Advertisement

Health: ಪರಿಷ್ಕೃತಗೊಂಡ ಆಹಾರ ಮಾರ್ಗಸೂಚಿಗಳು

12:56 PM Aug 18, 2024 | Team Udayavani |

ಸಮತೋಲಿತ ಪೋಷಣೆಯು ಆರೋಗ್ಯ ಮತ್ತು ಯೋಗಕ್ಷೇಮವನ್ನು ಉಳಿಸಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇತ್ತೀಚೆಗೆ ICMR-NIN(ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರಿಸರ್ಚ್‌ ಮತ್ತು ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ನ್ಯೂಟ್ರಿಶನ್‌) 17 ಆಹಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

Advertisement

https://www.nin.res.in/NICE.html ರಲ್ಲಿ ಮೇ 7, 2024ರಂದು ಅನಾವರಣಗೊಂಡ ಈ ಮಾರ್ಗಸೂಚಿಗಳು ಗರ್ಭಧಾರಣೆಯಿಂದ ವೃದ್ಧಾಪ್ಯದವರೆಗೆ ಪೋಷಣೆಯ ಅನಿವಾರ್ಯ ಪಾತ್ರವನ್ನು ಒತ್ತಿಹೇಳುತ್ತವೆ. ಅವರು ಅತ್ಯುತ್ತಮವಾದ ಬೆಳವಣಿಗೆ, ಅಭಿವೃದ್ಧಿ ಮತ್ತು ರೋಗ ತಡೆಗಟ್ಟುವಿಕೆಯನ್ನು ಉತ್ತೇಜಿಸಲು, ವಿಶೇಷವಾಗಿ ಆಹಾರ-ಸಂಬಂಧಿತ (ನಾನ್‌-ಕಮ್ಯುನಿಕಬಲ್‌ ಡಿಸೀಸ್‌ ಗಳು) ಅನಾರೋಗ್ಯಗಳಿಗೆ ಗುರಿಯಾಗುವುದನ್ನು ತಪ್ಪಿಸಲು ಸಮತೋಲಿತ ಆಹಾರದ ಅಗತ್ಯವನ್ನು ತಿಳಿಸಿದ್ದಾರೆ. ಈ ಮಾರ್ಗಸೂಚಿಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳು ಹಾಗೂ ಶೈಕ್ಷಣಿಕ ಸಮುದಾಯದಿಂದ ಸಂಘಟಿತ ಪ್ರಯತ್ನಗಳ ಅಗತ್ಯವಿದೆ.

ಭಾರತದ ಒಟ್ಟು ರೋಗದ ಹೊರೆಯ ಶೇ. 56.4 ಅನಾರೋಗ್ಯಕರ ಆಹಾರ ಪದ್ಧತಿಯಿಂದ ಉಂಟಾಗುತ್ತದೆ ಎಂದು ಸಂಶೋಧನೆಗಳು ತಿಳಿಸುತ್ತವೆ.ಅಧಿಕ ಕೊಬ್ಬು, ಸಕ್ಕರೆ ಮತ್ತು ಉಪ್ಪು (HFSS-high fat, sugar and salt) ಆಹಾರಗಳ ಹೆಚ್ಚಿದ ಬಳಕೆ, ಅವುಗಳ ವಿಶಿಷ್ಟ ರುಚಿ, ವ್ಯಾಪಕ ಲಭ್ಯತೆ ಮತ್ತು ಆರೋಗ್ಯಕರ ಆಯ್ಕೆಗಳಿಗೆ ಹೋಲಿಸಿದರೆ ಕಡಿಮೆ ವೆಚ್ಚ, ಕಡಿಮೆ ದೈಹಿಕ ಚಟುವಟಿಕೆ ಮತ್ತು ಸೀಮಿತ ವೈವಿಧ್ಯಮಯ ಆಹಾರಗಳು, ಸೂಕ್ಷ್ಮ ಪೋಷಕಾಂಶಗಳ ಕೊರತೆ ಮತ್ತು ಅಧಿಕ ತೂಕ / ಬೊಜ್ಜು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಸಾರ್ವಜನಿಕ ಆರೋಗ್ಯವನ್ನು ಪರಿಣಾಮಕಾರಿಯಾಗಿ ರಕ್ಷಿಸಲು ಪೌಷ್ಟಿಕಾಂಶದ ಅಸಮತೋಲನವನ್ನು ಪರಿಹರಿಸುವ ತುರ್ತು ಅಗತ್ಯವನ್ನು ಇದು ಎತ್ತಿ ತೋರಿಸುತ್ತದೆ.

ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ನ್ಯೂಟ್ರಿಶನ್‌ ಬಿಡುಗಡೆಗೊಳಿಸಿರುವ ಮಾದರಿ ಆಹಾರ ತಟ್ಟೆಯು ದೈನಂದಿನ ಆಧಾರದ ಮೇಲೆ ಕನಿಷ್ಠ 5-7 ಆಹಾರ ಗುಂಪುಗಳಿಂದ (ಒಟ್ಟು 10 ಆಹಾರ ಗುಂಪುಗಳಲ್ಲಿ) ವಿವಿಧ ಪೌಷ್ಟಿಕಾಂಶ-ಭರಿತ ಆಹಾರಗಳ ಸಾಕಷ್ಟು ಸೇವನೆಯನ್ನು ಶಿಫಾರಸು ಮಾಡುತ್ತದೆ. ಹೆಚ್ಚುವರಿಯಾಗಿ, ಉಳಿದ ಆಹಾರ ಗುಂಪುಗಳ ಆಹಾರಗಳನ್ನು ವಾರಕ್ಕೆ ಕನಿಷ್ಠ ಎರಡರಿಂದ ಮೂರು ಬಾರಿ ಸೇವಿಸಬೇಕು.

ಶಿಶುಗಳು ಮತ್ತು ಮಕ್ಕಳಿಗೆ ಮಾರ್ಗಸೂಚಿಯು MDD (minimun dietary diversity) ಕನಿಷ್ಠ ಆಹಾರದ ವೈವಿಧ್ಯ ಸೇವನೆಯು ಕನಿಷ್ಟ ಕೆಳಗಿನ 5 ಆಹಾರ ಗುಂಪುಗಳನ್ನು ಪ್ರತಿದಿನ ಸೇರಿಸಬೇಕೆಂದು ಉಲ್ಲೇಖೀಸುತ್ತದೆ:
ಧಾನ್ಯಗಳು / ರಾಗಿ
ಬೇಳೆಕಾಳುಗಳು/ಮೊಟ್ಟೆ/ಮಾಂಸ
ಬೀಜಗಳು ಮತ್ತು ಎಣ್ಣೆ ಬೀಜಗಳು
ಎದೆ ಹಾಲು/ಹಾಲು ಮತ್ತು ಹಾಲಿನ ಉತ್ಪನ್ನಗಳು
ತರಕಾರಿ/ ಹಸಿರು ಸೊಪ್ಪುಗಳು ಮತ್ತು ಹಣ್ಣುಗಳು

Advertisement

ತಟ್ಟೆಯ ಅರ್ಧ ಭಾಗವು ತರಕಾರಿಗಳು, ಹಸುರು ಎಲೆಗಳ ತರಕಾರಿಗಳು, ಬೇರುಗಳು ಮತ್ತು ಗೆಡ್ಡೆಗಳು ಮತ್ತು ಹಣ್ಣುಗಳನ್ನು ಒಳಗೊಂಡಿರಬೇಕು. ಉಳಿದ ಅರ್ಧವನ್ನು ಧಾನ್ಯಗಳು ಮತ್ತು ರಾಗಿ (ಕನಿಷ್ಠ ಶೇ. 50 ಸಂಪೂರ್ಣ ಧಾನ್ಯದೊಂದಿಗೆ), ಬೇಳೆಕಾಳುಗಳು, ಮಾಂಸದ ಆಹಾರಗಳು (ನೇರ ಮಾಂಸ ಅಥವಾ ತೆಳು ಮಾಂಸ ಉದಾಹರಣೆಗೆ, ಕಡಿಮೆ ಕೊಬ್ಬಿನಂಶ ಇರುವ ಚರ್ಮ ರಹಿತ ಕೋಳಿ), ಮೊಟ್ಟೆಗಳು, ಬೀಜಗಳು, ಎಣ್ಣೆಕಾಳುಗಳು ಮತ್ತು ಕಡಿಮೆ-ಕೊಬ್ಬಿನ ಹಾಲಿನ ಉತ್ಪನ್ನಗಳನ್ನು ಹೊಂದಿರಬೇಕು. ಸಾಂಬಾರ ಪದಾರ್ಥಗಳಾದ ಅರಿಶಿನ, ಜೀರಿಗೆ, ಶುಂಠಿ, ಬೆಳ್ಳುಳ್ಳಿ, ದಾಲಿcನ್ನಿ, ಕಾಳು ಮೆಣಸು ಮತ್ತು ಲವಂಗಗಳು ಉತ್ಕರ್ಷಣ ನಿರೋಧಕ ಸಮೃದ್ಧವಾಗಿವೆ.

