Advertisement
ಸಾಮಾನ್ಯವಾಗಿ ನೀರು- ಅದು ಕುಡಿಯುವ ನೀರಿರಲಿ ಅಥವಾ ತಾಜ್ಯ ನೀರಿರಲಿ, ಮೇಲಿನಿಂದ ಕೆಳಗೆ ಹರಿಯುತ್ತದೆ ಎಂದೇ ನಂಬಿರುತ್ತೇವೆ ಹಾಗೂ ನಮ್ಮ ಮನೆಗಳಲ್ಲಿ ಅನೇಕ ವ್ಯವಸ್ಥೆಗಳು ಈ ನಿಯಮದ ಆಧಾರದ ಮೇಲೆಯೇ ಕಾರ್ಯ ನಿರ್ವಹಿಸುತ್ತವೆ. ಆದರೆ ಕೆಲವೊಮ್ಮೆ ಪ್ರಕೃತಿ ನಿಯಮ ಮೀರಿದೆಯೇನೋ ಎನ್ನುವ ರೀತಿಯಲ್ಲಿ, ನೀರು ಹರಿದರೆ ನಮಗೆ ನಾನಾ ತೊಂದರೆಗಳು ತಪ್ಪಿದ್ದಲ್ಲ! ಅದರಲ್ಲೂ ಮಳೆಗಾಲದಲ್ಲಿ ರಸ್ತೆಯಲ್ಲಿ ಹರಿಯುವ ಮುಖ್ಯ ಕೊಳವೆ ಕಟ್ಟಿಕೊಂಡು, ಕೊಳಚೆ ನೀರು ಹಿಮ್ಮುಖವಾಗಿ ನುಗ್ಗಲು ತೊಡಗಿದರೆ, ಮನೆಯೆಲ್ಲ ಗಬ್ಬೆದ್ದು ಹೋಗುತ್ತದೆ. ಕುಡಿಯುವ ನೀರಿನ ಕೊಳಾಯಿ ಕೊಳದಪ್ಪಲೆಗಳಿಂದ ನೀರು ಹೀರುವುದು ಅಷ್ಟೇನೂ ಸಾಮಾನ್ಯ ಆಗಿರದಿದ್ದರೂ, ಕೆಲವೊಮ್ಮೆ ತುಂಬಿದ ಟ್ಯಾಂಕ್ ದಿಢೀರ್ ಎಂದು ಖಾಲಿ ಆಗುವುದೂ ಉಂಟು. ಹಾಗಾಗಿ ನಾವು ಕೆಲ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ.
Related Articles
Advertisement
ಪ್ಲಿಂತ್ ಮಟ್ಟ ಎಷ್ಟಿರಬೇಕು?: ಮನೆಗಳಿಗೆ ಸಾಮಾನ್ಯವಾಗಿ ಎರಡು ಮೂರು ಮೆಟ್ಟಿಲುಗಳನ್ನು ಇಡಲಾಗುತ್ತದೆ. ಇದಕ್ಕೂ ಹೆಚ್ಚಿದ್ದರೆ, ಅದು ಅಷ್ಟೇನೂ ಅನುಕೂಲಕರವಾಗಿರುವುದಿಲ್ಲ. ರಸ್ತೆ ಇಳಿಜಾರಿದ್ದು, ಮ್ಯಾನ್‌ಹೋಲ್‌ಗಳು ಸೂಕ್ತ ರೀತಿಯಲ್ಲಿ ನಿರ್ಮಿಸಲಾಗಿದ್ದರೆ, ನಮ್ಮ ಮನೆಯಲ್ಲಿ ಬ್ಯಾಕ್ ಫ್ಲೋ ಆಗುವುದಕ್ಕಿಂತ ಮುಂಚೆ ರಸ್ತೆಯಲ್ಲೇ ಹರಿದು ಹೋಗುತ್ತದೆ ಎಂಬ ಖಾತರಿ ಇದ್ದರೆ, ನಾವು ಸುಮಾರು ಒಂದೂವರೆ ಅಡಿ ಎತ್ತರದಲ್ಲಿ ನಮ್ಮ ಮನೆಯ ನೆಲವನ್ನು ಅಂದರೆ ಫ್ಲೋರಿಂಗ್ ಮಟ್ಟವನ್ನು ಹಾಕಿಕೊಳ್ಳಬಹುದು.
ಆದರೆ ಮ್ಯಾನ್‌ಹೋಲ್ ಗಳ ನಿಯೋಜನೆ ಸರಿಯಿಲ್ಲದೆ, ಅಲ್ಲಿ ಕಟ್ಟಿಕೊಂಡರೆ, ನಮ್ಮ ಮನೆಯಲ್ಲಿ ಹಿಮ್ಮುಖವಾಗಿ ಹರಿಯುವ ಸಾಧ್ಯತೆ ಇದೆ ಎಂದಾದರೆ, ಆಗ ಅನಿವಾರ್ಯವಾಗಿ ಹೆಚ್ಚು ಎತ್ತರದ ಪ್ಲಿಂತ್ ಹಾಕಿಕೊಳ್ಳಬೇಕು. ಕೆಲವೊಂದು ಸ್ಥಳಗಳಲ್ಲಿ ಮೂರು ಅಡಿ ನಾಲ್ಕು ಅಡಿ ಎತ್ತರದ ಪ್ಲಿಂತ್‌ಗಳನ್ನೂ ಹಾಕಬೇಕಾಗುತ್ತದೆ. ಆದರೆ ಇದು ದುಬಾರಿಯಾದ ಕಾರಣ, ನಾವು ಹಾಕಲೇಬೇಕಾದ ಪರಿಸ್ಥಿತಿಯಲ್ಲಿ ಮಾತ್ರ, ಪ್ರತಿನಿತ್ಯ ನಾಲ್ಕಾರು ಮೆಟ್ಟಿಲುಗಳನ್ನು ಹತ್ತಿದರೂ ಪರವಾಗಿಲ್ಲ, “ಬ್ಯಾಕ್ ಫ್ಲೋ’ ಮಾತ್ರ ಬೇಡ ಎಂದಾದರೆ ಆಗ ಎತ್ತರದ ಪ್ಲಿಂತ್ ಹಾಕಿಕೊಳ್ಳಬಹುದು. ಇಂಥಾ ತೊಂದರೆಗಳ ಬಗ್ಗೆ ಮನೆ ಕಟ್ಟುವಾಗಲೇ ತಿಳಿದಿದ್ದರೆ, ಮುಂಚಿತವಾಗಿ ಸೂಕ್ತ ತಯಾರಿ ಮಾಡಿಕೊಳ್ಳಬಹುದು!
