ಕೊನೆಗೂ ದಿವಾಕರನಿಗೆ ಒಂದೊಳ್ಳೆಯ ಕಾಲ ಬರುತ್ತದೆ. ಇಷ್ಟವಿಲ್ಲದೇ, ಅಪ್ಪನ ಬಲವಂತಕ್ಕೆ ಪೊಲೀಸ್ ಇಲಾಖೆ ಸೇರಿದ್ದ ದಿವಾಕರನಿಗೆ ಇಲಾಖೆ ಒಂದು ಕೇಸ್ ಒಪ್ಪಿಸುತ್ತದೆ. ಕೇಸ್ ಒಪ್ಪಿಕೊಳ್ಳುವ ಮುನ್ನ ಮೂರು ಷರತ್ತುಗಳನ್ನು ವಿಧಿಸುತ್ತಾನೆ ದಿವಾಕರ. ಮೊದಲನೇಯದಾಗಿ, ನನ್ನ ಟೈಮ್‌ಗೆ ನಾನು ಸ್ಟೇಷನ್‌ಗೆ ಬರೋದು, ತಿರುಗಾಡಲು ಒಂದು ಜಾವಾ ಬೈಕ್ ಕೊಡಿಸಬೇಕು ಹಾಗೂ ಕೊನೆಯದಾಗಿ, ಮೇಲಾಧಿಕಾರಿಗಳ ಮೇಲೆ ದರ್ಪ, ಅಶಿಸ್ತು ಎಂಬ ಕಾರಣ ನೀಡಿ ತನ್ನನ್ನು ಕೆಲಸದಿಂದ ತೆಗೆದುಹಾಕಬೇಕು…
ಈ ಮೂರು ಷರತ್ತುಗಳನ್ನು ಮೇಲಾಧಿಕಾರಿಗಳು ಒಪ್ಪಿದ ನಂತರವೇ ದಿವಾಕರ ಪತ್ತೆದಾರಿ ಕೆಲಸ ಶುರುಹಚ್ಚಿಕೊಳ್ಳುತ್ತಾನೆ. ತುಂಬಾ ಉತ್ಸಾಹದಿಂದ ತನಿಖೆಗೆ ಹೊರಡುವ ದಿವಾಕರ ಅದರಲ್ಲಿ ಯಶಸ್ಸು ಕಾಣುತ್ತಾನಾ ಎಂಬ ಕುತೂಹಲ ನಿಮಗಿದ್ದರೆ ನೀವು “ಬೆಲ್ ಬಾಟಮ್’ ನೋಡಬಹುದು. “ಬೆಲ್ ಬಾಟಮ್’ ಒಂದು ಥ್ರಿಲ್ಲರ್ ಸಿನಿಮಾ. ಪತ್ತೆದಾರಿ ಕಥೆ, ಕಾದಂಬರಿಗಳನ್ನು ಇಷ್ಟಪಡುವವರಿಗೆ “ಬೆಲ್ ಬಾಟಮ್’ ಕಥೆ ಇಷ್ಟವಾಗಬಹುದು.
ದಯಾನಂದ ಟಿ.ಕೆಯವರು ಬರೆದ ಕಥೆ ತುಂಬಾ ಮಜವಾಗಿದೆ ಮತ್ತು ಸಾಕಷ್ಟು ಕುತೂಹಲದ ಅಂಶಗಳನ್ನು ಒಳಗೊಂಡಿದೆ. ಮುಖ್ಯವಾಗಿ ಈ ಕಥೆಯ ಆಶಯ ಹಾಗೂ ಜೋಡಿಸಿಕೊಂಡು ಹೋದ ಕೊಂಡಿಗಳು ಗಮನಸೆಳೆಯುತ್ತವೆ. ಕಾದಂಬರಿ, ಕಥೆಯೊಂದನ್ನು ಸಿನಿಮಾಕ್ಕೆ ಇಳಿಸುವಾಗ ಒಬ್ಬ ನಿರ್ದೇಶಕನಿಗೆ ಒಂದಷ್ಟು ಸವಾಲುಗಳು ಎದುರಾಗುತ್ತವೆ. ಮೂಲಕಥೆಯ ಆಶಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಜೊತೆಗೆ ಸಿನಿಮಾ ಪ್ರೇಕ್ಷಕನಿಗೆ ಬೇಕಾದ ರೋಚಕತೆ, ಟ್ವಿಸ್ಟ್ ಹಾಗೂ ವೇಗ ಕಾಯ್ದುಕೊಳ್ಳುವುದು.
“ಬೆಲ್ ಬಾಟಮ್’ ಚಿತ್ರ ನೋಡಿದಾಗ ನಿಮಗೆ, ನಿರ್ದೇಶಕರು ಇನ್ನಷ್ಟು ರೋಚಕವಾಗಿ ಕಟ್ಟಿಕೊಡಬಹುದಿತ್ತು ಎಂದೆನಿಸದೇ ಇರದು. ಪತ್ತೆದಾರಿ ಸಿನಿಮಾದಲ್ಲಿರಬೇಕಾದ ಕ್ಷಣ ಕ್ಷಣದ ಕುತೂಹಲ, ಟ್ವಿಸ್ಟ್ ಇಲ್ಲಿ ಕೊಂಚ ಕಡಿಮೆ ಎನಿಸಿದರೂ, ಚಿತ್ರ ಪ್ರೇಕ್ಷಕನನ್ನು ರಂಜಿಸುವಲ್ಲಿ ಹಿಂದೆ ಬಿದ್ದಿಲ್ಲ. ಸಿನಿಮಾದ ಮೊದಲರ್ಧದಲ್ಲಿ ದಿವಾಕರನ ಇಂಟ್ರೋಡಕ್ಷನ್, ಪ್ರೇಮಪುರಾಣ ಹಾಗೂ ತನಿಖೆಯ ಹಾದಿಗೆ ನಾಂದಿಯಾಡಿದ್ದಾರಷ್ಟೇ. ಹಾಗಾಗಿ, ಇಲ್ಲಿ ನೀವು ಒಂದಷ್ಟು ನಗೆಬುಗ್ಗೆಗಳನ್ನು ಬಿಟ್ಟು ಹೆಚ್ಚಿನ ಥ್ರಿಲ್ಲರ್ ಅಂಶಗಳನ್ನು ನಿರೀಕ್ಷಿಸುವಂತಿಲ್ಲ.
ಹಾಗಾಗಿ, ಇದನ್ನು ಕಾಮಿಡಿ ಥ್ರಿಲ್ಲರ್ ಜಾನರ್ ಸಿನಿಮಾ ಎಂದು ಕರೆಯಬಹುದು. ಚಿತ್ರದಲ್ಲಿ ಥ್ರಿಲ್ಲರ್ ಅಂಶಗಳ ಜೊತೆಗೆ ಕಾಮಿಡಿಗೂ ಹೆಚ್ಚಿನ ಮಹತ್ವ ನೀಡಿದ್ದಾರೆ. ಹಾಗಾಗಿ, ಒಮ್ಮೊಮ್ಮೆ ತನಿಖೆಯನ್ನು ಪಕ್ಕಕ್ಕೆ ಸರಿಸಿ, ಕಾಮಿಡಿ, ಲವ್ ಮೊದಲ ಸ್ಥಾನದಲ್ಲಿ ಬಂದು ಕೂರುತ್ತದೆ. ಇನ್ನು, ಇಡೀ ಸಿನಿಮಾದ ಮಜಾ ಅಡಗಿರುವುದು ಕ್ಲೈಮ್ಯಾಕ್ಸ್‌ನಲ್ಲಿ. ಒಂದೊಂದು ಅಂಶಗಳು ಬಿಚ್ಚಿಕೊಳ್ಳುವ ಮೂಲಕ ಪ್ರೇಕ್ಷಕನ ಕುತೂಹಲ ಕೂಡಾ ಹೆಚ್ಚುತ್ತದೆ.
ಇದೇ ಕುತೂಹಲ ಚಿತ್ರದ ಆರಂಭದಿಂದಲೂ ಇದ್ದಿದ್ದರೆ ಪ್ರೇಕ್ಷಕ ಸಿನಿಮಾವನ್ನು ಇನ್ನಷ್ಟು ಎಂಜಾಯ್ ಮಾಡುತ್ತಿದ್ದ. ಚಿತ್ರದಲ್ಲಿ ಬರುವ ಒಂದಷ್ಟು ಸಸ್ಪೆನ್ಸ್ ಪಾಯಿಂಟ್‌ಗಳು ಈ ಸಿನಿಮಾದ ಹೈಲೈಟ್ಸ್. ಇದೊಂದು ರೆಟ್ರೋ ಶೈಲಿಯ ಚಿತ್ರ. ವೇಷ-ಭೂಷಣ ಹಾಗೂ ಅದಕ್ಕೆ ಹೊಂದುವಂತಹ ಪರಿಸರವನ್ನು ಕಟ್ಟಿಕೊಡಲಾಗಿದೆ. ಚಿತ್ರದ ಕಥೆಗೆ ಪೂರಕವಾಗಿರುವ ರಘು ನಿಡುವಳ್ಳಿ ಸಂಭಾಷಣೆ ಆಗಾಗ ನಗುತರಿಸುತ್ತದೆ.
ನಾಯಕ ರಿಷಭ್ ಶೆಟ್ಟಿ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ ಮತ್ತು ನಟನೆಗೂ ಸೈ ಎಂಬುದನ್ನು ಸಾಬೀತು ಮಾಡಿದ್ದಾರೆ. ನಾಯಕಿ ಹರಿಪ್ರಿಯಾ, ಕುಸುಮ ಪಾತ್ರದಲ್ಲಿ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ಯೋಗರಾಜ್ ಭಟ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಸುಜಯ್ ಶಾಸಿŒ, ಶಿವಮಣಿ ಸೇರಿದಂತೆ ಇತರರು ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತದ ಎರಡು ಹಾಡುಗಳು ಇಷ್ಟವಾಗುತ್ತವೆ. ಅರವಿಂದ್ ಕಶ್ಯಪ್ ಛಾಯಾಗ್ರಹಣದಲ್ಲಿ ರೆಟ್ರೋ ರಂಗಿದೆ.
ಚಿತ್ರ: ಬೆಲ್ ಬಾಟಮ್
ನಿರ್ಮಾಣ: ಸಂತೋಷ್ ಕುಮಾರ್ ಕೆ.ಸಿ
ನಿರ್ದೇಶನ: ಜಯತೀರ್ಥ
ತಾರಾಗಣ: ರಿಷಭ್ ಶೆಟ್ಟಿ, ಹರಿಪ್ರಿಯಾ, ಅಚ್ಯುತ್ ಕುಮಾರ್, ಯೋಗರಾಜ್ ಭಟ್, ಪ್ರಮೋದ್ ಶೆಟ್ಟಿ, ಶಿವಮಣಿ ಮತ್ತಿತರರು.
* ರವಿಪ್ರಕಾಶ್ ರೈ