Advertisement

ಫಲಿತಾಂಶ ವಿಳಂಬ: ವಿದ್ಯಾರ್ಥಿಗಳ ಪ್ರತಿಭಟನೆ

11:18 AM Aug 19, 2017 | Team Udayavani |

ಕಲಬುರಗಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಇಂಜಿನಿಯರಿಂಗ್‌ ಫಲಿತಾಂಶ ವಿಳಂಬ ಖಂಡಿಸಿ ಹಾಗೂ
ಇಯರ್‌ ಬ್ಯಾಕ್‌, ಕ್ರಿಟಿಕಲ್‌ ಇಯರ್‌ ಬ್ಯಾಕ್‌ ವ್ಯವಸ್ಥೆ ರದ್ದುಪಡಿಸುವಂತೆ ಒತ್ತಾಯಿಸಿ ಶುಕ್ರವಾರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಹೋರಾಟ ಸಮಿತಿ ಹಾಗೂ ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಜೇಷನ್‌ ನೇತೃತ್ವದಲ್ಲಿ ತಾಂತ್ರಿಕ ಕಾಲೇಜುಗಳ ವಿದ್ಯಾರ್ಥಿಗಳು ಆರ್‌ಟಿಒ ಕ್ರಾಸ್‌ನಿಂದ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನೆಕಾರರು ನಂತರ ಜಿಲ್ಲಾ ಧಿಕಾರಿ ಮೂಲಕ ರಾಜ್ಯದ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಪತ್ರ ಸಲ್ಲಿಸಿ, ವಿಟಿಯು ಇಂಜಿನಿಯರಿಂಗ್‌ ಫಲಿತಾಂಶವು ಐದು ತಿಂಗಳ ವಿಳಂಬದ ನಂತರ ಪ್ರಕಟಗೊಂಡಿದೆ. ಸಾವಿರಾರು ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ. ಅವರಲ್ಲಿ ಹಲವು ವಿದ್ಯಾರ್ಥಿಗಳ ಫಲಿತಾಂಶ ಅವರು ಪರೀಕ್ಷೆಯನ್ನು ಎದುರಿಸಬೇಕಾದ ದಿನವೇ ಹೊರ ಬಂದಿದೆ. ಇನ್ನು ಕೆಲವು ವಿದ್ಯಾರ್ಥಿಗಳು ಒಂದೇ ದಿನ ಎರಡು ಪರೀಕ್ಷೆಗಳನ್ನು ಎದುರಿಸಬೇಕಾದ ಸ್ಥಿತಿ ಇತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿಬಿಸಿಎಸ್‌ ವಿದ್ಯಾರ್ಥಿಗಳು ಅನುತ್ತೀರ್ಣರಾದರೆ ಅವರ ಅಂಕವನ್ನು ಸೊನ್ನೆ ಎಂದಷ್ಟೇ ನಮೂದಿಸಲಾಗುತ್ತದೆ. ಆ ವಿದ್ಯಾರ್ಥಿಗಳಿಗೆ ತಮ್ಮ ಅಂಕಗಳ ಕುರಿತು ತಿಳಿಯುವುದೇ ಇಲ್ಲ. ಪ್ರಸ್ತುತ 2010ರ ಮಾದರಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಆ ಪಠ್ಯಕ್ರಮವನ್ನು ಓದುತ್ತಿರುವ ಕೊನೆಯ ಸಾಲು, ಇಯರ್‌ ಬ್ಯಾಕ್‌ ಆದಲ್ಲಿ ಅವರು ಸಂಪೂರ್ಣವಾಗಿ ಸಿಬಿಸಿಎಸ್‌ ಮಾದರಿಯಲ್ಲಿ ಕಲಿಕೆ ಮುಂದುವರಿಸಬೇಕಾಗುತ್ತದೆ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ. ವಿದ್ಯಾರ್ಥಿಗಳು ಈಗಾಗಲೇ ಸಾಕಷ್ಟು ಮಾನಸಿಕ ಹಿಂಸೆ ಅನುಭವಿಸಿದದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಕೂಡಲೇ 2010ರ ಸ್ಕೀಮ್‌ನ ವಿದ್ಯಾರ್ಥಿಗಳಿಗೆ ಇಯರ್‌ ಬ್ಯಾಕ್‌ ಮತ್ತು ಕ್ರಿಟಿಕಲ್‌ ಇಯರ್‌ ಬ್ಯಾಕ್‌ ವ್ಯವಸ್ಥೆಯನ್ನು ತೆಗೆದುಹಾಕುವಂತೆ, ಸಿಬಿಸಿಎಸ್‌ ವಿದ್ಯಾರ್ಥಿಗಳಿಗೆ ಪೂರಕ
ಪರೀಕ್ಷೆಯನ್ನು ನಡೆಸುವಂತೆ, ಸಿಬಿಸಿಎಸ್‌ ವಿದ್ಯಾರ್ಥಿಗಳು ಅನುತ್ತೀರ್ಣರಾದ ವಿಷಯಗಳಲ್ಲಿ ಗಳಿಸಿರುವ ಅಂಕಗಳನ್ನು ಪ್ರಕಟಿಸುವಂತೆ ಆಗ್ರಹಿಸಿದರು. ಸಂಚಾಲಕ ಹಣಮಂತ ಎಸ್‌.ಎಚ್‌., ಹಾಗೂ ಸಹ ಸಂಚಾಲಕ ಶಿವಕುಮಾರ ಸೊನ್ನ, ಶರಣು ಹೇರೂರ, ಅಬಯಾ ದಿವಾಕರ, ಈರಣ್ಣ ಇಸಬಾ, ಶಿವಕುಮಾರ, ಅಕ್ಷಯ್‌, ರೇವಣಸಿದ್ಧ ನಾಸಿ, ಜಗದೀಶ, ಆಕಾಶ, ಬಾಪುರಾವ್‌, ಶಿವಶರಣ,  ರುಣಕುಮಾರ ಪಾಟೀಲ, ಶಶಿಕುಮಾರ, ಕೃಷ್ಣ ಸಾಗರ್‌, ದಿಗಂಬರ್‌ ಮುಂತಾದವರು  ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next