ಬೆಂಗಳೂರು: ಪರೀಕ್ಷೆ ಬರೆದ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ತಿಂಗಳುಗಳ ಕಾಲ ಕಾಯುತ್ತಿದ್ದ ಪರಿಸ್ಥಿತಿ ಈಗ ಕಡಿಮೆಯಾಗಿದೆ. ಪರೀಕ್ಷೆ ಮುಗಿದ ಅರ್ಧಗಂಟೆಯೊಳಗೆ ಫಲಿತಾಂಶ ನೀಡುವ ವ್ಯವಸ್ಥೆ ಬಂದಿದೆ.
ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ(ಆರ್‌ಜಿಯುಎಚ್‌ಎಸ್)ಈ ಹಿಂದೆ ಕೆಲವು ಕೋರ್ಸ್‌ನ ವಿದ್ಯಾರ್ಥಿಗಳ ಪರೀಕ್ಷೆ ಮುಗಿದ 15 ನಿಮಿಷದಲ್ಲೇ ಫಲಿತಾಂಶ ನೀಡಿ ದಾಖಲೆ ಮಾಡಿತ್ತು. ಆದರೆ, ಆಗ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆ ಇತ್ತು. ಈಗ ಸುಮಾರು 8 ಸಾವಿರ ವಿದ್ಯಾರ್ಥಿಗಳ ಫಲಿತಾಂಶ ಪರೀಕ್ಷೆ ಮುಗಿದ ಅರ್ಧಗಂಟೆಯಲ್ಲಿ ನೀಡುವ ಮೂಲಕ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಎಂಬಿಬಿಎಸ್ ಪದವಿಯ ಪ್ರಮುಖ ಕೋರ್ಸ್‌ನ 8,174 ವಿದ್ಯಾರ್ಥಿಗಳಿಗೆ ಜುಲೈ 3ರಂದು ಥಿಯರಿ ಪರೀಕ್ಷೆ ನಡೆಸಲಾಗಿತ್ತು. ಒಬ್ಬ ವಿದ್ಯಾರ್ಥಿಯ ಸರಾಸರಿ 6 ಉತ್ತರ ಪತ್ರಿಕೆಯಂತೆ ಸುಮಾರು 61 ಸಾವಿರ ಉತ್ತರ ಪ್ರತಿಗಳ ಮೌಲ್ಯಮಾಪನ ನಿರ್ದಿಷ್ಟ ಸಮಯದೊಳಗೆ ಮುಗಿಸಿದ್ದರು.
ಜುಲೈ 25ರಿಂದ ಆ.5ರ ವರೆಗೆ ಬಹುತೇಕ ಎಲ್ಲ ವೈದ್ಯಕೀಯ ಕಾಲೇಜಿನಲ್ಲೂ 8174 ವಿದ್ಯಾರ್ಥಿಗಳಿಗೆ ವೈವಾ ಮತ್ತು ಪ್ರಾಯೋಗಿಕ ಪರೀಕ್ಷೆ ನಡೆಸಿದ್ದರು. ಭಾನುವಾರ(ಆ.5) ಪ್ರಾಯೋಗಿಕ ಪರೀಕ್ಷೆ ಮತ್ತು ವೈವಾ ಮುಗಿಯುತ್ತಿದ್ದಂತೆ ಎಲ್ಲ ಕಾಲೇಜುಗಳಿಂದ ವಿದ್ಯಾರ್ಥಿಗಳ ಅಂಕದ ಮಾಹಿತಿ ಆಲ್‌ಲೈನ್ ಮೂಲಕ ಅಪ್‌ಲೋಡ್ ಮಾಡಲಾಗಿತ್ತು. ವಿಶ್ವವಿದ್ಯಾಲಯದ ಕೇಂದ್ರ ಕಚೇರಿಯಲ್ಲಿ ಥಿಯರಿ ಅಂಕಗಳ ಜತೆಗೆ ಪ್ರಾಯೋಗಿಕ ಅಂಕಗಳನ್ನು ಕ್ರೋಢೀಕರಿಸಿ ಅಂತಿಮ ಫಲಿತಾಂಶವನ್ನು ಪರೀಕ್ಷೆ ಮುಗಿದ 30 ನಿಮಿಷದಲ್ಲಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಕಾಲೇಜುಗಳ ನಿಗದಿತ ಸಮಯದಲ್ಲಿ ಪ್ರಾಯೋಗಿಕ ಪರೀಕ್ಷೆ ಮತ್ತು ವೈವಾ ಮಾಹಿತಿ ಅಪ್‌ಲೋಡ್ ಮಾಡಿದ್ದರಿಂದ 8 ಸಾವಿರ ವಿದ್ಯಾರ್ಥಿಗಳ ಫಲಿತಾಂಶ ಪರೀಕ್ಷೆ ಮುಗಿದ ಅರ್ಧಗಂಟೆಯಲ್ಲಿ ನೀಡಲು ಸಾಧ್ಯವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಕಾಲೇಜುಗಳಿಗೂ ಅನುಕೂಲ ಹೆಚ್ಚಿದೆ ಎಂದು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಮೌಲ್ಯಮಾಪನ ಕುಲಸಚಿವ ಡಾ.ಎಂ.ಕೆ.ರಮೇಶ್ ಮಾಹಿತಿ ನೀಡಿದರು.
ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲೂ ಪಡೆದ ಅಂಕ, ಉತ್ತೀರ್ಣವಾದ ಶ್ರೇಣಿ, ಒಟ್ಟು ಫಲಿತಾಂಶ, ಕಾಲೇಜಿನ ವಿವರ ಇತ್ಯಾದಿ ಎಲ್ಲವೂ ವಿಶ್ವವಿದ್ಯಾಲಯದ ವೆಬ್‌ಸೈಟ್
www.rguhs.ac.inನಲ್ಲಿ ಲಭ್ಯವಿದೆ. ಸಂಬಂಧಪಟ್ಟ ವಿದ್ಯಾರ್ಥಿಗಳು ವೆಬ್‌ಸೈಟ್‌ನಿಂದ ಅಗತ್ಯ ಮಾಹಿತಿ ಪಡೆಯಬಹುದು ಎಂದರು.