Advertisement
ಒಬ್ಬ ಬ್ಯಾಂಕ್ ಮ್ಯಾನೇಜರ್, ಒಬ್ಬ ಅರಣ್ಯಾಧಿಕಾರಿ, ಒಬ್ಬ ಪೋಸ್ಟ್ ಮ್ಯಾನ್ ನಿವೃತ್ತನಾಗುವುದಕ್ಕೂ ಒಬ್ಬ ಮೇಷ್ಟ್ರು ನಿವೃತ್ತರಾಗುವುದಕ್ಕು ತುಂಬಾ ವ್ಯತ್ಯಾಸವಿದೆ. ಎರಡು ವಾರಗಳ ಹಿಂದೆ ನಾನು ಕಾಲೇಜಿನ ಗೇಟು ದಾಟಿ ಅಕ್ಷರ ಮಂದಿರಕ್ಕೆ ಕೊನೆಯ ನಮಸ್ಕಾರ ಹೇಳಿ ಹೊರಗೆ ಬಂದಾಗ ಅದು ಬರೀ ಕಲ್ಲು ಇಟ್ಟಿಗೆಯ ಸ್ಥಾವರವಾಗಿ ಕಾಣಿಸಲಿಲ್ಲ. ಕಾಲೇಜು ನನ್ನ ಬಹುಕಾಲದ ಹೊಳಹು, ಸಂವಾದ, ಭಾವಿಸುವಿಕೆಗೆ ಬುನಾದಿಯಾಗಿತ್ತು. 28 ವರ್ಷಗಳ ಸೇವಾವಧಿಯಲ್ಲಿ ನಾನು ಎಷ್ಟೋ ಪಠ್ಯಗಳ ಪುಟಗಳನ್ನು ಮಗುಚಿ ಹಾಕಿದ್ದೇನೆ. ಎಷ್ಟು ವಿದ್ಯಾರ್ಥಿಗಳು ನನ್ನ ಪಾಠ ಕೇಳಿದ್ದಾರೆ ಎಂಬುದಕ್ಕಿಂತ, ನಾನು ಅವರಿಗೆ ಬರೆಯುವ ಪರೀಕ್ಷೆಗಿಂತ ಬದುಕುವ ಪರೀಕ್ಷೆಗೆ ಏನನ್ನು ಕಲಿಸಿದ್ದೇನೆ ಎಂದುಕೊಳ್ಳುತ್ತಾ ಎದೆ ಮೇಲೆ ಕೈ ಇಟ್ಟು ಆಗಾಗ ಯೋಚಿಸುವುದುಂಟು.
Related Articles
Advertisement
ದಿಲಾÏನ ಎನ್ನುವ ಅಲ್ಪಸಂಖ್ಯಾತ ಹುಡುಗಿಯೊಬ್ಬಳು ಕಾಲೇಜು ನಾಯಕಿಯಾಗಲು ಚುನಾವಣೆಗೆ ನಿಂತಾಗ ಇಡೀ ಕಾಲೇಜಿನ ತರಗತಿ ಪ್ರತಿನಿಧಿಗಳು ಅವಳೊಬ್ಬಳಿಗೆ ವೋಟು ಹಾಕಿ ಗೆಲ್ಲಿಸಿದ್ದ ವ್ಯಕ್ತಿ ಮಾದರಿಯನ್ನು ಗಮನಿಸಿದಾಗ ಇನ್ನೂ ನಮ್ಮ ಕರಾವಳಿಯಲ್ಲಿ ಬಹುತ್ವ, ಮನುಷ್ಯ ಪ್ರೀತಿಗೆ ಬೆಲೆ ನೆಲೆ ಉಳಿದಿದೆ ಅನಿಸುತ್ತದೆ.