ಶಿಫಾರಸು ಮಾಡಲಾದ ಮ್ಯಾಕ್ರೋನ್ಯೂಟ್ರಿಯಂಟ್‌ ಸೇವನೆಯ ವಿಭಜನೆಯು ಒಟ್ಟು ಕ್ಯಾಲೊರಿಗಳಲ್ಲಿ ಶೇ. 50-55 ಕಾರ್ಬೋಹೈಡ್ರೇಟ್‌ಗಳಿಂದ, ಶೇ. 10-15 ಪ್ರೊಟೀನ್‌ಗಳಿಂದ ಮತ್ತು ಶೇ. 20-30 ಆಹಾರದ ಕೊಬ್ಬಿನಿಂದ ಬರಬೇಕೆಂದು ಸೂಚಿಸುತ್ತದೆ. ಪೋಷಕಾಂಶಗಳ ಆವಶ್ಯಕತೆಗಳು ಮತ್ತು ಅವುಗಳನ್ನು ಪೂರೈಸಲು ಅಗತ್ಯವಿರುವ ಆಹಾರಗಳ ಪ್ರಮಾಣವು ವಯಸ್ಸು, ಲಿಂಗ, ಶಾರೀರಿಕ ಸ್ಥಿತಿ ಮತ್ತು ದೈಹಿಕ ಚಟುವಟಿಕೆಯ ಮಟ್ಟಗಳೊಂದಿಗೆ ಬದಲಾಗುತ್ತದೆ.

ಹೆಚ್ಚುವರಿಯಾಗಿ, ಮಾರ್ಗದರ್ಶಿ ಸೂತ್ರಗಳು ದಿನಕ್ಕೆ 20-25 ಗ್ರಾಂ (4-5 ಟೀ ಚಮಚಗಳು) ದಿನಕ್ಕೆ ಸಕ್ಕರೆ ಸೇವನೆಯನ್ನು ಸೀಮಿತಗೊಳಿಸುವುದನ್ನು ಪ್ರತಿಪಾದಿಸುತ್ತದೆ. ದಿನಕ್ಕೆ 5 ಗ್ರಾಂ (1 ಟೀ ಚಮಚ) ಗಿಂತ ಹೆಚ್ಚು ಉಪ್ಪು (ಗೋಚರ ಮತ್ತು ಅದೃಶ್ಯ ಉಪ್ಪು ಸೇರಿದಂತೆ) ಬಳಸದಂತೆ ಎಚ್ಚರಿಸುತ್ತದೆ. ಕೊಬ್ಬಿನಾಂಶವಿರುವ ಪದಾರ್ಥಗಳು ಮತ್ತು ಎಣ್ಣೆಗಳನ್ನು ದಿನಕ್ಕೆ 27 ಮಿ.ಲೀ. (2 ಟೇಬಲ್‌ಸ್ಪೂನ್‌ಗಳಿಗೆ ಸಮನಾಗಿರುತ್ತದೆ) ಗಳಿಗಿಂತ ಹೆಚ್ಚು ತೆಗೆದುಕೊಳ್ಳಬಾರದು. ವಿಟಮಿನ್‌ ಡಿ ಸಂಶ್ಲೇಷಣೆಗಾಗಿ ದಿನಕ್ಕೆ 2 ಲೀಟರ್‌ಗಳಷ್ಟು ಸಾಕಷ್ಟು ನೀರಿನ ಸೇವನೆ ಮತ್ತು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ಕೂಡ ಶಿಫಾರಸು ಮಾಡಲಾಗಿದೆ.
ಇದಲ್ಲದೆ ಮಾರ್ಗದರ್ಶಿ ಸೂತ್ರಗಳು ವಿಶೇಷವಾಗಿ ಹೆಚ್ಚಿನ ಕೊಬ್ಬು, ಸಕ್ಕರೆ, ಉಪ್ಪು ಆಹಾರಗಳು (HFSS) ಮತ್ತು ಅಲ್ಟ್ರಾ-ಸಂಸ್ಕರಿಸಿದ ಆಹಾರಗಳು (UPFs- ultra processed food) ಸೇರಿಸಿದ ಸಕ್ಕರೆ, ಕೊಬ್ಬು ಮತ್ತು ಉಪ್ಪಿನ ಸೇವನೆಯಲ್ಲಿ ಮಿತಗೊಳಿಸುವಿಕೆಯನ್ನು ಒತ್ತಿಹೇಳುತ್ತವೆ. ಮಾರ್ಗದರ್ಶಿ ಸೂತ್ರಗಳು ಮೊದಲ 6 ತಿಂಗಳವರೆಗೆ ಶಿಶುಗಳಿಗೆ ಪ್ರತ್ಯೇಕವಾಗಿ ಹಾಲುಣಿಸುವಿಕೆಯನ್ನು ಒತ್ತಿಹೇಳುತ್ತವೆ (ನೀರನ್ನು ಹೊರತುಪಡಿಸಿ). ಆಹಾರದಲ್ಲಿ ಮೈಕ್ರೋಗ್ರೀನ್‌ಗಳ ಸೇರ್ಪಡೆ, ಪರದೆಯ ಸಮಯವನ್ನು ಸೀಮಿತಗೊಳಿಸುವುದು, ಸಾಕಷ್ಟು ನಿದ್ರೆಯನ್ನು ಖಚಿತಪಡಿಸಿಕೊಳ್ಳುವುದು, ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು, ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು, ಸುರಕ್ಷಿತ ಆಹಾರವನ್ನು ಆಯ್ಕೆ ಮಾಡುವುದು, ಸೂಕ್ತವಾದ ಅಡುಗೆಯ ವಿಧಾನ ಅಳವಡಿಸಿಕೊಳ್ಳುವುದು, ಸೂಕ್ತವಾದ ಅಡುಗೆ ಪಾತ್ರೆಗಳ ಆಯ್ಕೆ ಮತ್ತು ಸರಿಯಾದ ಶೇಖರಣಾ ಕಾರ್ಯವಿಧಾನಗಳನ್ನು ಅನುಷ್ಠಾನಗೊಳಿಸುವುದು, ಉತ್ಪನ್ನ ಲೇಬಲ್‌ಗ‌ಳು, ಮಾದರಿ ಆಹಾರ ಚಾರ್ಟ್‌ಗಳನ್ನು ಎಚ್ಚರಿಕೆಯಿಂದ ಓದುವ ಮೂಲಕ ಆರೋಗ್ಯಕರ ಆಯ್ಕೆಗಳನ್ನು ಮಾಡುವುದು. ಹೆಚ್ಚಿನ ಕ್ಯಾಲೋರಿ ಆಹಾರ ಪದಾರ್ಥಗಳಿಗೆ ಪರ್ಯಾಯವಾಗಿ ಆರೋಗ್ಯಕರ ಪದಾರ್ಥಗಳನ್ನು ಉಲ್ಲೇಖೀಸಿದೆ.

