Advertisement

Sutturu: ಮೋದಿ ನೇತೃತ್ವದಲ್ಲಿ ಸಾಂಸ್ಕೃತಿಕ ಪರಂಪರೆ ಪುನರುತ್ಥಾನ: ಅಮಿತ್‌ ಶಾ

11:28 PM Feb 11, 2024 | Pranav MS |

ಮೈಸೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಪುನರ್‌ ನಿರ್ಮಾಣ ಮಾಡುವ ಕೆಲಸವಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.

Advertisement

ಸುತ್ತೂರು ಕ್ಷೇತ್ರ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಅಂಗವಾಗಿ ರವಿವಾರ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ಸೇವಾರ್ಥದ ಅತಿಥಿಗೃಹ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಪ್ರಧಾನಿ ಮೋದಿಯವರು ಭಾರತೀಯ ಸಂಸ್ಕೃತಿಯನ್ನು ಪುನರುತ್ಥಾನಗೊಳಿಸುತ್ತಿದ್ದಾರೆ. ಕೋಟಿ ಕೋಟಿ ಹಿಂದೂಗಳ ಸಂಕಲ್ಪವಾಗಿದ್ದ ಶ್ರೀರಾಮ ಮಂದಿರ ನಿರ್ಮಾಣ, ಕಾಶಿ ವಿಶ್ವನಾಥ, ಮಹಾಕಾಳ ಕಾರಿಡಾರ್‌ ಸ್ಥಾಪನೆಯೊಂದಿಗೆ, ಕೇದಾರ ಬದರಿನಾಥ್‌ ಪುನರುತ್ಥಾನಕ್ಕೆ ಶ್ರಮಿಸುವ ಮೂಲಕ ದೇಶದ ಸಾಂಸ್ಕೃತಿಕ ಪುನರುಜ್ಜೀವನಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಮಾತ್ರವಲ್ಲ, ಮೋದಿ ಅವರು ಸಂಸ್ಕೃತಿ, ಆಯುರ್ವೇದ, ಯೋಗ ಉಳಿವಿಗಾಗಿಯೂ ಕೊಡುಗೆ ನೀಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಅಯೋಧ್ಯೆಯಲ್ಲಿ ಶಾಖಾ ಮಠ

ಅಯೋಧ್ಯೆಯಲ್ಲಿ ಸುತ್ತೂರು ಶಾಖಾ ಮಠ ಸ್ಥಾಪಿಸಲು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮುಂದಾಗಿರುವುದು ಅಭಿನಂದನೀಯ. ಶಿವಾತ್ರೀಶ್ವರರಿಂದ ದೇಶಿಕೇಂದ್ರ ಸ್ವಾಮೀಜಿ ವರೆಗೆ 24 ಮಠಾಧೀಶರೂ ನಿಸ್ವಾರ್ಥ ಸೇವೆ ಮಾಡಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀಗಳು ಮಕ್ಕಳಿಗೆ ಶಿಕ್ಷಣ ನೀಡಿ ಬೆಳಕಾಗಿದ್ದಾರೆ. ಅವರನ್ನು ನೆನಪಿಸಿಕೊಳ್ಳುತ್ತಲೇ, ಜಗಜ್ಯೋತಿ ಬಸವೇಶ್ವರರನ್ನೂ ಸ್ಮರಿಸುವೆ. ಅವರು ಕೇವಲ ಒಂದು ವರ್ಗಕ್ಕೆ ಸೀಮಿತವಾಗದೆ, ವಚನಗಳ ಮೂಲಕ ಕೋಟಿ ಕೋಟಿ ಜನರಿಗೆ ಪ್ರೇರಣೆಯಾಗಿದ್ದಾರೆ ಎಂದು ಸ್ಮರಿಸಿದರು.