ಅನ್ನುವಂತಿಲ್ಲ,ಅನುಭವಿಸುವಂತಿಲ್ಲ…
ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಮೂರು ದಿನಗಳ ಬರವಣಿಗೆಯ ಕಮ್ಮಟ ಮಾಡಬೇಕೆಂದು ತರಗತಿ ಕೊಠಡಿ ಒಂದನ್ನು ಸಿದ್ದಗೊಳಿಸುತ್ತಿರುವಾಗ ಆ ಕಟ್ಟಡದೊಳಗಡೆ ಹತ್ತಾರು ಬೇರೆ ಕೊಠಡಿಗಳಿದ್ದರೂ, ರûಾಬಂಧನ ಸಮಾರಂಭ ಮಾಡಲು ನನಗೆ ಅದೇ ಕೊಠಡಿ ಬೇಕೆಂದು ಹಠ ಹಿಡಿದ ಸಹೋದ್ಯೋಗಿ ಒಬ್ಬರ ಮನಸ್ಥಿತಿಯನ್ನು ಬೇರೊಂದು ಕಾಲೇಜಿನಲ್ಲಿ ಕಂಡು ಮರುಗಿದ್ದೂ ಇದೆ. ಮತ, ಧಾರ್ಮಿಕತೆಯ ವಿಚಾರಗಳನ್ನು ಬಿತ್ತುವ ಕಾಲೇಜುಗಳ ಕೆಲವೊಂದು ಉಪನ್ಯಾಸಕರ ವಿಕೃತ ಮನಸ್ಥಿತಿಗಳನ್ನು ಕಂಡು ದಂಗಾದದ್ದೂ ಇದೆ. ನಮಗದು ಸಾಹಿತ್ಯ ಸಂಸ್ಕೃತಿ ಜೀವನ ಮೌಲ್ಯದ ವಿಚಾರ- ವೈಚಾರಿಕತೆಯಾದರೆ ಅವರಿಗದು ಎಡಪಂಥ ಪ್ರಗತಿಪರತೆಯಾಗಿ ಕಾಣಿಸುತ್ತದೆ! ಒಂದು ಕಾಲೇಜು ಕೋಮುಬಣ್ಣ ಧರಿಸಿಕೊಂಡಾಗ ಕೆಲವು ಪತ್ರಿಕೆಗಳು ವರದಿಗಾಗಿ ಬಂದಾಗ, “ಇಡೀ ರಾಜ್ಯದಲ್ಲಿ ನಮ್ಮ ಕಾಲೇಜಿನಲ್ಲಿ ಮಾತ್ರ ಮಧ್ಯಾಹ್ನದ ಬಿಸಿ ಊಟ ಇದೆ. ಅದನ್ನೂ ವರದಿ ಮಾಡಿ’ ಎಂದಾಗ ಅದನ್ನು ಬಿಟ್ಟು ಋಣಾತ್ಮಕ ಅಂಶಗಳನ್ನು ಪ್ರಕಟಿಸಿದ ರಾಷ್ಟ್ರೀಯ ಪತ್ರಿಕೆಗಳ ಮಾಧ್ಯಮ ನೀತಿಗಳನ್ನು ಗಮನಿಸಿ ನನ್ನೊಳಗಡೆ ಇದ್ದ ಪತ್ರಕರ್ತ ಕುದಿದದ್ದು ಇದೆ.
ಪರಕಾಯ ಪ್ರವೇಶ ಆಗಬೇಕು
ಉಪನ್ಯಾಸಕನೊಬ್ಬ ಪಾಠದ ನಡುವೆ ಜೋಕ್ಸ್ ಹೇಳಿದಾಗ ಎದುರುಗಡೆ ಕೂತ ಮಗು ನಗಬೇಕೆಂದು ಆಶಿಸುವುದು ತಪ್ಪಲ್ಲ. ಆದರೆ ಆ ಮಗುವಿನ ಮನೆಯ ಮನಸ್ಥಿತಿ ನಗುವಂತದ್ದೇ ಎಂಬ ಪರಕಾಯ ಪ್ರವೇಶ ಮಾಡುವ ಬುದ್ಧಿ ಬಡತನದಿಂದ ಬಂದಂತಹ ಉಪನ್ಯಾಸಕನಿಗೆ ಮಾತ್ರ ಅರ್ಥವಾಗುತ್ತದೆ. ಶ್ರೀಮಂತ ಉಪನ್ಯಾಸಕನೊಬ್ಬ ಶ್ರೀಮಂತ ಮಕ್ಕಳಿಗೆ ಪಾಠ ಮಾಡುವುದು ನನ್ನ ಪ್ರಕಾರ ಅತ್ಯುತ್ತಮ ಸಂವಾದ ಅಲ್ಲವೇ ಅಲ್ಲ. ಹಾಗೆಯೇ ಶ್ರೀಮಂತನೊಬ್ಬ ಬಡವರಿಗೆ ಪಾಠ ಮಾಡಿದಾಗ ಅಂತದ್ದೇ ಸಂವೇದನೆ ಹುಟ್ಟಲಾರದು. ಬಡವನೊಬ್ಬ ಬಡವನೊಬ್ಬನ ಜೊತೆಗೆ ನಡೆಸುವ ಮಾತುಕತೆ ಈ ಜಗತ್ತಿನ ಶ್ರೇಷ್ಠ ಸಂವಾದ ಎಂದು ನಾನು ನಂಬಿದ್ದೇನೆ. 45 ವರ್ಷಗಳ ಹಿಂದೆ ನಾನು ಯಾವ ಜಾಗದಲ್ಲಿ ಕೂತು ಪಾಠ ಕೇಳಿದ್ದೇನೋ ಅದೇ ಮುಗ್ಧತೆ ಬಡತನ ಇವತ್ತಿನ ಮಕ್ಕಳಲ್ಲೂ ಇರುವುದರಿಂದ ನಾವಿಬ್ಬರೂ ಒಂದೇ ರೇಖೆಯಲ್ಲಿ ಸಂಧಿಸುವುದಕ್ಕೆ ಸಾಧ್ಯವಾಗುತ್ತದೆ.
ಮನಸ್ಸುಗಳೊಂದಿಗೆ ಮಾತುಕತೆ :
500- 600 ಮಕ್ಕಳು ಓದುವ ಕಾಲೇಜಿನಲ್ಲಿ ನಾವು ಮುಖಾಮುಖೀಯಾಗುವುದು ಕೇವಲ ಅಷ್ಟೊಂದು ವಿದ್ಯಾರ್ಥಿಗಳ ಮುಖದೊಂದಿಗೆ ಅಲ್ಲವೇ ಅಲ್ಲ. ಬದಲಾಗಿ ಮನೆ-ಮನಸ್ಸುಗಳೊಂದಿಗೆ. ಆ ಮಕ್ಕಳು ತರುವ ಬುತ್ತಿಯ ಅನ್ನ, ಅವರು ಧರಿಸುವ ಬಟ್ಟೆ ಇವೆಲ್ಲವನ್ನೂ ನೂರಾರು ಜನ ಮುಟ್ಟಿರುತ್ತಾರೆ. ತಿನ್ನುವ ಅನ್ನದ ಬುಡದಲ್ಲಿ ಕೂರುವ ಬೀಜ ಯಾರಲ್ಲೋ. ಯಾರೋ ಕೊಯ್ಯುವವರು. ಯಾರೋ ಸಂಸ್ಕರಿಸುವವರು. ಆ ಬಟ್ಟೆಯನ್ನು ಕತ್ತರಿಸುವ ಇನ್ಯಾರೋ. ಕತ್ತರಿಸುವ ಆ ಕತ್ತರಿ ಮತ್ತೆಲ್ಲಿಯಲ್ಲೋ. ಹತ್ತಿಯನ್ನು ಸಾಗಿಸುವ ವಾಹನದ ಚಾಲಕ ಮತ್ಯಾವುದೋ ಸಮುದಾಯದವ. ಹತ್ತಿಯ ನೂಲು ಮಾಡುವವ ಇನ್ಯಾವುದೋ ಭಾಷೆಯವ. ಹೊಲಿಯುವ ನೂಲು ಇನ್ಯಾವುದೋ ಊರಿದ್ದು. ಈ ಬಹುತ್ವ ನಮ್ಮ ಒಳಗಡೆ ಬೆಳಗದೆ ಇದ್ದರೆ ಪಂಪನನ್ನು, ಅಲ್ಲಮನನ್ನು, ಕುವೆಂಪು ಅವರನ್ನು, ಬೇಂದ್ರೆ- ಬಸವನನ್ನು ಅಂಬೇಡ್ಕರ್-ಗಾಂಧಿಯನ್ನು ಬೋಧಿಸು ವುದಕ್ಕೆ ನಮಗೆ ಯಾವ ನೈತಿಕತೆ ಇರುತ್ತದೆ?
-ನರೇಂದ್ರ ರೈ ದೇರ್ಲ, ಪುತ್ತೂರು