Advertisement

ಪರೀಕ್ಷೆ ಮುಗಿದ ಮೂರೇ ದಿನದಲ್ಲಿ ಫಲಿತಾಂಶ

11:08 PM Jul 28, 2023 | Team Udayavani |

ಬೆಳಗಾವಿ: ಬಿಇ ಪರೀಕ್ಷೆ ಮುಗಿದ ಮೂರೇ ದಿನಗಳಲ್ಲಿ ಫಲಿತಾಂಶ ಘೋಷಿಸುವ ಮೂಲಕ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ದಾಖಲೆ ಮಾಡಿದೆ. ಇಂಥ ಪ್ರಯೋಗ ಇದೇ ಮೊದಲಿಗೆ ಆಗಿದೆ ಎಂದು ಕುಲಪತಿ ಪ್ರೊ| ಎಸ್‌. ವಿದ್ಯಾಶಂಕರ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಉನ್ನತ ವ್ಯಾಸಂಗದ ಅನುಕೂಲದ ದೃಷ್ಟಿಯಿಂದ ಪರೀಕ್ಷೆ ಫಲಿತಾಂಶವನ್ನು ಕ್ಷಿಪ್ರವಾಗಿ ಪ್ರಕಟಿಸಲಾಗಿದೆ. ಮೇ 27ರಂದು ಬಿಇ ವಿದ್ಯಾರ್ಥಿಗಳ ಕೊನೆಯ ಪರೀಕ್ಷೆ ಮುಗಿದಿದ್ದು, ಮೇ 30ಕ್ಕೆ ಫಲಿತಾಂಶ ಪ್ರಕಟಿಸಲಾಗಿದೆ. ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಪಡೆಯಲು ಹಾಗೂ ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡಲು ಬೇಗ ಫಲಿತಾಂಶ ಪ್ರಕಟಿಸಲಾಗಿದೆ. ಉನ್ನತ ವ್ಯಾಸಂಗಕ್ಕಾಗಿ ಆಗಸ್ಟ್‌ ನಿಂದಲೇ ಪ್ರವೇಶ ಪಡೆಯಲು ಸಾಧ್ಯ ವಿದೆ. ಎರಡು ತಿಂಗಳ ಮುಂಚೆಯೇ ಕಂಪೆನಿಗಳಿಗೆ ಹೋಗಬಹುದಾಗಿದೆ. ಕಂಪೆನಿಗಳನ್ನು ಆಯ್ಕೆ ಮಾಡಿ ಆದ್ಯತೆ ಮೇರೆಗೆ ಸೇರಬಹುದಾಗಿದೆ. ಅಂತಾರಾಷ್ಟ್ರೀಯ ದಿನದರ್ಶಿಕೆ ಪ್ರಕಾರ ಫಲಿತಾಂಶ ಪ್ರಕಟಿಸಲು ಒತ್ತು ನೀಡಲಾಗುತ್ತಿದೆ ಎಂದರು.

ಈ ಮುಂಚೆ ಫಲಿತಾಂಶ ಬರಲು ಒಂದರಿಂದ ಎರಡು ತಿಂಗಳು ಬೇಕಾಗುತ್ತಿತ್ತು. ಇದರಿಂದ ಒಂದು ವರ್ಷ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿತ್ತು. ಇತರೆಲ್ಲ ರಾಜ್ಯಗಳಿಗೆ ಹೋಲಿಸಿದರೆ ನಾವೇ ಮೊದಲು ಫಲಿತಾಂಶ ಪ್ರಕಟಿಸಿದ್ದೇವೆ ಎಂದರು.

ವಿದೇಶಕ್ಕೂ ವ್ಯಾಪಿಸಿದ ಆನ್‌ಲೈನ್‌ ಶಿಕ್ಷಣ
ಆನ್‌ಲೈನ್‌ನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರವೇಶ ನೀಡುವ ಮೂಲಕ ಜಗತ್ತಿನ ಎಲ್ಲ ಭಾಗಕ್ಕೂ ಶಿಕ್ಷಣವನ್ನು ವಿಸ್ತರಿಸುವ ಕಾರ್ಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮಾಡುತ್ತಿದ್ದು, ಎಐಸಿಟಿಯಿಂದ 1.10 ಲಕ್ಷ ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯುವಂತೆ ಅನುಮತಿ ನೀಡಿದೆ. ಇನ್ನು 15-20 ದಿನಗಳಲ್ಲಿ ಯುಜಿಸಿಯಿಂದ ಅನುಮತಿ ಸಿಗಲಿದೆ. ಆನ್‌ಲೈನ್‌ ಶಿಕ್ಷಣಕ್ಕಾಗಿ ಆ.30ರಿಂದ ಪ್ರವೇಶ ಆರಂಭವಾಗಲಿದ್ದು, ಸೆ.15ರೊಳಗೆ ಪಟ್ಟಿ ಸಿದ್ಧಪಡಿಸಲಾಗುವುದು ಎಂದು ಕುಲಪತಿ ಪ್ರೊ| ಎಸ್‌. ವಿದ್ಯಾಶಂಕರ ತಿಳಿಸಿದರು.

