ನವದೆಹಲಿ: ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಪ್ಯಾಕ್ ಮಾಡಿದ ವಸ್ತುಗಳಿಗೆ ಬೇಡಿಕೆ ಪ್ರಸಕ್ತ ವಿತ್ತೀಯ ವರ್ಷದ ಎರಡನೇ ತೈಮಾಸಿಕದಲ್ಲಿ ಕೊಂಚ ಏರಿಕೆಯಾಗಿದೆ.
ಮುಂದಿನ ವಿತ್ತೀಯ ವರ್ಷದಲ್ಲಿ ಅದರ ಪ್ರಮಾಣ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಸೋಂಕಿನ ಪ್ರಭಾವ ತಗ್ಗುತ್ತಲೇ ವಾಣಿಜ್ಯಿಕ ವಹಿವಾಟುಗಳಲ್ಲಿ ಮತ್ತಷ್ಟು ಚೇತರಿಕೆ ಕಾಣುತ್ತಿದೆ ಎಂಬ ಅಂಶ ಈ ಬೆಳವಣಿಗೆಯಿಂದ ಮತ್ತಷ್ಟು ದೃಢವಾಗಿದೆಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆಯಾದ “ಎಡಲ್‌ವೈಸಿಸ್’ ನಡೆಸಿದ ಅಧ್ಯಯನದಲ್ಲಿ ಹೇಳಿದೆ.
ಎರಡನೇ ಅಲೆಯ ತೀವ್ರತೆ ಇಳಿಕೆಯಾದ ಬಳಿಕ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ವಸ್ತುಗಳಿಗೆ ಬೇಡಿಕೆ ನಗರ ಪ್ರದೇಶಗಳಿಗಿಂತ ಹೆಚ್ಚಾಗಿದೆ. ಇದರ ಜತೆಗೆ ನಗರ ಪ್ರದೇಶಗಳಲ್ಲಿಯೂ ಕೂಡ ವಿವಿಧ ರೀತಿಯ ವಸ್ತುಗಳಿಗೆ ಮತ್ತು ಸೇವೆಗಳಿಗೆ ಬೇಡಿಕೆ ವೃದ್ಧಿಯಾಗುತ್ತಿದೆ ಎಂದು ಸಂಶೋಧನಾ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಪ್ರಸ್ತಾಪಿಸಲಾಗಿದೆ.
ಎರಡು ವರ್ಷಗಳ ಬೆಳವಣಿಗೆಗಳನ್ನು ಅಧ್ಯಯನ ಮಾಡಿರುವ ಎಡಲ್‌ವೈಸಿಸ್ ಸಂಸ್ಥೆ, ಮಾರುಕಟ್ಟೆ ಗ್ರಾಮೀಣ ಭಾಗದಲ್ಲಿ ಚೇತರಿಕೆ ಕಾಣುತ್ತಿದ್ದರೂ, ಕೊರೊನಾ ಶುರುವಾಗುವ ಮೊದಲಿನ ದಿನಗಳಿಗೆ ಇನ್ನೂ ತಲುಪಿಲ್ಲ ಎಂದು ಅದರಲ್ಲಿ ಅಭಿಪ್ರಾಯಪಡಲಾಗಿದೆ.
ಇದನ್ನೂ ಓದಿ:ಮತಾಂತರ ನಿಷೇಧ ಕಾಯ್ದೆ ಜಾರಿ ಖಚಿತ: ಈಶ್ವರಪ್ಪ
2022-23ನೇ ಸಾಲಿನಲ್ಲಿ ಪ್ರಸಕ್ತ ವರ್ಷಕ್ಕಿಂತ ಹೆಚ್ಚು ಚೇತರಿಕೆಯ ವಾತಾವರಣ ಕಂಡುಬರಲಿದೆ ಎಂದು ಉತ್ತಮ ನಿರೀಕ್ಷೆ ವ್ಯಕ್ತಪಡಿಸಲಾಗಿದೆ.
ನಗರ ಪ್ರದೇಶಗಳಲ್ಲಿ ವಿವಿಧ ಸೇವಾ ಕ್ಷೇತ್ರ ಮತ್ತು ಉದ್ಯಮ ವಹಿವಾಟುಗಳು ಚೇತರಿಕೆ ಕಾಣುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿಯೂ ಮುಂದಿನ ದಿನಗಳಲ್ಲಿ ಚೇತರಿಕೆ ಕಾಣಬುಹುದು ಎಂದು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ.