Advertisement

ಲೋಹದ ಹಕ್ಕಿಗಳು ರೆಕ್ಕೆ ಬಿಚ್ಚುವುದು ನಿಶ್ಚಿತ ; 2-3 ದಿನಗಳಲ್ಲಿ ವಿಮಾನಯಾನ ಸೇವೆ ಆರಂಭ

08:42 AM May 14, 2020 | Hari Prasad |

ಹೊಸದಿಲ್ಲಿ: ಈಗ ರೈಲು ಸೇವೆ ಆರಂಭವಾಗಿರುವಂತೆ ಮೇ 17ರ ಬಳಿಕ ದೇಶೀಯ ಮಟ್ಟದಲ್ಲಿ ವಿಮಾನಗಳ ಹಾರಾಟ ಬಹುತೇಕ ನಿಶ್ಚಿತ. ಮೇ 17ಕ್ಕೂ ಮುಂಚಿತವಾಗಿಯೇ ಆರಂಭವಾದರೂ ಅಚ್ಚರಿ ಇಲ್ಲ!

Advertisement

ಹೌದು, ಮೂಲಗಳ ಪ್ರಕಾರ ಇನ್ನು ಎರಡು ಅಥವಾ ಮೂರು ದಿನಗಳಲ್ಲಿ ದೇಶದೊಳಗೆ ನಾಗರಿಕ ವಿಮಾನಯಾನ ಆರಂಭವಾಗಲಿದೆ.

ಬಹುತೇಕ ಎರಡು ತಿಂಗಳುಗಳ ಬಳಿಕ ವಿವಿಧ ಸಂಸ್ಥೆಗಳ ವಾಣಿಜ್ಯ ವಿಮಾನಗಳು ರೆಕ್ಕೆ ಬಿಚ್ಚಲಿವೆ ಎಂದು ಸರಕಾರದ ಉನ್ನತ ಮೂಲಗಳೇ ದೃಢಪಡಿಸಿದ್ದು, ಅಂತಿಮ ನಿರ್ಧಾರ ಪ್ರಕಟಿಸುವುದು ಬಾಕಿ ಇದೆ.

ಸೇವೆ ಪುನರಾರಂಭ ಕುರಿತು ನಾಗರಿಕ ವಿಮಾನ ಯಾನ ಸಚಿವಾಲಯವು ಈಗಾಗಲೇ ವಿವರವಾಗಿರುವ ಮಾರ್ಗಸೂಚಿ (ಎಸ್‌ಒಪಿ) ಸಿದ್ಧಪಡಿಸಿದೆ. ಆರೋಗ್ಯವಂತರಿಗೆ ಮಾತ್ರ ಪ್ರಯಾಣ ಅವಕಾಶ, 80 ವರ್ಷ ಮೇಲ್ಪಟ್ಟವರು ವಿಮಾನ ಏರುವಂತಿಲ್ಲ, ಕ್ಯಾಬಿನ್‌ ಲಗೇಜ್‌ ನಿರ್ಬಂಧ, 2 ತಾಸಿಗೂ ಕಡಿಮೆ ಪ್ರಯಾಣ ಅವಧಿಯ ವಿಮಾನಗಳಲ್ಲಿ ಕೇಟರಿಂಗ್‌ ಸೇವೆಗೆ ಬ್ರೇಕ್‌ ಸಹಿತ ಹಲವು ಅಂಶಗಳನ್ನು ಈ ಮಾರ್ಗಸೂಚಿ ಒಳಗೊಂಡಿದೆ.

ಕಡಿಮೆ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಣೆ ಆರಂಭಿಸಲಿರುವ ವಿಮಾನಗಳು ಪ್ರಮುಖ ನಗರಗಳಿಗೆ ಮಾತ್ರ ಸಂಪರ್ಕ ಕಲ್ಪಿಸಲಿವೆ. ವಿಮಾನಗಳಲ್ಲಿ ಕಾರ್ಯನಿರ್ವಹಿಸುವ ಸಿಬಂದಿ ಮತ್ತು ಪ್ರಯಾಣಿಕರ ಸುರಕ್ಷೆಯ ದೃಷ್ಟಿಯಿಂದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕೇಂದ್ರ ಸರಕಾರ ಸೂಚಿಸಿದೆ.

