಿ ಮತ್ತೆ ಸಿನಿಮಾರಂಗದ ದಿಗ್ಗಜರಾದ ತ್ಯಾಗರಾಜ ಭಾಗವತರ್, ಕೃಷ್ಣನ್ ಸೇರಿದಂತೆ ಪ್ರಮುಖ ನಟ, ನಟಿಯರ ಸ್ಕ್ಯಾಂಡಲ್ ಬಗ್ಗೆ ಬರೆಯತೊಡಗಿದ್ದರು. ಈ ತಂತ್ರಗಾರಿಕೆಯಿಂದ ಅಪಾರ ಪ್ರಮಾಣದ ಹಣಕಾಸು, ಡಿವಿಡೆಂಡ್ಸ್ ಪಡೆದ ಲಕ್ಷ್ಮೀಕಾಂತನ್ ಸ್ವಂತ ಪ್ರಿಂಟಿಂಗ್ ಪ್ರೆಸ್ ಖರೀದಿಸಿಬಿಟ್ಟಿದ್ದ!
ಲಕ್ಷ್ಮೀಕಾಂತ್ ಮೇಲೆ ಹಲ್ಲೆ, ನಿಗೂಢ ಸಾವು…ಘಟಾನುಘಟಿ ಸ್ಟಾರ್ ನಟರ ಬಂಧನ!
ಏತನ್ಮಧ್ಯೆ 1944ರ ನವೆಂಬರ್ 8ರಂದು ಮದ್ರಾಸ್ ನ ಪುರುಸವಾಕಂ ಬಳಿ ಕೆಲವರು ಲಕ್ಷ್ಮೀಕಾಂತನ್ ಮೇಲೆ ದಾಳಿ ನಡೆಸಿ ಚೂರಿಯಿಂದ ಇರಿದು ಬಿಟ್ಟಿದ್ದರು. ಕೂಡಲೇ ಅವರನ್ನು ಜನರಲ್ ಆಸ್ಪತ್ರೆಗೆ ದಾಖಲಿಸಿದ್ದರು. ಲಕ್ಷ್ಮೀಕಾಂತನ್ ಗೆ ಹೇಳಿಕೊಳ್ಳುವಂತಹ ಗಂಭೀರ ಗಾಯವೇನೂ ಆಗಿರಲಿಲ್ಲವಾಗಿತ್ತು. ಪೊಲೀಸರ ತನಿಖೆ ವೇಳೆಯೂ ಯಾರ ಹೆಸರನ್ನೂ ಲಕ್ಷ್ಮೀಕಾಂತನ್ ಉಲ್ಲೇಖಿಸಿರಲಿಲ್ಲವಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ “ಮುಂದಿನ ಸಂಚಿಕೆಯಲ್ಲಿ ಬೋಟ್ ಮೇಲ್ ಮರ್ಡರ್” ಕೇಸ್ (ಇದು ಮದ್ರಾಸ್ ಮತ್ತು ಧನುಷ್ಕೋಡಿ ನಡುವೆ ಓಡಾಡುತ್ತಿದ್ದ ರೈಲಿನ ಹೆಸರು ಬೋಟ್ ಮೇಲ್) ನಲ್ಲಿ ಶಾಮೀಲಾದವರ ಬಣ್ಣ ಬಯಲು ಮಾಡುವುದಾಗಿ ಲೇಖನ ಬರೆದುಬಿಟ್ಟಿದ್ದರು.
ವಿಪರ್ಯಾಸ ಎಂಬಂತೆ ನವೆಂಬರ್ 9ರಂದು ಆಸ್ಪತ್ರೆಯಲ್ಲಿ ಲಕ್ಷ್ಮೀಕಾಂತನ್ ದಿಢೀರನೆ ನಿಗೂಢವಾಗಿ ಸಾವನ್ನಪ್ಪಿದ್ದರು. ಇದು ಕೊಲೆ ಎಂಬುದಾಗಿ ಲಕ್ಷ್ಮೀಕಾಂತನ್ ಬಾಡಿಗಾರ್ಡ್ ನೀಡಿದ್ದ ಹೇಳಿಕೆಯನ್ನು ಆಧರಿಸಿ ಪೊಲೀಸರು, ಭಾಗವತರ್, ಕೃಷ್ಣನ್, ರೆಡ್ಡಿ ಸೇರಿದಂತೆ 8 ಮಂದಿಯನ್ನು ಬಂಧಿಸಿದ್ದರು. ಸ್ಟಾರ್ ನಟರ ಬಂಧನದ ಸುದ್ದಿ ಕೇಳಿ ಅಭಿಮಾನಿಗಳು, ಸಿನಿಮಾರಂಗ ಆಘಾತಕ್ಕೊಳಗಾಗಿತ್ತು.