ನೆನಪಿಡಬೇಕಾದ 17 ಮಾರ್ಗಸೂಚಿಗಳು
ಸಮತೋಲಿತ ಆಹಾರವನ್ನು ಖಚಿತಪಡಿಸಿಕೊಳ್ಳಲು ವಿವಿಧ ಆಹಾರಗಳನ್ನು ಸೇವಿಸಿ
ಗರ್ಭಿಣಿಯರು ಮತ್ತು ತಾಯಂದಿರು ಹೆಚ್ಚುವರಿ ಆಹಾರ ಮತ್ತು ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಬೇಕು
ಮೊದಲ ಆರು ತಿಂಗಳವರೆಗೆ ವಿಶೇಷ ಸ್ತನ್ಯಪಾನವನ್ನು ಖಚಿತಪಡಿಸಿಕೊಳ್ಳಿ; ಎರಡು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ವರೆಗೆ ಸ್ತನ್ಯಪಾನವನ್ನು ಮುಂದುವರಿಸಿ
ಆರು ತಿಂಗಳ ವಯಸ್ಸಿನ ಅನಂತರ ಮಗುವಿಗೆ ಮನೆಯಲ್ಲಿ ತಯಾರಿಸಿದ ಅರೆ-ಘನ ಪೂರಕ ಆಹಾರವನ್ನು ನೀಡಬೇಕು.
ಆರೋಗ್ಯಕರ ಸ್ಥಿತಿಯಲ್ಲಿ ಮತ್ತು ಖಾಯಿಲೆಗಳಲ್ಲಿ ಮಕ್ಕಳು ಮತ್ತು ಹದಿಹರೆಯದವರು ಸಾಕಷ್ಟು ಮತ್ತು ಸೂಕ್ತ ಆಹಾರಕ್ರಮವನ್ನು ಪಾಲಿಸಬೇಕು
ಸಾಕಷ್ಟು ತರಕಾರಿಗಳು ಮತ್ತು ಕಾಳುಗಳನ್ನು ತಿನ್ನಿರಿ
ತೈಲ / ಕೊಬ್ಬುಗಳನ್ನು ಮಿತವಾಗಿ ಬಳಸಿ; ಕೊಬ್ಬುಗಳು ಮತ್ತು ಅಗತ್ಯ ಕೊಬ್ಬಿನಾಮ್ಲಗಳ ದೈನಂದಿನ ಅಗತ್ಯಗಳನ್ನು ಪೂರೈಸಲು ವಿವಿಧ ಎಣ್ಣೆ, ಬೀಜಗಳನ್ನ ಆಯ್ಕೆ ಮಾಡಿ.
ಆಹಾರಗಳ ಸೂಕ್ತ ಸಂಯೋಜನೆಯ ಮೂಲಕ ಉತ್ತಮ ಗುಣಮಟ್ಟದ ಪ್ರೊಟೀನ್‌ಗಳು ಮತ್ತು ಅಗತ್ಯ ಅಮೈನೋ ಆಮ್ಲಗಳನ್ನು ಪಡೆದುಕೊಳ್ಳಿ.
ಸ್ನಾಯುವಿನ ದ್ರವ್ಯರಾಶಿಯನ್ನು ನಿರ್ಮಿಸಲು ಪ್ರೊಟೀನ್‌ ಪೂರಕಗಳನ್ನು ತಪ್ಪಿಸಿ
ಹೊಟ್ಟೆಯ ಬೊಜ್ಜು, ಅಧಿಕ ತೂಕ ಮತ್ತು ಒಟ್ಟಾರೆ ಬೊಜ್ಜು ತಡೆಯಲು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ
ದೈಹಿಕವಾಗಿ ಸಕ್ರಿಯರಾಗಿರಿ, ನಿಯಮಿತವಾಗಿ ವ್ಯಾಯಾಮ ಮಾಡಿ
ಉಪ್ಪು ಸೇವನೆಯನ್ನು ನಿರ್ಬಂಧಿಸಿ
ಸುರಕ್ಷಿತ ಮತ್ತು ಶುದ್ಧ ಆಹಾರವನ್ನು ಸೇವಿಸಿ
ಸೂಕ್ತವಾದ ಪೂರ್ವ-ಅಡುಗೆ ಮತ್ತು ಅಡುಗೆ ವಿಧಾನಗಳನ್ನು ಬಳಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ
ಸಾಕಷ್ಟು ನೀರು ಕುಡಿಯಿರಿ
ಅಲ್ಟ್ರಾ-ಸಂಸ್ಕರಿಸಿದ ಆಹಾರಗಳು ಮತ್ತು ಹೆಚ್ಚಿನ ಕೊಬ್ಬು, ಸಕ್ಕರೆ, ಉಪ್ಪು ಸೇವನೆಯನ್ನು ಕಡಿಮೆ ಮಾಡಿ
ವಯಸ್ಸಾದವರ ಆಹಾರದಲ್ಲಿ ಪೌಷ್ಟಿಕಾಂಶ ಭರಿತ ಆಹಾರಗಳಿಗೆ ಆದ್ಯತೆ ನೀಡಿ
ಆಹಾರ ಲೇಬಲ್‌ಗ‌ಳ ಮಾಹಿತಿಯನ್ನು ಓದಿ

