ಬೆಂಗಳೂರು: ಮೇಯರ್ ಜಿ.ಪದ್ಮಾವತಿ ಅವರು ಶುಕ್ರವಾರ ನಗರದ ವಿವಿಧ ಭಾಗಗಳಲ್ಲಿರುವ ಬಿಬಿಎಂಪಿ ಹೆರಿಗೆ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಹಾಗೂ ಗರ್ಭಿಣಿಯರಿಗೆ ನೀಡಲಾಗುತ್ತಿರುವ ಸೌಲಭ್ಯಗಳನ್ನು ಪರಿಶೀಲಿಸಿದರು.
ರಾಜಾಜಿನಗರದಲ್ಲಿರುವ ಪಾಲಿಕೆಯ ಹೆರಿಗೆ ಆಸ್ಪತ್ರೆಯಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರಿನ ಮೇರೆಗೆ ಪರಿಶೀಲನೆ ನಡೆಸಿದ ಮೇಯರ್, ಈ ಕುರಿತು ಮಾಹಿತಿ ಪಡೆದರು. ಇದರೊಂದಿಗೆ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ವೈದ್ಯರಿಗೆ ಸೂಚಿಸಿದರು.
ಮೊದಲಿಗೆ ಡಾ.ನಾಗರಾಜ್ ಆಸ್ಪತ್ರೆಗೆ ಭೇಟಿ ನೀಡಿದ ಅವರು ಗರ್ಭಿಣಿಯರಿಗೆ ಒದಗಿಸಲಾಗುತ್ತಿರುವ “ತಾಯಿ ಮಡಿಲು ಕಿಟ್’ ಯೋಜನೆ ಬಗ್ಗೆ ವಿವರ ಪಡೆದರು. ಅಪರೇಷನ್ ಥಿಯೇಟರ್‌ನ ವ್ಯವಸ್ಥೆ ಪರಿಶೀಲಿಸಿದರು. ಸೌಲಭ್ಯಗಳು ಬೇಕಿದ್ದಲ್ಲಿ ಮೇಯರ್ ನಿಧಿಯಿಂದ ಹಣ ನೀಡುವುದಾಗಿ ಭರವಸೆ ನೀಡಿದರು. ಆಸ್ಪತ್ರೆಯ ಆವರಣದಲ್ಲಿ ಓವರ್ ಹೆಡ್ ಟ್ಯಾಂಕನ್ನೂ ತಮ್ಮ ಅನುದಾನದಿಂದ ಕಟ್ಟಿಸಿಕೊಡುವುದಾಗಿ ತಿಳಿಸಿದರು.
ನಂತರ ಮಾಗಡಿ ರಸ್ತೆಯ ಹೆರಿಗೆ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯನ್ನು ಕಂಡ ಅವರು ಕೂಡಲೇ ಅವುಗಳನ್ನು ಸರಿಪಡಿಸುವಂತೆ ಸೂಚಿಸಿದರು. ಮುಂದಿನ ಭೇಟಿ ವೇಳೆಗೆ ಆಸ್ಪತ್ರೆಯಲ್ಲಿರುವ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಎರಡೂ ಆಸ್ಪತ್ರೆಗಳಿಗೆ ಭೇಟಿ ನೀಡಿದ ವೇಳೆ ಆಸ್ಪತ್ರೆಯ ವೈದ್ಯರು, ನರ್ಸ್‌ಗಳು ಹಾಗೂ ಇತರೆ ಸಿಬ್ಬಂದಿಗಳ ಹಾಜರಾತಿ ಪುಸ್ತಕಗಳನ್ನು ಪರಿಶೀಲಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಪಾಲಿಕೆ ಹೆರಿಗೆ ಆಸ್ಪತ್ರೆಗಳಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಮತ್ತು ಬಡ ರೋಗಿಗಳಿಗೆ ಯಾವುದೇ ಅನಾನುಕೂಲವಾಗದಂತೆ ನಿಗಾವಹಿಸಬೇಕು ಎಂದು ಆಸ್ಪತ್ರೆ ಸಿಬ್ಬಂದಿಗೆ ಸೂಚಿಸಿದರು. ಅಲ್ಲಿಂದ ಕೆ.ಆರ್.ಮಾರುಕಟ್ಟೆಗೆ ಭೇಟಿ ನೀಡಿದ ಅವರು ಮಾರುಕಟ್ಟೆಯ ಮೇಲ್ಛಾವಣಿಯಲ್ಲಿ ಸೋರುತ್ತಿರುವುದು ಕಂಡು ಕೂಡಲೇ ಅದನ್ನು ಬದಲಿಸುವಂತೆ ಸೂಚಿಸಿದರು.