Advertisement
ಆದರೆ, ಕಂಡಕ್ಟರ್‌ಗಳ ಕೆಲಸ ಮಕ್ಕಳಾಟದಷ್ಟು ಸುಲಭವಲ್ಲ. ಪ್ರತಿ ಪ್ರಯಾಣವೂ ಅವರಿಗೆ ಅದೆಷ್ಟೋ ಅನುಭವಗಳನ್ನು ಕಟ್ಟಿಕೊಡುತ್ತಿರುತ್ತದೆ. ಕೆಲವು ಸಂತೋಷ ಕೊಡಬಹುದು, ಕೆಲವು ನೋವು ಕೊಡಬಹುದು. ನೆನಪಿರಬೇಕಲ್ಲ? ಬಿಸಿ ಬಿಸಿ ಸುದ್ದಿಯಾಗಿ ಮೊನ್ನೆ ಎಲ್ಲಾ ಮಾಧ್ಯಮಗಳಲ್ಲೂ ಸದ್ದು ಮಾಡಿದ ಕೋಳಿಗಳಿಗೂ ಟಿಕೆಟ್ ನೀಡಿದ ಮಹಿಳಾ ಕಂಡಕ್ಟರ್ ಎಷ್ಟೋ ದಿನಗಳವರೆಗೆ ಎಲ್ಲರ ಗಮನ ತನ್ನೆಡೆ ಸೆಳೆದಿದ್ದಂತೂ ದಿಟ. ಆ ಎರಡು ಕೋಳಿಗಳ ಫೋಟೋ, ಟಿಕೆಟ್ಟಿನ ಹಿಂದೆ ಬರೆದಿದ್ದ “ಕೋಳಿಗಳಿಗೂ ಟಿಕೆಟ್ ನೀಡಲಾಗಿದೆ’ ಬರಹ, ಟಿಕೆಟ್ ನೀಡಿದ ಮಹಿಳಾ ಕಂಡಕ್ಟರ್ ಬಗ್ಗೆ ಪರ-ವಿರೋಧ ಚರ್ಚೆಗಳು ಕಾವೇರಿದ್ದನ್ನು ಯಾರೂ ಮರೆತಿರಲಿಕ್ಕಿಲ್ಲ. ಪಾಪ! ಆಕೆಯದೇನು ತಪ್ಪು , ರೂಲ್ಸ್ ಪ್ರಕಾರ ಕೆಲಸ ಮಾಡಿ¨ªಾಳೆ ಎಂದು ಮೇಲಧಿಕಾರಿಗಳು ಸಮರ್ಥಿಸಿಕೊಂಡ ಮೇಲೆಯೇ ಸ್ವಲ್ಪ ಮಟ್ಟಿಗೆ ಕಾವು ತಣ್ಣಗಾಯಿತು ಎನ್ನಬಹುದು.
Related Articles
Advertisement
ಇನ್ನು ಒಳಗೆ ಕುಳಿತುಕೊಳ್ಳಲು ಸ್ಥಳವಿದ್ದರೂ ಫುಟ್‌ಬೋರ್ಡ್‌ನ ಮೇಲೆ ನೇತಾಡುವ ಪಡ್ಡೆ ಹೈಕಳನ್ನು ಒಳಗೆ ಹಾಕುವ ಸಾಹಸ ಕಂಡಕ್ಟರನದೇ. ಹಾಗೆಯೇ, ಬಸ್ ಹತ್ತಿ ಟಿಕೆಟ್ ತೆಗೆದುಕೊಳ್ಳದೆ ಮಳ್ಳರಂತೆ ಹಾಗೇ ಕುಳಿತುಕೊಳ್ಳುವವರು, ನಿದ್ರಿಸುವಂತೆ ನಟಿಸುವವರು, “ಎಲ್ಲೂ ಸೀಟಿಲ್ಲ, ಸುಮ್ಮನೆ ಹತ್ತಿಸಿಕೊಂಡೆಯಲ್ಲ, ಈಗ ಸೀಟು ಮಾಡಿ ಕೊಡು, ಇಲ್ಲಾ ಕೆಳಗಿಳಿಸು’ ಎಂದು ಕಂಡಕ್ಟರ್‌ನ ಮೇಲೆ ರೋಪು ಹಾಕುವವರು, ಪ್ರಯಾಣದ ಅರ್ಧಭಾಗ ಟಿಕೆಟ್ ಕೊಡುತ್ತ ಓಡಾಡುತ್ತಲೇ ಇರುವ ಕಂಡಕ್ಟರ್‌ನ ಕೆಲಸ ನೋಡುತ್ತಿದ್ದರೂ ಅವರಿಗೆ ಮೀಸಲಾಗಿರುವ ಸೀಟಿನಲ್ಲೇ ರಾಜಾರೋಷವಾಗಿ ಕುಳಿತುಕೊಳ್ಳುವವರು, ಐವತ್ತು ರೂಪಾಯಿಯ ಪ್ರಯಾಣಕ್ಕೆ ಐದುನೂರರ ನೋಟನ್ನು ಕೊಟ್ಟು, “ಚಿಲ್ಲರೆ ಇಲ್ಲದಿದ್ದರೆ ನೀನೆಂಥ ಕಂಡಕ್ಟರಯ್ನಾ?’ ಎಂದು ಹೀಯಾಳಿಸುವವರು, ಒಂದೇ, ಎರಡೇ- ಹೀಗೆ ನಾನಾ ಘಟನೆಗಳಿಗೆ ಕಂಡಕ್ಟರ್‌ಗಳು ಪ್ರತಿದಿನ ಸಾಕ್ಷಿಯಾಗುತ್ತಿರುತ್ತಾರೆ. ಕೆಲವೊಮ್ಮೆ ಮಕ್ಕಳ ವಯಸ್ಸನ್ನು ಇರುವುದಕ್ಕಿಂತ ಕಡಿಮೆಯಾಗಿ ಸುಳ್ಳು ಹೇಳಿ ಅರ್ಧ ಟಿಕೆಟ್ಟು ಮಾಡಿಸುವವರು, ರಶ್ ಇದ್ದ ಬಸ್ಸಿನಲ್ಲಿ ಮಕ್ಕಳನ್ನು ಸೀಟಿನ ಕೆಳಗೆ ಅವಿತಿಟ್ಟು ಟಿಕೆಟ್ಟಿನ ದುಡ್ಡು ಉಳಿಸುವವರು, ಇವರ ಜೊತೆಗೆ ಕಂಡಕ್ಟರ್‌ಗಳು ಹೋರಾಡಬೇಕು! ಮಹಿಳಾ ಕಂಡಕ್ಟರುಗಳ ಅನುಭವಗಳೇ ಬೇರೆ. ಪರಿಸ್ಥಿತಿಯನ್ನು ಸಂಯಮದಿಂದ ನಿವಾರಿಸಿಕೊಂಡು ಬದುಕು ಮತ್ತು ಬಸ್ಸುಗಳೆಂಬ ಎರಡು ತೇರುಗಳನ್ನು ನಿಭಾಯಿಸಬೇಕು.
