ಮುಂಬಯಿ: ಆಸ್ಕರ್ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ (A.R.Rahman) ತಮ್ಮ 29 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ್ದಾರೆ.
ಪತಿ ಹಾಗೂ ಪತ್ನಿ ನಡುವೆ ಪ್ರೀತಿ ಇದ್ದರೂ ಇಬ್ಬರ ನಡುವೆ ಸುಧಾರಿಸಲಾಗದಷ್ಟು ಬಿರುಕು ಮೂಡಿದೆ. ಹೀಗಾಗಿ, ಪತಿ ರೆಹಮಾನ್ರಿಂದ ದೂರ ಇರಲು ಕಕ್ಷಿದಾರರರಾಗಿರುವ ಸಾಯಿರಾ ಬಾನು ಬಯಸಿದ್ದಾರೆ ಎಂದು ವಿಚ್ಛೇದನದ ಬಗ್ಗೆ ವಕೀಲರು ಹೇಳಿಕೆ ಬಿಡುಗಡೆ ಮಾಡಿದ್ದರು.
ಇದಾದ ಕೆಲವೇ ಗಂಟೆಗಳಲ್ಲಿ ಎ.ಆರ್.ರೆಹಮಾನ್ ತಂಡದಲ್ಲಿ ಸದಸ್ಯೆ ಆಗಿರುವ ಗಿಟಾರ್ ವಾದಕಿ (Bass Guitar Player) ಮೋಹಿನಿ ಡೇ (Mohini Dey) ಅವರು ತಮ್ಮ ಪತಿ, ಸಂಗೀತ ಸಂಯೋಜಕ ಮಾರ್ಕ್ ಹಾರ್ಟ್ಸುಚ್ನಿಂದ (Mark Hartsuch) ದೂರವಾಗಿರುವುದಾಗಿ ಘೋಷಣೆ ಮಾಡಿದ್ದರು.
ಎ.ಆರ್.ರೆಹಮಾನ್ ಅವರ ವಿಚ್ಚೇದನ ಬಳಿಕ ಮೋಹಿನಿ ಅವರು ತಮ್ಮ ಪತಿಗೆ ವಿಚ್ಚೇದನ ನೀಡಿದ ವಿಚಾರ ಹಲವು ಚರ್ಚೆಗೆ ಕಾರಣವಾಗಿದೆ. ಇಬ್ಬರು ಒಂದೇ ಸಮಯದಲ್ಲಿ ವಿಚ್ಚೇದನ ನೀಡಿದರ ಹಿಂದೆ ಏನಾದರೂ ಕಾರಣವಿರಬಹುದೆಂದು ಅನೇಕರು ಕಮೆಂಟ್ ಮೂಲಕ ಹೇಳಿದ್ದಾರೆ.
ಇದೀಗ ಈ ಎಲ್ಲಾ ಗೊಂದಲಗಳಿಗೆ ರೆಹಮಾನ್, ಸಾಯಿರ ಅವರ ವಕೀಲೆ ವಂದನಾ ಶಾ ಅವರು ಸ್ಪಷ್ಟನೆ ನೀಡಿದ್ದಾರೆ.
ಮೋಹಿನಿ ಡೇ ಅವರ ವಿಚ್ಚೇದನದ ವಿಚಾರಕ್ಕೂ ಹಾಗೂ ರೆಹಮಾನ್ ಅವರ ವಿಚ್ಚೇದನ ವಿಚಾರಕ್ಕೂ ಯಾವುದೇ ರೀತಿಯ ಲಿಂಕ್ ಇಲ್ಲ. ಸಾಯಿರಾ ಮತ್ತು ರೆಹಮಾನ್ ಈ ನಿರ್ಧಾರವನ್ನು ತಾವೇ ತೆಗೆದುಕೊಂಡಿದ್ದಾರೆ. ಇದರ ಮೇಲೆ ಯಾರು ಕೂಡ ಪ್ರಭಾವ ಬೀರಿಲ್ಲ. ಇದು ಪರಸ್ಪರ ಒಪ್ಪಿಗೆಯಿಂದ ಆದ ವಿಚ್ಚೇದನ ಆಗಿರುವುದರಿಂದ ಯಾವುದೇ ಪರಿಹಾರ ಅಥವಾ ಕಾನೂನು ಪರಿಹಾರದ ಬಗ್ಗೆ ಇದುವರೆಗೆ ನಿರ್ಧಾರವಾಗಿಲ್ಲವೆಂದು ವಕೀಲೆ ಹೇಳಿದ್ದಾರೆ.
1995 ಮಾ.12ರಂದು ರೆಹಮಾನ್ – ಸಾಯಿರ ವಿವಾಹವಾಗಿತ್ತು. ಅವರಿಗೆ ಖತೀಜಾ, ರಹೀಮಾ, ಅಮೀನ್ ಎಂಬ ಮೂವರು ಮಕ್ಕಳಿದ್ದಾರೆ.