ಇದರಲ್ಲಿ ಪಿಜ್ಜಾ, ಡೋನಟ್ಸ್‌ ಮತ್ತು ಹಾಟ್‌ಡಾಗ್‌ಗಳ ಬದಲಿಗೆ ಸಲಾಡ್‌ ಮತ್ತು ಮೊಳಕೆ ಭರಿಸಿದ ಕಾಳುಗಳನ್ನು ಸೇವಿಸಬಹುದು. ಆಳವಾಗಿ ಕರಿದ ತಿಂಡಿಗಳ ಬದಲಿಗೆ ಬೀಜಗಳು ಮತ್ತು ತರಕಾರಿ ಬೀಜಗಳನ್ನು ತಿನ್ನಬಹುದು. ಹಣ್ಣಿನ ರಸವನ್ನು ಸೇವಿಸುವ ಬದಲು ಸಂಪೂರ್ಣ ಹಣ್ಣುಗಳನ್ನು ಸೇವಿಸಬೇಕು. ಜಾಮ್‌ ಮತ್ತು ಸಾಸ್‌ಗಳ ಬದಲಿಗೆ ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ಚಟ್ನಿ ಮತ್ತು ಡಿಪ್‌ಗ್ಳನ್ನು ಬಳಸಬಹುದು. ರೆಡಿಮೇಡ್‌ ಸಾಫ್ಟ್ ಡ್ರಿಂಕ್ಸ್‌, ಜ್ಯೂಸುಗಳ ಬದಲಿಗೆ ಎಳನೀರು, ಮಜ್ಜಿಗೆ, ಲಿಂಬೆ, ಕಿತ್ತಳೆ, ಕಲ್ಲಂಗಡಿ, ಮಾವಿನ ಹಣ್ಣು, ಫೈನಾಪಲ್‌, ದಾಳಿಂಬೆ ಹಣ್ಣಿನ ರಸವನ್ನು ಕುಡಿಯಬಹುದು. ಕೇಕ್‌, ಚಾಕಲೇಟ್‌, ಸ್ವೀಟ್ಸ್‌ ಬದಲಿಗೆ ಮನೆಯಲ್ಲೇ ಮಾಡಿರುವ ವಿವಿಧ ಧಾನ್ಯಗಳ ಉಂಡೆಗಳು, ಚಿಕ್ಕಿ, ಹುರಿದ ಕಾಳು, ಬೀಜಗಳನ್ನು ತಿನ್ನಬಹುದು.

ಒಟ್ಟಾಗಿ ಸಮತೋಲಿತ ಪೋಷಣೆಯ ಮೂಲಕ ಉತ್ತಮ ಆರೋಗ್ಯಕ್ಕೆ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳೋಣ. ನಮ್ಮ ದೈನಂದಿನ ಆಹಾರದಲ್ಲಿ ವಿವಿಧ ಪೋಷಕಾಂಶ-ಭರಿತ ಆಹಾರಗಳನ್ನು ಸೇರಿಸುವ ಮೂಲಕ ಮತ್ತು ನಮ್ಮ ಮ್ಯಾಕ್ರೋನ್ಯೂಟ್ರಿಯಂಟ್‌ ಸೇವನೆಯ ಬಗ್ಗೆ ಗಮನಹರಿಸುವ ಮೂಲಕ ನಾವು ಆರೋಗ್ಯಕರ ಭವಿಷ್ಯಕ್ಕೆ ದಾರಿ ಮಾಡಿಕೊಡಬಹುದು. ನೆನಪಿಡಿ, ನಮ್ಮ ಆಹಾರದಲ್ಲಿನ ಸಣ್ಣ ಬದಲಾವಣೆಗಳು ನಮ್ಮ ಒಟ್ಟಾರೆ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆಗಳಿಗೆ ಕಾರಣವಾಗಬಹುದು.

ಕವಿತಾ ಎಸ್‌. ಪಥ್ಯಾಹಾರ ತಜ್ಞೆ , ಪಥ್ಯಾಹಾರ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next