ಕಂಬಗಳ ಮೇಲೆ ಮನೆ: ಎಲ್ಲೆಲ್ಲೂ ನೀರೋ ನೀರು ಎಂಬಂಥ ಸಂದರ್ಭದಲ್ಲಿ ನೀರು ಹಿಮ್ಮುಖವಾಗಿ ಹರಿಯುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ನಾವು ಮನೆ ಕಟ್ಟುವಾಗ, ಅಕ್ಕಪಕ್ಕದವರನ್ನು ವಿಚಾರಿಸಿ, ನಾಲ್ಕಾರು ವರ್ಷಗಳಲ್ಲಿ ಅತಿ ಹೆಚ್ಚು ಮಳೆ ಬಂದಾಗ, ನೀರಿನ ಮಟ್ಟ ಎಷ್ಟಿತ್ತು? ಹಾಗೂ ಅದರಿಂದ ಆದ ಇತರೆ ತೊಂದರೆಗಳೇನು? ಎಂದು ಪರಿಶೀಲಿಸಿ ಮನೆಯ ಮಟ್ಟವನ್ನು ನಿರ್ಧರಿಸಬೇಕಾಗುತ್ತದೆ. ಪ್ರವಾಹದ ಮಟ್ಟ ಪ್ರತಿವರ್ಷವೂ ನಾಲ್ಕಾರು ಅಡಿಗಳಷ್ಟು ಇರುತ್ತದೆ ಎಂದಾದರೆ, ಆಗ ಅನಿವಾರ್ಯವಾಗಿ “ಸ್ಟಿಲ್ಟ್ ಫ್ಲೋರ್’ ಅಂದರೆ, ಮನೆಯನ್ನು ಕಂಬಗಳ ಮೇಲೆ ಆಳೆತ್ತರಕ್ಕೆ ಎತ್ತಿ, ಎಷ್ಟೇ ಜೋರಾಗಿ ಮಳೆ ಬಂದರೂ ನಮ್ಮ ಮನೆಗೆ ನುಗ್ಗುವುದಿಲ್ಲ ಎನ್ನುವಂತೆ ವಿನ್ಯಾಸ ಮಾಡಬೇಕಾಗುತ್ತದೆ. ಇದೂ ಕೂಡ ದುಬಾರಿ ಸಂಗತಿಯೇ ಆದರೂ, ಕೆಳಗಡೆ ಬೇಕಾದರೆ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡಬಹುದು. ಆದರೆ ಒಮ್ಮೆ ಈ ವಾಹನಗಳು ಮುಳುಗಿದಾಗ, ಆಗುವ ಹಾನಿಯನ್ನು ಮೆಕಾನಿಕ್‌ಗಳಿಂದ ರಿಪೇರಿ ಮಾಡಿಸಿಕೊಳ್ಳಲು ತಯಾರಿರಬೇಕು!
ಹಿಂದಕ್ಕೆ ತಿರುಗಿಕೊಳ್ಳುತ್ತೆ!: ನಾವು ಎಲ್ಲೋ ಸ್ವಲ್ಪ ಕಟ್ಟಿಕೊಂಡಿರಬೇಕು ಎಂದು ಬಕೆಟ್ ನೀರನ್ನು ಜೋರಾಗಿ ಹುಯ್ದರೆ, ಅದು ಅಷ್ಟೇ ವೇಗವಾಗಿ ಹಿಂದಕ್ಕೆ ಬಂದು ಆಘಾತವನ್ನು ಉಂಟುಮಾಡುತ್ತದೆ. ನೀರಿಗೆ ಹರಿದು ಹೋಗಲು ಆಸ್ಪದವಿದ್ದರೆ ಎಷ್ಟು ಸರಾಗವಾಗಿ ಹರಿದು ಹೋಗುತ್ತದೋ ಅಷ್ಟೇ ಸುಲಭದಲ್ಲಿ, ಹರಿದುಹೋಗಲು ಆಗದಿದ್ದರೆ ಉಲ್ಟಾ ತಿರುಗುವುದೂ ಇದ್ದದ್ದೇ! ಇನ್ನು ಮನುಷ್ಯರೇ ಮುಳುಗಿ ಹೋಗುವ ಮ್ಯಾನ್‌ಹೋಲ್ ಗುಂಡಿ ತುಂಬಿಕೊಂಡರಂತೂ, ನಮ್ಮ ಮನೆಗಳಲ್ಲಿ ಬ್ಯಾಕ್ ಫ್ಲೋ ಆಗುವುದು ಖಾತರಿ. ರಸ್ತೆಯಲ್ಲಿ ಒಂದೆರಡು ಅಡಿ ನೀರು ನಿಂತರಂತೂ ಮನೆಯೊಳಗೆ ಎಲ್ಲ ಥರದ ನೀರೂ ಪ್ರವೇಶ ಪಡೆಯುತ್ತದೆ.
ಮಾಹಿತಿಗೆ: 984411 32826
* ಆರ್ಕಿಟೆಕ್ಟ್ ಕೆ. ಜಯರಾಮ್