Advertisement

ಆಸನಗಳಲ್ಲಿ ಒಬ್ಬರು ಮಾತ್ರ
ವಿಮಾನಗಳ ಒಳಗೆ ಆಸನಗಳಲ್ಲಿ ಒಬ್ಬರು ಮಾತ್ರ ಅವಕಾಶವಿದ್ದು, ಅವರ ಹಿಂದಿನ ಒಂದು ಆಸನ ಖಾಲಿ ಇರಲಿದೆ. ಪ್ರಯಾಣಿಕರ ರಿಪೋರ್ಟಿಂಗ್‌ ಸಮಯವನ್ನು 2 ತಾಸಿಗೆ ವಿಸ್ತರಿಸುವ ಚಿಂತನೆಯಿದ್ದು, ವಿಮಾನ ಹೊರಡಲು ಆರು ತಾಸು ಬಾಕಿ ಇರುವಾಗ ಮಾತ್ರ ಪ್ರಯಾಣಿಕರನ್ನು ನಿಲ್ದಾಣದೊಳಗೆ ಬಿಡಲಾಗುತ್ತದೆ.

ಒಬ್ಬ ಪ್ರಯಾಣಿಕ 20 ಕೆಜಿಗಿಂತ ಕಡಿಮೆ ತೂಕದ ಒಂದು ಬ್ಯಾಗೇಜ್‌ ಮಾತ್ರ ಕೊಂಡೊಯ್ಯಲು ಅವಕಾಶ. 80 ವರ್ಷ ಮೇಲ್ಪಟ್ಟಿರುವ ಅಥವಾ ತೀವ್ರ ಜ್ವರ ಹೊಂದಿರುವ ಕಾರಣಕ್ಕಾಗಿ ಬೋರ್ಡಿಂಗ್‌ ವೇಳೆ ತಡೆಯಲ್ಪಟ್ಟವರು ಪ್ರಯಾಣ ದಿನಾಂಕವನ್ನು ದಂಡವಿಲ್ಲದೆ ಬದಲಿಸಿಕೊಳ್ಳಬಹುದು. ಆರೋಗ್ಯ ಸೇತು ಆ್ಯಪ್‌ನಲ್ಲಿ ಸ್ಟೇಟಸ್‌ ಗ್ರೀನ್‌ ಇದ್ದರೆ ಮಾತ್ರ ಪ್ರಯಾಣ ಅವಕಾಶ.

ಮಾರ್ಗಸೂಚಿಗಳು
– 80 ವರ್ಷ ಮೇಲ್ಪಟ್ಟವರು ವಿಮಾನ ಏರುವಂತಿಲ್ಲ

– ಎರಡು ತಾಸಿಗೆ ಕಡಿಮೆ ಪ್ರಯಾಣ ಅವಧಿಯ ವಿಮಾನಗಳಲ್ಲಿ ಕೇಟರಿಂಗ್‌ ಇಲ್ಲ

– ಕೆಲವು ಉಪಾಹಾರ ಮಾತ್ರ ಒದಗಿಸಲು ಅವಕಾಶ

– ಕ್ಯಾಬಿನ್‌ ಲಗೇಜ್‌ ಒಯ್ಯಲು ಅವಕಾಶವಿಲ್ಲ

– ಮನೆಯಿಂದಲೇ ವೆಬ್‌ ಚೆಕ್‌ಇನ್‌

– ಧೂಮಪಾನ, ಪ್ರಾರ್ಥನ ಕೊಠಡಿ ಇರದು

– ಆರೋಗ್ಯ ಸೇತು ಆ್ಯಪ್‌, ಮಾಸ್ಕ್, ಕೈಗವಸು ಕಡ್ಡಾಯ

– ಕ್ವಾರೆಂಟೈನ್‌ಗೆ ಒಳಪಟ್ಟವರಿಂದ ಮಾಹಿತಿ ಕಡ್ಡಾಯ

– ಸೋಂಕು ಶಂಕಿತ ಪ್ರಯಾಣಿಕರಿಗೆ ಪ್ರತ್ಯೇಕ ಆಸನ

– ನಿರ್ಗಮನಕ್ಕೆ ಒಂದು ತಾಸು ಮುನ್ನ ಬೋರ್ಡಿಂಗ್‌

Advertisement

Udayavani is now on Telegram. Click here to join our channel and stay updated with the latest news.

Next