ಮದಕಶಿರಾ ಚಿನ್ಮಯ ವಿಕಾಸ್‌ ಚಿನ್ನದ ಹುಡುಗ
ಬೆಂಗಳೂರಿನ ಸರ್‌ ಎಂ.ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಮದಕಶಿರಾ ಚಿನ್ಮಯ ವಿಕಾಸ್‌ 13 ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಚಿನ್ನದ ಹುಡುಗನಾಗಿ ಹೊರಹೊಮ್ಮಿದ್ದಾರೆ. ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಬೆಂಗಳೂರಿನ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಅಭಿಷೇಕ್‌ ಜಿ. 7 ಚಿನ್ನ, ಬೆಂಗಳೂರಿನ ಸರ್‌ ಎಂ. ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌ ಎಂಜಿನಿಯರಿಂಗ್‌ ವಿಭಾಗದ ಗುಡಿಕಲ್‌ ಸಾಯಿ ವಂಶಿ 7, ಬಳ್ಳಾರಿಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ನಲ್ಲಿ ಕೆ.ಆರ್‌. ಸಂಪತ್‌ ಕುಮಾರ್‌ 7, ಶಿವಮೊಗ್ಗದ ಜವಾಹರಲಾಲ್‌ ನೆಹರೂ ನ್ಯಾಷನಲ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ವಿಭಾಗದ ಪಾರ್ವತಿ ಸಲೇರಾ ಜೆ. 6 ಚಿನ್ನ ಪಡೆದಿದ್ದಾರೆ.

Advertisement

ಬೆಳಗಾವಿಯ ಕೆಎಲ್‌ಇ ಡಾ| ಎಂ.ಎಸ್‌. ಶೇಷಗಿರಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ನ ಕೆಮಿಕಲ್‌ ಎಂಜಿನಿಯರಿಂಗ್‌ನಲ್ಲಿ ಆವಂತಿಕಾ ಎ. ಸಾವಕಾರ್‌ 5 ಚಿನ್ನ, ಬೆಂಗಳೂರಿನ ಆರ್‌ಎನ್‌ಎಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್‌ ಮತ್ತು ಇನ್‌ಸ್ಟ್ರೆಮೆಂಟೇಶನ್‌ ಎಂಜಿನಿಯರಿಂಗ್‌ನಲ್ಲಿ ಹರ್ಷಿತಾ ಆರ್‌. 4 ಚಿನ್ನ, ಬೆಂಗಳೂರಿನ ಸಾಯಿ ವಿದ್ಯಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಇನ್‌ಫಾರ್ಮೇಶನ್‌ ಸೈನ್ಸ್‌ ಮತ್ತು ಎಂಜಿನಿಯರಿಂಗ್‌ ವಿಭಾಗದಲ್ಲಿ ಇಶಿಕಾ ನವೀನ್‌ 4 ಚಿನ್ನ, ಬೆಂಗಳೂರಿನ ಆಚಾರ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಏರೋನಾಟಿಕಲ್‌ ಎಂಜಿನಿಯರಿಂಗ್‌ನಲ್ಲಿ ಸಾಹಸ ಎಸ್‌. 2 ಚಿನ್ನ, ಬೆಂಗಳೂರಿನ ಆಚಾರ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಮೈನಿಂಗ್‌ ಎಂಜಿನಿಯರಿಂಗ್‌ನಲ್ಲಿ ಕೆಂಚೋ ಗೈಲ್‌ತ್ಸೇನ್‌ 2 ಚಿನ್ನದ ಪದಕ ಪಡೆದಿದ್ದಾರೆ.

ಮೂವರಿಗೆ ವಿಟಿಯು ಡಾಕ್ಟರ್‌ ಆಫ್‌ ಸೈನ್ಸ್‌
ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 23ನೇ ಘಟಿಕೋತ್ಸವ ಆ.1ರಂದು ವಿಟಿಯು ಜ್ಞಾನ ಸಂಗಮ ಆವರಣದಲ್ಲಿ ನಡೆಯಲಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನದ ಮಠದ ಡಾ| ನಿರ್ಮಲಾನಂದನಾಥ ಸ್ವಾಮೀಜಿ, ರಾಷ್ಟ್ರೀಯ ಶಿಕ್ಷಣ ಸಮಿತಿ ಸಂಸ್ಥೆ ಗೌರವ ಕಾರ್ಯದರ್ಶಿ ಡಾ|ಎ.ವಿ.ಎಸ್‌.ಮೂರ್ತಿ ಹಾಗೂ ಬೆಂಗಳೂರಿನ ಮೈಸೂರು ಮೆಕ್ಯಾನಿಕ್‌ ಟೈಲ್‌ ಕಂಪೆನಿ ಲಿ. ಅಧ್ಯಕ್ಷ ಎಚ್‌.ಎಸ್‌. ಶೆಟ್ಟಿ ಅವರಿಗೆ ಡಾಕ್ಟರ್‌ ಆಫ್‌ ಸೈನ್ಸ್‌ ಗೌರವ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಪ್ರೊ| ವಿದ್ಯಾಶಂಕರ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next