Advertisement
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪದ್ಮನಾಭನಗರದಲ್ಲಿರುವ ನಿವಾಸದಲ್ಲಿ ಶನಿವಾರ ರೇವಣ್ಣ ಅವರನ್ನು ಬಂಧಿಸಿ ಸಿಐಡಿ ಕಚೇರಿಗೆ ಕರೆತಂದ ಬಳಿಕ ಅವರ ಹೇಳಿಕೆ ದಾಖಲಿಸಿಕೊಳ್ಳಲು ಎಸ್‌ಐಟಿ ಪ್ರಯತ್ನಿಸುತ್ತಲೇ ಇದೆ. ಆದರೆ ವಿಚಾರಣೆಗೆ ರೇವಣ್ಣ ಸೂಕ್ತ ರೀತಿಯಲ್ಲಿ ಸ್ಪಂದಿಸದೆ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ರವಿವಾರ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿ ರೇವಣ್ಣ ಅವರನ್ನು 4 ದಿನ ವಶಕ್ಕೆ ಪಡೆದ ಬಳಿಕ ಮಹಿಳೆ ಅಪಹರಣ ಪ್ರಕರಣ, ಹೊಳೆನರಸೀಪುರದಲ್ಲಿ ದಾಖಲಾದ ಲೈಂಗಿಕ ಕಿರುಕುಳ ಪ್ರಕರಣ, ಹಾಸನದ ಅಶ್ಲೀಲ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದ ಒಂದೊಂದೇ ಪ್ರಶ್ನೆಗಳನ್ನು ಕೇಳಲಾರಂಭಿಸಿದ್ದಾರೆ. ಆದರೆ ರೇವಣ್ಣ ಮಾತ್ರ ಎಸ್‌ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡದಿರುವುದೇ ಎಸ್‌ಐಟಿಗೆ ತಲೆನೋವಾಗಿದೆ. ಹೀಗಾಗಿ ಸೋಮವಾರ ಬೆಳಗ್ಗಿನಿಂದ ಸಂಜೆವರೆಗೆ ರೇವಣ್ಣ ಅವರನ್ನು ಕೂಲಂಕಷವಾಗಿ ವಿಚಾರಣೆ ನಡೆಸಲು ಎಸ್‌ಐಟಿ ಅಧಿಕಾರಿಗಳು ಪೂರ್ವ ತಯಾರಿ ನಡೆಸಿದ್ದಾರೆ.
ಶನಿವಾರ ರಾತ್ರಿ ವಶಕ್ಕೆ ಪಡೆದ ಬಳಿಕ ರವಿವಾರ ಸಂಜೆವರೆಗೆ ಸಿಐಡಿ ಕಚೇರಿಯಲ್ಲಿದ್ದ ರೇವಣ್ಣ ಅವರನ್ನು ಸಂಜೆ ಶಿವಾಜಿ ನಗರದಲ್ಲಿರುವ ಲೇಡಿಕರ್ಜನ್ ಬೌರಿಂಗ್ ಆಸ್ಪತ್ರೆಗೆ ಎಸ್‌ಐಟಿ ತನಿಖಾಧಿಕಾರಿಗಳು ಕರೆ ತಂದರು. ಈ ವೇಳೆ ಮಾಧ್ಯಮದವರ ಜತೆಗೆ ಮಾತನಾಡಲು ಮುಂದಾದ ರೇವಣ್ಣ ಅವರನ್ನು ಸರಿಯಾಗಿ ಮಾತನಾಡಲು ಬಿಡದೆ ಎಸ್‌ಐಟಿ ಅಧಿಕಾರಿಗಳು ಬಲವಂತವಾಗಿ ಆಸ್ಪತ್ರೆಯೊಳಗೆ ಕರೆದೊಯ್ದರು. ಇದರಿಂದ ಅಸಮಾಧಾನಗೊಂಡರೂ ರೇವಣ್ಣ ಅನಿವಾರ್ಯವಾಗಿ ಎಸ್‌ಐಟಿ ಅಧಿಕಾರಿಗಳಿಗೆ ತಲೆಬಾಗಬೇಕಾಯಿತು. ಅನಂತರ ಬೌರಿಂಗ್ ಆಸ್ಪತ್ರೆಯ ನಾಲ್ವರು ವೈದ್ಯರ ತಂಡದಿಂದ ರೇವಣ್ಣಗೆ ಬಿಪಿ, ಶುಗರ್, ಇಸಿಜಿ ತಪಾಸಣೆ ನಡೆಸಲಾಯಿತು. ಏನಾದರೂ ಸಮಸ್ಯೆ ಇದೆಯಾ ಎಂದು ವೈದ್ಯರು ರೇವಣ್ಣ ಅವರನ್ನು ವಿಚಾರಿಸಿದರು. ಬಳಿಕ ಹೃದಯ ತಜ್ಞರು ಮತ್ತು ಗ್ಯಾಸ್ಟ್ರೋಎಂಟರಾಲಜಿಸ್ಟ್ ತಜ್ಞರಿಂದ ತಪಾಸಣೆ ನಡೆಸಲಾಯಿತು. ಈ ಪ್ರಕ್ರಿಯೆ ಬಳಿಕ ಬೌರಿಂಗ್ ಆಸ್ಪತ್ರೆಯಿಂದ ಕೋರಮಂಗಲದಲ್ಲಿರುವ ನ್ಯಾಯಾಧೀಶರ ಮನೆಗೆ ಕರೆದೊಯ್ಯಲಾಯಿತು. ಅಲ್ಲಿ ಸ್ವಲ್ಪ ಹೊತ್ತು ವಾದ-ಪ್ರತಿವಾದಗಳು ನಡೆದವು. ಅಂತಿಮವಾಗಿ ರೇವಣ್ಣ ಅವರನ್ನು ನ್ಯಾಯಾಲಯವು ಎಸ್‌ಐಟಿ ವಶಕ್ಕೆ ನೀಡಿತು. ಕೋರಮಂಗಲದಿಂದ ಸಿಐಡಿ ಕಚೇರಿಗೆ ಕರೆತಂದ ಎಸ್‌ಐಟಿ ತಂಡವು ಸ್ವಲ್ಪ ಕಾಲ ವಿಚಾರಣೆ ನಡೆಸಿತು. ಬಿಗಿ ಭದ್ರತೆ ಒದಗಿಸಿದ ಖಾಕಿ
ಎಚ್.ಡಿ. ರೇವಣ್ಣ ಪ್ರಭಾವಿ ನಾಯಕ ಹಾಗೂ ಶಾಸಕರಾಗಿರುವ ಕಾರಣ ಈಗಾಗಲೇ ಸಿಐಡಿ ಕಚೇರಿ ಮುಂದೆ ಬಿಗಿ ಭದ್ರತೆ ಒದಗಿಸಲಾಗಿದೆ. ಜತೆಗೆ ಕೋರಮಂಗಲದ ನ್ಯಾಯಾಧೀಶರ ಮನೆ ಬಳಿ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು. ಮನೆಯ ಮುಂಭಾಗದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು.