ಒಂದೂರಲ್ಲಿ ಹಣವಂತ ಎಂಬ ವ್ಯಕ್ತಿಯೊಬ್ಬನಿದ್ದ. ಹೆಸರಿಗೆ ತಕ್ಕಂತೆ, ಅವನು ಶ್ರೀಮಂತ ಮತ್ತು ಗುಣವಂತನೂ ಆಗಿದ್ದ. ಊರಲ್ಲಿ ಯಾರಿಗೆ ಏನೇ ಸಮಸ್ಯೆಯಾದರೂ ಸಹಾಯ ಮಾಡುತ್ತಿದ್ದ. ಹೀಗಾಗಿ, ಊರಲ್ಲಿ ಅವನಿಗೆ ಒಳ್ಳೆಯ ಹೆಸರಿತ್ತು. ಅವನು ಎಷ್ಟೇ ಕೀರ್ತಿವಂತನಾಗಿದ್ದರೂ, ಅವನ ಮನೆಯವರಿಗೆ ಅದು ಇಷ್ಟವಾಗುತ್ತಿರಲಿಲ್ಲ. ಹಣವಂತನು, ಹಿಂದೆಮುಂದೆ ಯೋಚಿಸದೇ, ದೇಹೀ ಅಂದವರಿಗೆಲ್ಲಾ ನೆರವಾಗುತ್ತಿದ್ದುದರ ಬಗ್ಗೆ ಅವರಿಗೆ ಆಕ್ಷೇಪಣೆಯಿತ್ತು.
ಕಷ್ಟದಲ್ಲಿರುವವರಿಗೆ ಹಣ ನೀಡಿ, ಆಗ ಅದಕ್ಕೆ ಬೆಲೆ. ನೀರನ್ನು ಚೆಲ್ಲಿದಂತೆ ಹಣ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ, ಅದು ವ್ಯರ್ಥ ಮಾಡಿದಂತೆಯೇ ಎನ್ನುವುದು ಮನೆಯವರ ಅಭಿಪ್ರಾಯವಾಗಿತ್ತು. ಆದರೆ ಹಣವಂತ ಅವರ ಮಾತನ್ನು ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ. ಒಂದು ದಿನ ಹಣವಂತ ಊರು ಸುತ್ತಲು ಹೊರಟ. ಅವನಿಗೆ ಅಚ್ಚರಿ ಕಾದಿತ್ತು. ತಾನು ಇಷ್ಟೆಲ್ಲಾ ದಾನ ಧರ್ಮ ಮಾಡುತ್ತಿದ್ದರೂ, ಊರಿನ ಸ್ಥಿತಿ ಬದಲಾಗಿರಲಿಲ್ಲ, ಶಾಲೆಯ ಹೆಂಚು ಮುರಿದಿರುವುದನ್ನು ಗಮನಿಸಿದ. ಕೆಲ ತಿಂಗಳುಗಳ ಹಿಂದಷ್ಟೇ ಶಾಲೆಯ ಚಾವಣಿ ರಿಪೇರಿಗೆಂದು ದೇಣಿಗೆ ಕೊಟ್ಟಿದ್ದು ನೆನಪಾಯಿತು.
ಆದೇ ರೀತಿ ದೇವಸ್ಥಾನದ ಜೀರ್ಣೋದಾಟಛಿರ, ರಸ್ತೆ ದುರಸ್ತಿ, ಪುಟ್ಟಪ್ಪನ ಮಗಳ ಕಾಲೇಜು ಫೀಸು… ಹೀಗೆ, ಹತ್ತಾರು ಸಂಗತಿಗಳು ಕಣ್ಮುಂದೆ ಬಂದವು. ಅವೆಲ್ಲವನ್ನೂ ಹಣವಂತ ಒಂದೊಂದಾಗಿ ವಿಚಾರಿಸಿಕೊಂಡು ಬಂದ. ಆತ ಅಂದುಕೊಂಡಿದ್ದಂತೆ ಯಾವ ಕೆಲಸವೂ ಆಗಿರಲಿಲ್ಲ. ಈ ಕುರಿತು ಯೋಚಿಸುತ್ತಾ ಬರುತ್ತಿದ್ದಾಗ, ಒಂದು ವಿಷಯವನ್ನು ಹಣವಂತ ಗಮನಿಸಿದ. ಊರಿನಲ್ಲಿ ಹೊಸ ಬ್ಯೂಟಿ ಪಾರ್ಲರ್, ಜೋರಾಗಿಯೇ ಕಟ್ಟಲ್ಪಟ್ಟಿತ್ತು. ಅಲ್ಲಿ ನೂಕು ನುಗ್ಗಲಿತ್ತು. ಜೂಜಿನ ಕೇಂದ್ರಗಳು ಹೊಸದಾಗಿ ತೆರೆಯಲ್ಪಟ್ಟಿದ್ದವು. ಅಲ್ಲೂ ನೂಕು ನುಗ್ಗಲಿತ್ತು.
ಮದ್ಯದಂಗಡಿಗಳ ಮುಂದಂತೂ ವಿಪರೀತ ಜನ. ಹಣವಂತನಿಗೆ, ಇದೆಲ್ಲವೂ ತನ್ನಿಂದಲೇ ಆಗಿದ್ದು ಎನ್ನುವುದು ಅರಿವಾಯಿತು. ಅವನಿಗೆ, ಮನೆಯವರ ಮಾತಿನ ಹಿಂದಿದ್ದ ಮರ್ಮ ಈಗ ಅರ್ಥವಾಗಿತ್ತು. ಅಂದಿನಿಂದ, ನೆರವು ಕೇಳಿ ಬಂದವರ ಹಿನ್ನೆಲೆಯನ್ನು ವಿಚಾರಿಸಿ, ಅವರಿಗೆ ನೆರವು ಬೇಕಿದೆ ಎನ್ನುವುದನ್ನು ಖಚಿತಪಡಿಸಿಕೊಂಡ ನಂತರವೇ ಸಹಾಯ ಮಾಡುತ್ತಿದ್ದ. ಆನಂತರ, ಅವರ ಮನೆಗಳಿಗೆ ಭೇಟಿ, ಹಣದ ಸದ್ವಿನಿಯೋಗ ಆಗಿದೆಯೋ ಇಲ್ಲವೋ ಎಂದು ವಿಚಾರಿಸುತ್ತಲೂ ಇದ್ದ. ಸದುಪಯೋಗ ಆಗುವ ಹಣ ಯಾವತ್ತೂ ವ್ಯರ್ಥವಲ್ಲ, ಅದು ಒಂದಲ್ಲ ಒಂದು ರೂಪದಲ್ಲಿ ಹಿಂದಿರುಗಿ ಬರುತ್ತದೆ.