ಟಿಕೆಟಿನ ಮಂದಿ ಒಂದು ಕಡೆಯಾದರೆ, ಪಾಸ್ ಹೊಂದಿರುವವರು ಮತ್ತೂಂದೆಡೆ. ನೌಕರಿಗೆ, ಶಾಲೆಗೆ, ಪ್ರತಿದಿನ ಪ್ರಯಾಣಿಸುವವರು ಕಂಡಕ್ಟರಿಗೆ ಪರಿಚಿತರಾಗಿಬಿಡುತ್ತಾರೆ. ಒಬ್ಬರಿಗೊಬ್ಬರು ವಿಶ್ವಾಸದಿಂದ ಕಷ್ಟ-ಸುಖ ಕೇಳುತ್ತ, ಹೇಳುತ್ತ ಪ್ರಯಾಣದ ಆಯಾಸ, ಹಾದಿ ಸವೆದದ್ದು ಗೊತ್ತಾಗುವುದೇ ಇಲ್ಲ. ಹಿಂದಿನ ಕಾಲದಲ್ಲಿ ಇದ್ದ ಹಾಗೆ ಚಿಕ್ಕ ಸೂಟ್‌ಕೇಸಿನ ಹಾಗಿದ್ದ ಡಬ್ಬಿಯಲ್ಲಿ ಕೆಂಪು, ಹಸಿರು, ನೀಲಿ, ಹಳದಿ- ಹೀಗೆ ಬೇರೆ, ಬೇರೆ ಬಣ್ಣಗಳ, ಬೇರೆ ಬೇರೆ ದರಗಳ ಟಿಕೆಟ್ಟುಗಳನ್ನು ಹರಿದು ಅದರ ಮೇಲೆ ಬಾಲ್‌ಪೆನ್ನಿನಿಂದ ತೂತು ಹೊಡೆದು ಕೊಡುವುದಿತ್ತು. ಕಂಡಕ್ಟರ್ ಅಲ್ಲದೆ ಸಾಮಾನ್ಯ ಮನುಷ್ಯನಿಗೆ ಅದರ ತಲೆಬುಡ ಅರ್ಥವಾಗುವುದು ಸ್ವಲ್ಪ ಕಷ್ಟವೇ ಆಗಿತ್ತು. ಅವು ಕಳೆದು, ಉದುರಿಹೋಗುವ ಸಾಧ್ಯತೆಗಳು ಹೆಚ್ಚಿತ್ತು. ಆದರೆ ಈಗ ಸ್ಮಾರ್ಟ್ ಮೆಶೀನ್‌ಗಳ ಆಗಮನವಾಗಿ ಟಿಕೆಟ್ಟಿನ ದರ, ಪ್ರಯಾಣಿಸುವ ದೂರ, ಪ್ರಯಾಣಿಕರ ಸಂಖ್ಯೆ, ಎಲ್ಲಿಂದೆಲ್ಲಿಗೆ ಪ್ರಯಾಣ ಎಲ್ಲವನ್ನೂ ಒಂದೇ ಟಿಕೆಟ್ಟಿನಲ್ಲಿ ನಿಖರವಾಗಿ ನಮೂದಿಸಿ ಕೊಡುವುದರಿಂದ ಕಂಡಕ್ಟರ್ ಹಾಗೂ ಪ್ರಯಾಣಿಕರಿಬ್ಬರಿಗೂ ಅನುಕೂಲವಾಗಿದೆ.
ಈಗಂತೂ ಇ-ಟಿಕೆಟ್ಟಿನ ಕಾಲ. ದೂರದ ಊರುಗಳಿಗೆ, ರಾತ್ರಿ ಹೊರಡುವ ಬಸ್ಸುಗಳಿಗೆ ಮೊದಲೇ ಆನ್‌ಲೈನ್‌ನಲ್ಲಿ ಬುಕ್ ಮಾಡಿಬಿಡುವುದರಿಂದ ಅದರ ಮೆಸೇಜ್ ನೇರವಾಗಿ ಪ್ರಯಾಣಿಕರ ಮೊಬೈಲಿಗೇ ಬಂದುಬಿಡುತ್ತದೆ. ಹಾಗಾಗಿ, ಅಂಥ ಬಸ್ಸುಗಳ ಕಂಡಕ್ಟರುಗಳಿಗೆ ಟಿಕೆಟ್ ಹರಿಯುವ ಗೊಡವೆಯೇ ಇಲ್ಲ.
ನಳಿನಿ ಟಿ. ಭೀಮಪ್ಪ