Advertisement

ಬಟ್ಟಗುಡ್ಡದಲ್ಲಿ ಬಲ ತಿರುವು ನಿಷೇಧ; ಸವಾರರಿಗೆ ಸಮಸ್ಯೆ 

11:59 AM Nov 08, 2018 | |

ಮಹಾನಗರ: ಬಿಜೈ ಮಾರುಕಟ್ಟೆ ರಸ್ತೆಯ ಮೂಲಕ ಸರ್ಕಿಟ್ ಹೌಸ್‌ ಭಾಗಕ್ಕೆ ತೆರಳುವ ರಸ್ತೆಯ ಬಟ್ಟಗುಡ್ಡದಿಂದ ಕದ್ರಿಗೆ ತೆರಳುವ ಜಾಗದಲ್ಲಿ ಪ್ರಾಯೋಗಿಕವಾಗಿ ಬಲ ತಿರುವನ್ನು ನಗರ ಪೊಲೀಸರು ನಿಷೇಧಿಸಿರುವುದು ವಾಹನ ಸವಾರರಿಗೆ ಸಮಸ್ಯೆ ಸೃಷ್ಟಿಸಿದೆ.

Advertisement

ಇಲ್ಲಿ ಬಲ ತಿರುವಿಗೆ ನಿಷೇಧ ವಿಧಿಸಿರುವ ಹಿನ್ನೆಲೆಯಲ್ಲಿ ಬಿಜೈ ಮಾರುಕಟ್ಟೆ ಭಾಗದಿಂದ ಕದ್ರಿ ಭಾಗಕ್ಕೆ ತೆರಳುವವರು ಅನಾಯಸವಾಗಿ ಸರ್ಕಿಟ್ ಹೌಸ್‌ ಮುಂಭಾಗದವರೆಗೆ ಬಂದು ಅಲ್ಲಿ ಬಲಕ್ಕೆ ತಿರುಗಿ ವಾಪಾಸ್‌ ತೆರಳುವ ಪ್ರಮೇಯ ಎದುರಾಗಿದೆ. ನಿಧಾನವಾಗಿ ವಾಹನ ತಿರುಗಿಸಲು ಸಾಧ್ಯವಿರುವ ರಸ್ತೆಯಲ್ಲಿ ಅಸಮರ್ಪಕ ರೀತಿಯಲ್ಲಿ ಒಂದು ಭಾಗಕ್ಕೆ ತಿರುವನ್ನು ನಿಷೇಧ ಮಾಡಿರುವ ಕ್ರಮಕ್ಕೆ ಪ್ರಯಾಣಿಕರು ಅಪಸ್ವರ ವ್ಯಕ್ತಪಡಿಸಿದ್ದಾರೆ. 

ಕೆಪಿಟಿ ಭಾಗದಿಂದ ಬಿಜೈ ಮಾರುಕಟ್ಟೆ ಭಾಗಕ್ಕೆ ಬರುವ ವಾಹನಗಳಿಗೆ ಸಮಸ್ಯೆ ಆಗುತ್ತಿದೆ ಹಾಗೂ ಅಪಘಾತ ನಡೆಯುವ ಸಾಧ್ಯತೆಯಿರುವ ಕಾರಣದಿಂದ ಬಲಭಾಗದ ತಿರುವನ್ನು ನಿಷೇಧಿಸಲಾಗಿದೆ. ಸದ್ಯ ಕದ್ರಿ ಭಾಗದ ಒಳರಸ್ತೆಯಿಂದ ಬಂದು ಸರ್ಕಿಟ್ ಹೌಸ್‌ ಕಡೆಗೆ ತೆರಳುವವರು ಇದೇ ಬಟ್ಟಗುಡ್ಡದಲ್ಲಿ ಬಲಕ್ಕೆ ತಿರುಗಲು ಅವಕಾಶ ನೀಡಿದ್ದಾರೆ. ಆದರೆ, ಕದ್ರಿ ಭಾಗಕ್ಕೆ ಮಾತ್ರ ತಿರುಗಲು ಪ್ರಾಯೋಗಿಕ ನಿಷೇಧ ಹೇರಲಾಗಿರುವುದು ಯಾವ ನ್ಯಾಯ ? ವಾಹನಗಳ ಒತ್ತಡ ಅಥವಾ ಅಪಘಾತ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಕ್ರಮವಾದರೂ ಒಂದು ಭಾಗದಿಂದ ಹೋಗುವವರಿಗೆ ಮಾತ್ರ ಅವಕಾಶ ನೀಡಿ, ಮತ್ತೊಂದು  ಭಾಗದಿಂದ ಹೋಗುವವರಿಗೆ ಅವಕಾಶ ನೀಡದಿರುವುದು ಸಮಂಜಸವೇ? ಎಂಬುದು ಪ್ರಯಾಣಿಕರ ಪ್ರಶ್ನೆ.

