ಮುಂಬೈ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ತನಿಖೆ ನಡೆಸಲು ಬಿಹಾರ ಪೊಲೀಸರಿಗೆ ಯಾವುದೇ ಅಧಿಕಾರ ವ್ಯಾಪ್ತಿ ಇಲ್ಲ. ಅಲ್ಲದೇ ನನ್ನ ಕಕ್ಷಿದಾರಳು ಕಾನೂನು ಬಾಹಿರ ತನಿಖೆಗೆ ಒಪ್ಪುವುದಿಲ್ಲ ಎಂದು ನಟಿ ರಿಯಾ ಚಕ್ರವರ್ತಿ ಪರ ವಕೀಲ ಸತೀಶ್ ಮಾನೆಶಿಂಧೆ ಮಂಗಳವಾರ (ಆಗಸ್ಟ್ 18, 2020) ತಿಳಿಸಿದ್ದಾರೆ.
ಕಾನೂನಿನ ಪ್ರಕಾರ, ಬಿಹಾರ ಪೊಲೀಸರು ಶೂನ್ಯ ಎಫ್ ಐಆರ್ ಅನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂಬೈ ಪೊಲೀಸರಿಗೆ ವರ್ಗಾಯಿಸಬೇಕಿತ್ತು. ಈ ಪ್ರಕರಣದಲ್ಲಿ ಬಿಹಾರ ಪೊಲೀಸರಿಗೆ ಯಾವುದೇ ಕಾನೂನು ವ್ಯಾಪ್ತಿ ಇಲ್ಲ. ಈ ನಿಟ್ಟಿನಲ್ಲಿ ರಿಯಾ ಕಾನೂನು ಬಾಹಿರ ತನಿಖೆಗೆ ರಿಯಾ ಹಾಜರಾಗುತ್ತಿಲ್ಲ ಎಂದು ಹೇಳಿದರು.
ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಘಟನೆ ನಡೆದು 40 ದಿನಗಳ ಬಳಿಕ ದೂರು ಬಂದ ದಿನವೇ ಬಿಹಾರ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದರು. ಅಲ್ಲದೇ ತನಿಖೆಗೆ ಸಹಕರಿಸುವಂತೆ ನನ್ನ ಕಕ್ಷಿದಾರಳಿಗೆ ಬಿಹಾರ ಪೊಲೀಸರು ಯಾವುದೇ ನೋಟಿಸ್ ಕೂಡಾ ನೀಡಿಲ್ಲ. ಹಲವಾರು ಪತ್ರಿಕೆಗಳು ವಕೀಲರ ಹೇಳಿಕೆಯನ್ನು ಆಧರಿಸಿ ಬಿಹಾರ ಪೊಲೀಸರು ಎಫ್ ಐಆರ್ ದಾಖಲಿಸಲು ಹಿಂಜರಿಯುತ್ತಿದ್ದಾರೆ ಎಂದು ವರದಿ ಮಾಡಿದ್ದವು. ಆದರೆ ಬಿಹಾರದ ರಾಜಕೀಯದ ಒತ್ತಡದ ಮೂಲಕ ಎಫ್ ಐಆರ್ ದಾಖಲಿಸಿರುವುದಾಗಿ ದೂರಿದ್ದಾರೆ.
ರಿಯಾ ಚಕ್ರವರ್ತಿ (ಕಕ್ಷಿದಾರಳು) ಈವರೆಗೆ ಯಾವುದೇ ರೀತಿಯ ತನಿಖೆಯಿಂದ ನುಣುಚಿಕೊಂಡಿಲ್ಲ. ಆದರೆ ಏಜೆನ್ಸಿ ನಡೆಸುವ ನ್ಯಾಯ ಹಾಗೂ ನಿಷ್ಪಕ್ಷಪಾತ ತನಿಖೆಗೆ ಸಹಕಾರ ನೀಡಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಲ್ಲಿ ಆಗಸ್ಟ್ 11ರಂದು ಕೊನೆಯ ವಿಚಾರಣೆ ಸಂದರ್ಭದಲ್ಲಿ ವಕೀಲ ಮಾನೆಶಿಂಧೆ ಅವರು, ಸುಶಾಂತ್ ಪ್ರಕರಣದಲ್ಲಿ ಸತ್ಯಕ್ಕಿಂತ ಹೆಚ್ಚಾಗಿ ರಾಜಕೀಯ ವಿಚಾರವೇ ಮೇಲುಗೈ ಸಾಧಿಸಿದೆ ಎಂದು ವಾದಿಸಿದ್ದರು. ಬಿಹಾರದಲ್ಲಿ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಹಲವಾರು ರಾಜಕಾರಣಿಗಳು ಈ ಪ್ರಕರಣದ ಮೂಲಕ ಲಾಭ ಪಡೆದುಕೊಂಡಿರುವುದಾಗಿ ಪ್ರತಿಪಾದಿಸಿದ್ದರು.
ಆದಿತ್ಯ ಠಾಕ್ರೆ ವಿಚಾರದ ಬಗ್ಗೆ ಹೇಳಿದ್ದಿಷ್ಟು:
ಪ್ರಕರಣದಲ್ಲಿ ಶಿವಸೇನಾ ಯುವ ಮುಖಂಡ, ಸಚಿವ ಆದಿತ್ಯ ಠಾಕ್ರೆ ಕುರಿತ ಆರೋಪದ ಬಗ್ಗೆ ಮಾತನಾಡಿದ ಅವರು, ರಿಯಾಗೆ ಆದಿತ್ಯ ಬಗ್ಗೆ ಗೊತ್ತಿಲ್ಲ. ಈವರೆಗೆ ಭೇಟಿಯೂ ಆಗಿಲ್ಲ. ದೂರವಾಣಿಯಲ್ಲಿಯೂ ಕೂಡಾ ರಿಯಾ ಆದಿತ್ಯ ಜತೆ ಮಾತನಾಡಿಲ್ಲ. ಆದರೆ ಆದಿತ್ಯ ಶಿವಸೇನಾ ಮುಖಂಡ ಎಂಬುದನ್ನು ಕೇಳಿದ್ದರು ಎಂದು ವಕೀಲ ಮಾನೆಶಿಂಧೆ ತಿಳಿಸಿದ್ದಾರೆ.