ಹುಬ್ಬಳ್ಳಿ: ಕಂದಾಯ ಸಚಿವ ಆರ್. ಅಶೋಕ ಅವರು ಮಾ. 20ರಂದು ಗ್ರಾಮವಾಸ್ತವ್ಯ ಮಾಡಲಿರುವ ಛಬ್ಬಿ ಗ್ರಾಮದಲ್ಲಿ ಸರ್ವ ಸಿದ್ಧತೆ ಮಾಡಲಾಗಿದ್ದು, ಫಲಾನುಭವಿಗಳಿಗೆ ಇಲಾಖೆ ಸೌಲಭ್ಯಗಳ ವಿತರಣೆ ಹಾಗೂ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆಗೆ ಯೋಜನೆ ಭಾಗವಾಗಿ ಈ ಕಾರ್ಯಕ್ರಮ ಆಯೋಜಿಸಿದ್ದು, ಸಚಿವರು ಒಂದು ದಿನ ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಅಂದು ಬೆಳಗ್ಗೆ ಬೆಂಗಳೂರಿನಿಂದ ಆಗಮಿಸಿ 11:30 ಗಂಟೆಗೆ ಗ್ರಾಮಕ್ಕೆ ಆಗಮಿಸಲಿದ್ದಾರೆ. ಗ್ರಾಮದ ಸಿದ್ಧಾರೂಢ ಮಠ, ದಲಿತ ಕಾಲೋನಿಯ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡುವರು. ದಲಿತ ಕೇರಿಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ಜನರ ಕುಂದು-ಕೊರತೆ ಆಲಿಸುವರು ಎಂದು ತಿಳಿಸಿದರು.
ಕಂದಾಯ ಇಲಾಖೆ ವಿವಿಧ ಯೋಜನೆಗಳಾದ ವೃದ್ಧಾಪ್ಯ, ವಿಧವಾ ವೇತನ ಸೇರಿದಂತೆ ವಿವಿಧ ಇಲಾಖೆ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಲಿದ್ದಾರೆ. ಭೂ ಮಾಪನ ಇಲಾಖೆಯಿಂದ ಪೋಡಿ ಮುಕ್ತ ಗ್ರಾಮದ ಅಭಿಯಾನ ಸಹ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಯಶಸ್ವಿಗಾಗಿ ತಂತ್ರಾಂಶ ರೂಪಿಸಲಾಗಿದೆ ಎಂದರು.
ಸಚಿವರ ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಮಾ. 1ರಿಂದ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಲಾಗುತ್ತಿದೆ. ಇಲ್ಲಿಯವರೆಗೆ 266 ಅರ್ಜಿಗಳು ಬಂದಿದ್ದು, ಇವುಗಳಲ್ಲಿ 119 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಇತರೆ ಇಲಾಖೆಯ ಅರ್ಜಿಗಳನ್ನು ಆಯಾ ಇಲಾಖೆಗೆ ಕಳುಹಿಸಿ ನಿಗದಿತ ಸಮಯದೊಳಗೆ ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ.
ಗ್ರಾಮಕ್ಕೆ ಪ್ರೌಢಶಾಲೆ ಅಗತ್ಯತೆ ಕುರಿತು ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ರಾಮದ ಕೆರೆಗೆ ಅಲ್ಲಿನ ಕಾರ್ಖಾನೆಯಿಂದ ಕಲ್ಮಷ ನೀರು ಬಿಡುತ್ತಿರುವ ಕುರಿತು ಗಮನಕ್ಕೆ ಬಂದಿದ್ದು, ಸೂಕ್ತ ಗಮನ ಹರಿಸಲಾಗುವುದು ಎಂದು ಹೇಳಿದರು. ತಹಶೀಲ್ದಾರರಾದ ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ ಇದ್ದರು.