ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ಸಹಿತ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಸರಕಾರಿ ಪ್ರೌಢಶಾಲಾ ಶಿಕ್ಷಕರು, ತತ್ಸಮಾನ ವೃಂದದ ಶಿಕ್ಷಕರು ಹಾಗೂ ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು, ತತ್ಸಮಾನ ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪರಿಷ್ಕರಿಸಿದೆ.
ಎ.19ರ ರಾತ್ರಿ 10.30ರ ವರೆಗೆ ಅರ್ಹ ಶಿಕ್ಷಕರ ಹೆಸರನ್ನು ಇಂಡೀಕರಣ (ಅಪ್‌ಡೇಟ್) ಮಾಡಲು ಅವಕಾಶ ನೀಡಲಾಗಿದೆ.
ವಲಯ ವರ್ಗಾವಣೆಗೆ ಅರ್ಹರಿರುವ ಶಿಕ್ಷಕರ ತಾತ್ಕಾಲಿಕ ಪಟ್ಟಿ ಬಿಡುಗಡೆಯಾಗಿತ್ತು. ಆದರೆ ವರ್ಗಾವಣೆಗೆ ಅರ್ಹರಿದ್ದ ಹಲವು ಶಿಕ್ಷಕರ ಹೆಸರು ಇಂಡೀಕರಣ (ಅಪ್‌ಡೇಟ್) ಆಗದಿರುವುದನ್ನು ಗಮನಿಸಿ ವರ್ಗಾವಣೆ ಪ್ರಕ್ರಿಯೆಗೆ ಸಮಯ ವಿಸ್ತರಿಸಿ ಶಾಲಾ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಎ.19ರ ರಾತ್ರಿ 10.30ರೊಳಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ವರ್ಗಾವಣೆಗೆ ಅರ್ಹರಿರುವ ಶಿಕ್ಷಕರ ಮಾಹಿತಿಯನ್ನು ಇಂಡೀಕರಿಸಬೇಕು. ಈ ಅವಧಿಯ ಬಳಿಕ ವರ್ಗಾವಣೆ ತಂತ್ರಾಂಶವನ್ನು ಪ್ರೀಝ್ ಮಾಡಲಾಗುತ್ತದೆ. ಆ ಬಳಿಕ ಯಾವುದೇ ಇಂಡೀಕರಣಕ್ಕೆ ಆಸ್ಪದ ಇರುವುದಿಲ್ಲ ಎಂದು ಇಲಾಖೆ ತಿಳಿಸಿದೆ.
ಎ.20ಕ್ಕೆ ವಲಯ ವರ್ಗಾವಣೆಗೆ ಆರ್ಹರಿರುವ ಶಿಕ್ಷಕರ ತಾತ್ಕಾಲಿಕ ಕರಡು ಪಟ್ಟಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಿಸಬೇಕು. ಎ. 20ರಿಂದ ಎ.22ರ ವರೆಗೆ ಪ್ರಕಟಿತ ತಾತ್ಕಾಲಿಕ ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಎ.23ರಂದು “ಎ’ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಸಲ್ಲಿಸಿರುವ ಆಕ್ಷೇಪಣೆ, ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿ ತೀರ್ಮಾನ ಪ್ರಕಟಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಉಪನಿರ್ದೇಶಕರಿಗೆ ಅವಕಾಶ ನೀಡಲಾಗಿದೆ. ಎ. 24ರಂದು ವಲಯ ವರ್ಗಾವಣೆಗೆ ಅರ್ಹರಿರುವ ಶಿಕ್ಷಕರ ಆದ್ಯತೆಯ ಕರಡು ಪಟ್ಟಿ ಪ್ರಕಟಿಸುವಂತೆ ಸೂಚಿಸಲಾಗಿದೆ.