Advertisement

ಸಾಮೂಹಿಕ ವಿವಾಹ ಬಡವರಿಗೆ ಸಂಜೀವಿನಿ

01:26 PM Feb 25, 2017 | |

ಹರಪನಹಳ್ಳಿ: ಜೀವನ ನಡೆಸುವುದೇ ಕಷ್ಟಕರವಾದ ಇಂದಿನ ದಿನಗಳಲ್ಲಿ ಮದುವೆ ಎಂಬುದು ಅದರಲ್ಲೂ ಹೆಣ್ಣು ಹೆತ್ತ ತಂದೆ, ತಾಯಂದಿರಗೆ ನೀಗಲಾರದ ನೋವು. ಇಂತಹ ಪರಿಸ್ಥಿತಿಯಲ್ಲಿ ಶ್ರೀಗಳು ಹಮ್ಮಿಕೊಂಡಿರುವ ಸಾಮೂಹಿಕ ವಿವಾಹ ಕಾರ್ಯ ಬಡವರಿಗೆ ಸಂಜೀವಿನಿ ಇದ್ದಂತೆ ಎಂದು ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷ ವರಸದ್ಯೋಜಾತ ಸ್ವಾಮೀಜಿ ಹೇಳಿದರು. 

Advertisement

ತಾಲೂಕಿನ ನೀಲಗುಂದ ಗ್ರಾಮದ ಗುಡ್ಡದ ವಿರಕ್ತಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಶ್ರೀಮಠದ ಜಂಗಮ ಜಾತ್ರೆ, ಹಿರಿಯ ಶ್ರೀಗಳ ಪುಣ್ಯಸ್ಮರಣೆ, ಜೀವನ ದರ್ಶನ ಮತ್ತು ಸರಳ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀವರ್ಚನ ನೀಡಿದರು. ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಇಂದು ಸಾಮೂಹಿಕ ವಿವಾಹಗಳ ಅವಶ್ಯಕತೆ ಇದ್ದು, ಇವು ದುಂದು ವೆಚ್ಚಗಳಿಗೆ ಕಡಿವಾಣವನ್ನು ಹಾಕುತ್ತವೆ.

ದಾಂಪತ್ಯ ಜೀವಕ್ಕೆ ಕಾಲಿಡುತ್ತಿರುವ, ಸತಿ-ಪತಿಗಳು ಜೀವನದಲ್ಲಿ ಬರುವ ಕಷ್ಟ, ಸುಖಗಳನ್ನು ಸಮನಾಗಿ ಹಂಚಿಕೊಂಡು ಬಾಳಬೇಕು ಎಂದರು. ನೀಲಗುಂದ ಗುಡ್ಡದ ವಿರಕ್ತ ಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಮಾತನಾಡಿ, ಕಳೆದ 30 ವರ್ಷದಿಂದ  ಮಠದಲ್ಲಿ ಸಾಮೂಹಿಕ ವಿವಾಹ ನಡೆಯುತ್ತವೆ. ಬಡವರಿಗೆ ಮಕ್ಕಳ ಮದುವೆ ಮಾಡುವುದು ಕಷ್ಟಕರ. ಅಂತವರಿಗೆ ಸರ್ವ ಧರ್ಮ ಸಾಮೂಹಿಕ ವಿವಾಹ ಅನುಕೂಲವಲ್ಲದೆ, ದುಂದು ವೆಚ್ಚಕ್ಕೆ ಕಡಿವಾಣ ಹಾಕಿದಂತಾಗುತ್ತದೆ.

ಮಠದಲ್ಲಿ ವಿವಾಹವಾದವರಿಗೆ ನಾವೇ ಖುದ್ದಾಗಿ ಕಚೇರಿಗಳಿಗೆ ಅಲೆದಾಡಿ ವಿವಾಹ ಪ್ರೋತ್ಸಾಹ ಧನ ಕೊಡಸಿದ ಪ್ರತಿಫಲವಾಗಿ ಪ್ರತಿವರ್ಷ ವಧು-ವರರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು. ಹೂವಿನ ಹಡಗಲಿ ಗವಿಸಿದ್ದೇಶ್ವರ ಮಠದ ಡಾ| ಹಿರಿಯ ಶಾಂತವೀರ ಸ್ವಾಮೀಜಿ ಮಾತನಾಡಿ, ಶ್ರೀಗಳು ಪ್ರತಿವರ್ಷ ಸರ್ವ ಧರ್ಮದ ಸಾಮೂಹಿಕ ವಿವಾಹಗಳನ್ನು ನಡೆಸಿ ಹೊಸ ಮನ್ವಂತರಕ್ಕೆ ಸಾಕ್ಷಿಯಾಗಿದೆ. 

ಸತಿ-ಪತಿಗಳು ಪರಸ್ಪರ ಅರಿತು ಸಮರಸದ ಬದುಕನ್ನು ಸಾಗಿಸಿದಾಗ ಸಂಸಾರ ರಥವು ಸರಾಗವಾಗಿ ಸಾಗುತ್ತದೆ ಎಂದರು. ಕುಕ್ಕನೂರಿನ ಅನ್ನದಾನೇಶ್ವರ ಮಠದ ಮಹಾದೇವ ಸ್ವಾಮೀಜಿ ಮಾತನಾಡಿದರು.ಸಾಮೂಹಿಕ ವಿವಾಹದಲ್ಲಿ 32 ಜೋಡಿಗಳು ದಾಂಪತ್ಯಕ್ಕೆ ಕಾಲಿಟ್ಟರು. ಜಿಪಂ ಸದಸ್ಯ ಪರುಶುರಾಮಪ್ಪ, ತಾಪಂ ಸದಸ್ಯ ಹುಲಿಕಟ್ಟಿ ಚಂದ್ರಪ್ಪ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಬೇಲೂರು ಸಿದ್ದೇಶ್‌, ಎಪಿಎಂಸಿ ನಿರ್ದೇಶಕ ಬಿ.ಚಂದ್ರಶೇಕರ್‌, ತಿಮ್ಮೇಶ್‌, ಭೋವಿ ತಿರುಪತಿ, ಚೌಡಪ್ಪ ಮತ್ತಿತರರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next