Advertisement

 ಶೈಕ್ಷಣಿಕ ಕೊಡುಗೆ ಅಪಾರ

ಸುತ್ತೂರು ಕ್ಷೇತ್ರದ ನಿಸ್ವಾರ್ಥ ಸೇವೆಯಿಂದ 350ಕ್ಕೂ ಹೆಚ್ಚು ಜೆಎಸ್‌ಎಸ್‌ ಸಂಸ್ಥೆಗಳಿದ್ದು, 20 ಸಾವಿರಕ್ಕೂ ಹೆಚ್ಚು ಸಿಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಕ್ಷ ವಿದ್ಯಾರ್ಥಿಗಳು ಇವರ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ, ಇದೆಲ್ಲವನ್ನೂ ಮೀರಿ ಅಂಗವಿಕಲರಿಗೂ ಪಾಲಿಟೆಕ್ನಿಕ್‌ ತೆರೆದಿರುವುದು ಪುಣ್ಯದ ಕೆಲಸ ಎಂದು ಶ್ಲಾ ಸಿದರು.  ಸುತ್ತೂರು ಮಠದ ಪ್ರತಿಯೊಂದು ಸೇವಾ ಕಾರ್ಯಗಳನ್ನು ಸಮಾಜ ಹತ್ತಿರದಿಂದ ಕಡಿದೆ. ಆ ಕಾರಣದಿಂದಾಗಿ ಬಿಜೆಪಿ ಸದಾ ನಿಮ್ಮೊಂದಿಗೆ ಇರಲಿದೆ. ನಿಮ್ಮ ಕೊಡುಗೆಯನ್ನು ಕಾರ್ಯಕರ್ತರು ಸದಾಕಾಲವೂ ಸ್ಮರಿಸುತ್ತಾ ಜನರ ಮಧ್ಯೆ ಹೋಗುತ್ತೇವೆ. ಕೊನೆಯವರೆಗೂ ಈ ಸೇವೆಯನ್ನು ಕೊಂಡಾಡುತ್ತೇವೆ ಎಂದು ಸೂಚ್ಯವಾಗಿ ತಿಳಿಸಿದರು.

ಶಾ ಗಟ್ಟಿ ನಿರ್ಧಾರ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ದೇಶದ ಅಭಿವೃದ್ಧಿಗೆ ಅಮಿತ್‌ ಶಾ ಸಂಕಲ್ಪ ಮಾಡಿದ್ದು, ತಮ್ಮ ಗಟ್ಟಿ ನಿರ್ಧಾರಗಳಿಂದ ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್‌ 370 ರದ್ದು ಆಗಿರುವುದು ಇದಕ್ಕೆ ಉದಾಹರಣೆ. ಹಾಗಾಗಿಯೇ ಇವರನ್ನು ಸರ್ದಾರ್‌ ವಲ್ಲಭಬಾಯಿ ಪಟೇಲರಂತೆ ಉಕ್ಕಿನ ಮನುಷ್ಯ ಎಂದರೆ ತಪ್ಪಾಗಲಾರದು ಎಂದು ಹೇಳಿದರು.

ಸಂತೋಷದ ಸಂಗತಿ

ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರು ಕ್ಷೇತ್ರಕ್ಕೆ ಬಂದ ಸಂದರ್ಭದಲ್ಲಿ ಅತಿಥಿ ಗೃಹ ನಿರ್ಮಾಣ ಮಾಡುವ ನಿರ್ಧಾರ ಮಾಡಿ, ಕಲ್ಪಿಸಿಕೊಟ್ಟಿದ್ದಾರೆ. ಕಳೆದ ವರ್ಷವೇ ಉದ್ಘಾಟನೆ ಆಗಬೇಕಿತ್ತು. ದೈವೆಚ್ಚೆಯಂತೆ ಇಂದು ಅವರ ಹಸ್ತದಿಂದಲೇ ಉದ್ಘಾಟನೆ ಆಗಿರುವುದು ಸಂತೋಷದ ಸಂಗತಿ ಎಂದರು.

ಯೋಗಿರಾಜ್‌ಗೆ ಗೌರವ

ಕಾರ್ಯಕ್ರಮದಲ್ಲಿ ಅಯೋಧ್ಯೆ ಶ್ರೀರಾಮಮಂದಿರದ ಬಾಲರಾಮನ ಮೂರ್ತಿ ಕೆತ್ತಿರುವ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರನ್ನು ಅಮಿತ್‌ ಶಾ ಹಾಗೂ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಗೌರವಿಸಿದರು. ಅಮಿತ್‌ ಶಾ ಅವರಿಗೆ ಚಾಮುಂಡೇಶ್ವರಿ ದೇವಿಯ ಶ್ರೀಗಂಧದ ಪ್ರತಿಮೆ ಹಾಗೂ ಶಾ ಅವರ ಭಾವಚಿತ್ರ ನೀಡಿ ಸಮ್ಮಾನಿಸಲಾಯಿತು. ಇದಕ್ಕೂ ಮೊದಲು ಗಣ್ಯರು ಶಿವರಾತ್ರೀಶ್ವರ ಶಿವಯೋಗಿಗಳ ಗದ್ದುಗೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಆರ್‌. ಅಶೋಕ್‌, ಸಂಸದ ಪ್ರತಾಪ್‌ ಸಿಂಹ, ಮಾಜಿ ಸಚಿವ ಸಿ.ಟಿ. ರವಿ, ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ ಕೋರೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next