ಅಂದು ಈ ಘಟಾನುಘಟಿ ಆರೋಪಿ ನಟರ ಪರವಾಗಿ ಪ್ರತಿಷ್ಠಿತ ವಕೀಲರಾದ ವಿಟಿ ರಂಗಸ್ವಾಮಿ ಅಯ್ಯಂಗಾರ್, ರಾಜ್ ಗೋಪಾಲಾಚಾರಿ(ರಾಜಾಜಿ), ಬಿಟಿ ಸುಂದರಾಜನ್, ಗೋವಿಂದ್ ಸ್ವಾಮಿನಾಥನ್, ಶ್ರೀನಿವಾಸ್ ಗೋಪಾಲ್, ಕೆಎಂ ಮುನ್ಶಿ ವಾದಿಸಿದ್ದರು. ದೀರ್ಘ ವಿಚಾರಣೆಯ ನಂತರ ಮದ್ರಾಸ್ ಪ್ರೆಸಿಡೆನ್ಸಿ ಮ್ಯಾಜಿಸ್ಟ್ರೇಟ್ ಜ್ಯೂರಿ ಎಂಕೆ ಭಾಗವತರ್, ಕೃಷ್ಣನ್ ಹಾಗೂ ಉಳಿದ ನಾಲ್ವರು ದೋಷಿ ಎಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು ಕೂಡಾ ಅಲ್ಲಿಯೂ ಅರ್ಜಿ ವಜಾಗೊಂಡಿತ್ತು. ಕೊನೆಗೆ ಅಂದಿನ ಲಂಡನ್ ನ ಪ್ರೈವೆ ಕೌನ್ಸಿಲ್ (1948ರವರೆಗೆ ಹೈಕೋರ್ಟ್ ನಂತರ ಮೇಲ್ಮನವಿ ಸಲ್ಲಿಸಲು ಲಂಡನ್ ನಲ್ಲಿದ್ದ ಬ್ರಿಟನ್ ರಾಣಿ ಅಧೀನದ ಖಾಸಗಿ ಕೌನ್ಸಿಲ್ ಮೊರೆ ಹೋಗಬೇಕಾಗಿತ್ತು) ಕದತಟ್ಟಿದ್ದರು. ಅಲ್ಲಿ ಬ್ರಿಟಿಷ್ ಬ್ಯಾರಿಸ್ಟರ್ ಡಿಎನ್ ಪ್ರಿಟ್ಟ್ ಕೃಷ್ಣನ್, ಭಾಗವತರ್ ಸೇರಿ ಉಳಿದವರ ಪರ ವಾದಿಸಿದ್ದರು. ತದನಂತರ ಪ್ರೈವೈ ಕೌನ್ಸಿಲ್ ಪ್ರಕರಣವನ್ನು ಮರು ವಿಚಾರಣೆ ನಡೆಸುವಂತೆ ಆದೇಶಿಸಿತ್ತು. ಈ ವಿಚಾರಣೆಯಲ್ಲಿ ಎಂಕೆಟಿ, ಎನ್ ಎಸ್ ಕೆ ಖುಲಾಸೆಗೊಂಡಿದ್ದರು. ಆ ಹೊತ್ತಿಗೆ ಬರೋಬ್ಬರಿ 30 ತಿಂಗಳ ಕಾಲ ಜೈಲುವಾಸ ಅನುಭವಿಸಿಬಿಟ್ಟಿದ್ದರು. ಇಷ್ಟೆಲ್ಲಾ ಆದರೂ ಲಕ್ಷ್ಮೀಕಾಂತನ್ ಕೊಲೆ ರಹಸ್ಯ ಬಯಲಾಗಲೇ ಇಲ್ಲ. ರಾಜಕೀಯ ಮೇಲಾಟದಿಂದ ಈ ಸ್ಟಾರ್ ನಟರು ಜೈಲು ಸೇರುವಂತಾಗಿತ್ತು!
ಜೈಲಿನಿಂದ ಬಿಡುಗಡೆಯಾದ ಮೇಲೆ ಭಾಗವತರ್ ಮತ್ತೆ ಸ್ಟಾರ್ ವ್ಯಾಲ್ಯೂಗೆ ಮರಳಲು ಸಾಧ್ಯವಾಗಲೇ ಇಲ್ಲ. ಎನ್ ಎಸ್ ಕೃಷ್ಣನ್ ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡಾ ಮೊದಲಿನ ವರ್ಚಸ್ಸು ಕಳೆಗುಂದಿತ್ತು. ಜೈಲುವಾಸ, ಲಂಡನ್ ಕೋರ್ಟ್, ಘಟಾನುಘಟಿ ವಕೀಲರ ಖರ್ಚು, ವೆಚ್ಚಗಳಿಂದ ಸಂಪತ್ತು ನಷ್ಟವಾಗಿತ್ತು. ಈ ಎಲ್ಲಾ ಏಳು ಬೀಳುಗಳಲ್ಲಿಯೇ ಎನ್ ಎಸ್ ಕೆ 1957ರ ಆಗಸ್ಟ್ 30ರಂದು ಮದ್ರಾಸ್ ಜನರಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.!