Advertisement

“ಗಲಭೆ ಬಿಜೆಪಿಗರ ಕೃತ್ಯ’

09:26 AM Dec 13, 2017 | |

ಬೆಂಗಳೂರು: ಹೊನ್ನಾವರದ ಪರೇಶ್‌ ಮೇಸ್ತ ಸಾವಿನ ಬಳಿಕ ಉತ್ತರ ಕನ್ನಡ ಜಿಲ್ಲೆ ಕುಮಟಾ ಮತ್ತು ಶಿರಸಿಯಲ್ಲಿ ನಡೆದ
ಗಲಭೆಗೆ ಪೊಲೀಸ್‌ ವೈಫ‌ಲ್ಯ ಕಾರಣವಲ್ಲ. ಇದು ಚುನಾವಣೆ ಉದ್ದೇಶದಿಂದ ಬಿಜೆಪಿಯವರು ಎಸಗುತ್ತಿರುವ ಕೃತ್ಯ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

Advertisement

ಪರೇಶ್‌ ಮೇಸ್ತಾ ಸಾವಿಗೆ ಕಾರಣ ತಿಳಿಯುವ ಮುನ್ನವೇ ಅದೊಂದು ಕೊಲೆ ಎಂದು ಸುಳ್ಳು ಹೇಳುವುದರ ಜತೆಗೆ ಅನಗತ್ಯ ಊಹಾಪೋಹಗಳನ್ನು ಹಬ್ಬಿಸಿ ಬಿಜೆಪಿಯವರು ಉತ್ತರ ಕನ್ನಡ ಭಾಗದಲ್ಲಿ ಗಲಭೆಗೆ ಕಾರಣರಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. 

ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕೃತ್ಯಗಳನ್ನು ಕೆಲವು ಹಿರಿಯ 
ಬಿಜೆಪಿ ಮುಖಂಡರು (ಐದಾರು ಮಂದಿ) ಉದ್ದೇಶ ಪೂರ್ವಕವಾಗಿ ಮಾಡಿಸುತ್ತಿದ್ದಾರೆ. ಅದಕ್ಕಾಗಿ ಹೊರಗಿನಿಂದ ಜನ ಕರೆಸಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ. ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. 

ಪರೇಶ್‌ ಸಾವಿಗೆ ಕಾರಣ ಗೊತ್ತಿಲ್ಲ: ಪರೇಶ್‌ ಬರ್ಬರವಾಗಿ ಕೊಲೆ ಮಾಡಲಾಗಿದೆ. ಆತನ ಕೈಯ್ಯಲ್ಲಿದ್ದ ಮಚ್ಚೆಯನ್ನು ಚಾಕುವಿನಿಂದ ಕೆತ್ತಿದ್ದಾರೆ. ಮುಖಕ್ಕೆ ಬಿಸಿ ಡಾಂಬರು ಸುರಿದಿದ್ದಾರೆ, ಆತನ ಬಟ್ಟೆಗಳನ್ನು ಬದಲಿಸಿದ್ದಾರೆ ಎಂಬ ಬಿಜೆಪಿ ಆರೋಪಗಳನ್ನು ತಳ್ಳಿ ಹಾಕಿದ ಸಚಿವರು, ಸುಳ್ಳು ಹೇಳುವುದೇ ಬಿಜೆಪಿಯವರ ಜಾಯಮಾನ. ಇದು ಹತ್ಯೆಯೇ? ಆತ್ಮಹತ್ಯೆಯೇ ಎಂಬುದು ಪೋಸ್ಟ್‌ಮಾರ್ಟಂ ವರದಿ ಬಂದ ಮೇಲಷ್ಟೇ ಗೊತ್ತಾಗುತ್ತದೆ. ಪೋಸ್ಟ್‌ಮಾರ್ಟಂ ವರದಿ ಬರಲು ಇನ್ನೂ ಒಂದು ವಾರ ಬೇಕು. ಆದರೆ, ಅದಕ್ಕೆ ಮುನ್ನವೇ
ಬಿಜೆಪಿಯವರು ತಾವೇ ವೈದ್ಯರು ಎನ್ನುವಂತೆ ಹತ್ಯೆಯ ಷರಾ ಬರೆದಿದ್ದಾರೆ ಎಂದು ಆರೋಪಿಸಿದರು.

ಪರೇಶ್‌ ಮೇಸ್ತಾ ಸಾವಿನ ಕುರಿತು ಫೊರೆನ್ಸಿಕ್‌ ವೈದ್ಯರ ವರದಿ ಬಿಡುಗಡೆ ಮಾಡಿದ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡ ಅವರು, ಈ ಪ್ರಕರಣದಲ್ಲಿ ಬಿಜೆಪಿಯವರು ಸುಳ್ಳು ಹೇಳುತ್ತಾ ಜನರನ್ನು ಪ್ರಚೋದಿಸುತ್ತಿರುವುದರಿಂದ ಜನತೆಗೆ ಸತ್ಯಾಂಶ ತಿಳಿಸಲು ವರದಿ ಬಿಡುಗಡೆ ಮಾಡಲಾಗಿದೆ ಎಂದರು.

Advertisement

ಪರೇಶ್‌ ಸಾವು ಸಣ್ಣ ವಿಚಾರ. ಹರಿಯಾಣದಂತೆ 37 ಜನ ಸತ್ತಿದ್ದರೆ ಅದು ಗಂಭೀರ ವಿಚಾರವಾಗುತ್ತಿತ್ತು. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಬಹುದಿತ್ತು. ಆದರೆ, ಬಿಜೆಪಿಯವರೇ ಗಲಭೆ ಎಬ್ಬಿಸಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದರೆ ಅವರಿಗೆ ಏನು ಹೇಳಬೇಕು?
ರಾಮಲಿಂಗಾರೆಡ್ಡಿ, ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next