ಉಡುಪಿ: ಭೂ ಸ್ವಾಧೀನ ಸಮಸ್ಯೆಯಿಂದ ಸ್ಥಗಿತಗೊಂಡಿದ್ದ ಪೆರಂಪಳ್ಳಿ – ಕೊಳಲಗಿರಿ ಸಂಪರ್ಕ ರಸ್ತೆ ಕಾಮಗಾರಿಗೆ ಸ್ಥಳೀಯವಾಗಿ ರಸ್ತೆಗೆ ಜಾಗ ಕಳೆದುಕೊಳ್ಳುವವರಿಗೆ ಪರಿಹಾರವಾಗಿ 3 ಕೋ. ರೂ. ಹಾಗೂ ಮುಂದುವರಿದ ಕಾಮಗಾರಿಗೆ3.20 ಕೋ. ರೂ. ಅನುದಾನ ಈಗಾಗಲೇ ಬಿಡುಗಡೆಗೊಳಿಸಲಾಗಿದ್ದು, ಪ್ರಸ್ತುತ ಆರಂಭವಾದ ರಸ್ತೆ ಕಾಮಗಾರಿಯ ಸ್ಥಳಕ್ಕೆ ಶಾಸಕ ಕೆ. ರಘುಪತಿ ಭಟ್ ಅವರು ಶನಿವಾರದಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಸ್ತೆ ಹಾದು ಹೋಗುವ ಶೀಂಬ್ರ ಎಂಬಲ್ಲಿ ಸ್ವರ್ಣ ನದಿಗೆ ಸಂಪರ್ಕ ಸೇತುವೆ ನಿರ್ಮಾಣ ಮಾಡಲಾಗಿದ್ದು, ಈ ಭಾಗದಲ್ಲಿ ಇರುವ ಎತ್ತರವಾದ ಗುಡ್ಡ ಪ್ರದೇಶಗಳನ್ನು ಸಮತಟ್ಟುಗೊಳಿಸಿ ಸುಗಮ ವಾಹನ ಸಂಚಾರ ನಡೆಸಲು ಅನುಕೂಲವಾಗುವಂತೆ ರಸ್ತೆ ನಿರ್ಮಿಸಲು ಸೂಚಿಸಿದರು.
ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಯನ್ನು ರಚಿಸಿ ಮಳೆಗಾಲ ಆರಂಭಕ್ಕೂ ಮೊದಲು ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಹಾವಂಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸತೀಶ್ ಶೆಟ್ಟಿ, ಸ್ಥಾನೀಯ ಸಮಿತಿಯ ಅಧ್ಯಕ್ಷ ಉದಯ ಕೋಟ್ಯಾನ್, ಹರಿಕೃಷ್ಣ ಶಿವತ್ತಾಯ, ಅರುಣಾ ಪೂಜಾರಿ ಮತ್ತು ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಅಭಿಯಂತರ ಜಗದೀಶ್ ಭಟ್, ಕಿರಿಯ ಅಭಿಯಂತರ ಗಿರೀಶ್ ಮತ್ತು ಸೋಮನಾಥ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.