ಪ್ರಾಯೋಗಿಕ ಕ್ರಮ ಜಾರಿ
ಈ ಮಧ್ಯೆ ಮಂಗಳವಾರದಿಂದ ಪ್ರಾಯೋಗಿಕವಾಗಿ ಈ ಕ್ರಮ ಜಾರಿಯಲ್ಲಿದೆ. ಬ್ಯಾರಿಕೇಡ್‌ನ‌ಲ್ಲಿ ಸಣ್ಣದಾಗಿ ಈ ಬಗ್ಗೆ ಪೋಸ್ಟರ್‌ ಅಂಟಿಸಲಾಗಿದೆ. ಆದರೆ, ವಾಹನ ಸವಾರರಿಗೆ ಇದು ಗಮನಕ್ಕೆ ಬಾರದೆ ಬಹುತೇಕ ವಾಹನದವರು ಇಲ್ಲಿ ಎಂದಿನಂತೆಯೇ ಬಲಭಾಗಕ್ಕೆ ತಿರುಗಿ ಕದ್ರಿ ಕಡೆಗೆ ತೆರಳುತ್ತಿದ್ದಾರೆ. ಟ್ರಾಫಿಕ್‌ ಪೊಲೀ ಸರು ಇಲ್ಲಿ ಇಲ್ಲದಿರುವುದರಿಂದ, ಸ್ಪಷ್ಟ ಸೂಚನೆ ಇಲ್ಲಿ ಗೊತ್ತಾಗದ ಹಿನ್ನೆಲೆಯಲ್ಲಿ ಹಾಗೂ ಸಾರ್ವಜನಿಕರಿಗೆ ಮಾಹಿತಿ ಇಲ್ಲದ ಕಾರಣದಿಂದ ಟ್ರಾಫಿಕ್‌ ಪೊಲೀಸರ ಪ್ರಾಯೋಗಿಕ ಈ ನಿಯಮವು ಪೂರ್ಣ ಮಟ್ಟದಲ್ಲಿ ಜಾರಿಯೂ ಆಗಿಲ್ಲ.

ಈ ಬಗ್ಗೆ ಟ್ರಾಫಿಕ್‌ ಪೊಲೀಸ್‌ ಅಧಿಕಾರಿಗಳನ್ನು ವಿಚಾರಿಸಿದಾಗ, ‘ಬಟ್ಟಗುಡ್ಡ ಭಾಗದಲ್ಲಿ ವಾಹನಗಳ ಒತ್ತಡ ಜಾಸ್ತಿ ಇರುವ ಕಾರಣದಿಂದ ಪ್ರಾಯೋಗಿಕವಾಗಿ ಈ ನಿಯಮ ಜಾರಿಗೊಳಿಸಲಾಗಿದೆ. ಮುಂದೆ ಅಂತಿಮ ತೀರ್ಮಾನಗಳನ್ನು ಕೈಗೊಳ್ಳಲಾಗುವುದು’ ಎನ್ನುತ್ತಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next