ಚಂಡೀಗಡ:ಪಂಜಾಬ್‌ನ ಅಮೃತಸರದ ಸಮೀಪದಲ್ಲಿ ನಡೆದ 1857ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೆಚ್ಚೆದೆಯಿಂದ ಹೋರಾಡಿದ್ದ 282 ಯೋಧರ ಅಸ್ಥಿಪಂಜರಗಳು ಪತ್ತೆಯಾಗಿವೆ.
ಇವು ಬ್ರಿಟಿಷರ ವಿರುದ್ಧ ಭಾರತೀಯರು ನಡೆಸಿದ ಮೊದಲ ಸ್ವಾತಂತ್ರ್ಯ ಹೋರಾಟದಲ್ಲಿ ಮಡಿದ ಯೋಧರ ಅಸ್ಥಿಪಂಜರಗಳಾಗಿದ್ದು, ಅಜ್ನಾಲಾದಲ್ಲಿನ ಧಾರ್ಮಿಕ ಕಟ್ಟಡವೊಂದರ ಕೆಳಗೆ ಪತ್ತೆಯಾದ ಬಾವಿಯಲ್ಲಿ ಸಿಕ್ಕಿವೆ ಎಂದು ಪಂಜಾಬ್ ವಿವಿಯ ಮಾನವಶಾಸ್ತ್ರ ವಿಭಾಗದ ಸಹಾಯಕ ಪ್ರೊಫೆಸರ್ ಡಾ. ಜೆ.ಎಸ್. ಸೆಹ್ರಾವತ್ ತಿಳಿಸಿದ್ದಾರೆ.
ಹಂದಿಮಾಂಸ ಮತ್ತು ದನದ ಮಾಂಸ ಸವರಿರುವಂಥ ಕಾಟ್ರಿಡ್ಜ್ ಗಳ ಬಳಕೆಯ ವಿರುದ್ಧ ಈ ಯೋಧರು ದಂಗೆಯೆದ್ದಿದ್ದರು ಎಂದು ಅಧ್ಯಯನಗಳು ತಿಳಿಸಿವೆ. ಆ ಅವಧಿಯಲ್ಲಿ ದೊರೆತಿರುವ ನಾಣ್ಯಗಳು, ಪದಕಗಳು, ಡಿಎನ್‌ಎ ಅಧ್ಯಯನ, ಧಾತುಗಳ ವಿಶ್ಲೇಷಣೆ, ಮಾನವಶಾಸ್ತ್ರ, ರೇಡಿಯೋ-ಕಾರ್ಬನ್ ಡೇಟಿಂಗ್ ಕೂಡ ಇದೇ ವಿಚಾರವನ್ನು ತಿಳಿಸಿದೆ ಎಂದೂ ಸೆಹ್ರಾವತ್ ಹೇಳಿದ್ದಾರೆ.
ಇತಿಹಾಸಕಾರರು 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮವನ್ನು “ಸಿಪಾಯಿ ದಂಗೆ’ ಎಂದೂ ಕರೆಯುತ್ತಾರೆ. ಬ್ರಿಟಿಷ್ ಇಂಡಿಯನ್ ಸೇನೆಗೆ ಆಗ ಭಾರತದ ಹಲವು ಸಿಪಾಯಿಗಳನ್ನು ನೇಮಕ ಮಾಡಲಾಗಿತ್ತು. ಅವರಿಗೆ ಹಂದಿ ಮತ್ತು ದನದ ಕೊಬ್ಬನ್ನು ಸವರಿರುವಂಥ ತೋಪುಗಳನ್ನು ನೀಡಲಾಗಿತ್ತು. ಧಾರ್ಮಿಕ ನಂಬಿಕೆಗಳ ಹಿನ್ನೆಲೆಯಲ್ಲಿ ಅವರು ಇದನ್ನು ವಿರೋಧಿಸಿದ್ದರು. ಈ ಪ್ರತಿಭಟನೆಯು ಒಂದು ಹಂತದಲ್ಲಿ ಸ್ಫೋಟಗೊಂಡಿದ್ದೇ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡಿತ್ತು. ಆ ಅವಧಿಯಲ್ಲಿ ಮಡಿದ 282 ಯೋಧರ ಅವಶೇಷಗಳೇ ಈಗ ಬಾವಿಯೊಂದರಲ್ಲಿ ಪತ್ತೆಯಾಗಿದೆ ಎಂಬ ಮಾಹಿತಿಯನ್ನು ಸೆಹ್ರಾವತ್ ನೀಡಿದ್ದಾರೆ.