Advertisement

ಅಸ್ತಿತ್ವದಲ್ಲಿ ಇಲ್ಲದ ಗ್ರಾ.ಪಂ. ಬಾಕಿ ನೀರಿನ ಬಿಲ್‌ 2.37 ಕೋಟಿ ರೂ.!

09:53 AM Jul 29, 2018 | |

ಮಹಾನಗರ: ನಗರದ ಹೊರ ವಲಯದ ಕಣ್ಣೂರು ಹಾಗೂ ಬಜಾಲ್‌ ಎಂಬೆರಡು ಗ್ರಾಮ ಪಂಚಾಯತ್‌ ಗಳು ಈಗ ಅಸ್ತಿತ್ವದಲ್ಲಿಯೇ ಇಲ್ಲ. ಹೀಗಿದ್ದರೂ ಅವುಗಳ 2.37 ಕೋಟಿ ರೂ. ಮೊತ್ತದ ನೀರಿನ ಬಿಲ್ಲು ಮನಪಾಗೆ ಸಂದಾಯವಾಗಲು ಬಾಕಿ ಇದೆ!
ಆಶ್ಚರ್ಯವಾದರೂ ಇದು ಸತ್ಯ. ಪಾಲಿಕೆ ಹೊರವಲಯದ ಈ ಎರಡು ಪಂಚಾಯತ್‌ ಗಳು ನೀರಿನ ಬಿಲ್‌ 2.37 ಕೋ.ರೂ. ಬಾಕಿ ಇರಿಸಿಕೊಂಡಿವೆ. ಈ ಎರಡೂ ಗ್ರಾ. ಪಂ.ಗಳು ಪಾಲಿಕೆಯ ಜತೆ ಸುಮಾರು 17 ವರ್ಷ ಹಿಂದೆಯೇ ವಿಲೀನಗೊಂಡಿದ್ದರೂ ಪಾಲಿಕೆ ಹಾಗೂ ಸರಕಾರದ ಮಟ್ಟದಲ್ಲಿ ಇದು ಬಾಕಿ ಪ್ರಕರಣ ಎಂದೇ ದಾಖಲೆಯಲ್ಲಿದೆ.

Advertisement

2001ರ ಎ. 1ರಂದು ವಿಲೀನಗೊಳ್ಳುವ ಮೊದಲು ಇಲ್ಲಿಗೆ ಪಾಲಿಕೆಯಿಂದ ನೀರು ಸರಬರಾಜು ಆಗುತ್ತಿತ್ತು. ಆಗ ಬಾಕಿ ಇದ್ದ ಶುಲ್ಕ ಹಾಗೂ ದಂಡ ಸೇರಿ ಒಟ್ಟು 2,37,53,089 ರೂ.ಗಳನ್ನು ಇವೆರಡು ಪಂ.ಗಳು ಪಾವತಿಸಬೇಕಾಗಿತ್ತು. ಇದನ್ನು ವಸೂಲು ಮಾಡಲು ಅಂದು ಪ್ರಯತ್ನ ಮಾಡಿದ್ದರೂ ಆಗಿರಲಿಲ್ಲ.

ಮನ್ನಾ ಮಾಡಲು ನಿರ್ಣಯ
ಈಗ ಅಸ್ತಿತ್ವದಲ್ಲಿ ಇಲ್ಲದ ಪಂಚಾಯತ್‌ ಗಳಿಂದ ಬಾಕಿ ವಸೂಲು ಪಾಲಿಕೆಗೆ ಕಷ್ಟವಾಗಿದೆ. ಈ ಬಗ್ಗೆ 2011ರ ಡಿ. 23ರಂದು ಪಾಲಿಕೆಯ ಪರಿಷತ್‌ನ ಸಭೆಗೆ ಕಾರ್ಯ ಸೂಚಿ ಮಂಡಿಸಿ, ಬಾಕಿ ನೀರಿನ ಶುಲ್ಕವನ್ನು ಮನ್ನಾ ಮಾಡಲು ಸರಕಾರಕ್ಕೆ ಕಳುಹಿಸಲು ನಿರ್ಣಯಿಸಲಾಗಿತ್ತು. ಈ ಬಗ್ಗೆ 2012 ಜ. 31ರಂದು ಸರಕಾರಕ್ಕೆ ಪತ್ರ ಬರೆದು ಸೂಕ್ತ ಆದೇಶ ನೀಡುವಂತೆ ಕೋರಲಾಗಿತ್ತು. 2006ರ ಜು. 21ರಂದು ಪೌರಾಡಳಿತ ನಿರ್ದೇಶನಾಲಯಕ್ಕೆ ಈ ಸಂಬಂಧ ಪತ್ರ ಹೋಗಿದೆ. 2011ರ ನ. 17ರಂದು ಇನ್ನೊಮ್ಮೆ ಪತ್ರ ಬರೆಯಲಾಗಿದೆ. ಆದರೆ ಇನ್ನೂ ಹಳೆ ಬಾಕಿ ಚುಕ್ತಾ ಆಗಿಲ್ಲ; ಸರಕಾರವೂ ಗಮನ ಹರಿಸಿಲ್ಲ. ವಿಲೀನವಾದ ಬಳಿಕ ಎರಡೂ ಪಂಚಾಯತ್‌ಗಳ ಸ್ಥಿರ – ಚರ ಆಸ್ತಿಗಳು, ಬ್ಯಾಂಕ್‌ ಖಜಾನೆಯಲ್ಲಿ ಉಳಿಕೆ ನಿಧಿ, ಋಣಭಾರಗಳು ಪಾಲಿಕೆಗೆ ಹಸ್ತಾಂತರಗೊಂಡಿವೆ. 

ಹೀಗಾಗಿ ಶುಲ್ಕ ಬಾಕಿ, ಬಾಕಿಯಾಗಿಯೇ ಉಳಿದಿದೆ. ಆಗಿನ ನೀರು ಬಳಕೆದಾರರು/ ಗ್ರಾಹಕರು ಯಾರು ಎಂಬ ಬಗ್ಗೆ ದಾಖಲೆಗಳು ಇಲ್ಲದ ಕಾರಣ ತಗಾದೆ ಮುಂದುವರಿದಿದೆ. ವಿಲೀನದ ಬಳಿಕ ಎರಡೂ ಗ್ರಾ.ಪಂ. ವ್ಯಾಪ್ತಿಯ ಕಟ್ಟಡ ತೆರಿಗೆ ಹಾಗೂ ನೀರಿನ ಶುಲ್ಕವನ್ನು ಪಾಲಿಕೆಯಿಂದ ನೇರವಾಗಿ ಬಳಕೆದಾರರಿಗೆ ವಿಧಿಸಿ ವಸೂಲು ಮಾಡಲಾಗುತ್ತಿದೆ.

ಗ್ರಾ.ಪಂ. ಅನ್ನು ಪಾಲಿಕೆ ಅಥವಾ ಇತರ ನಗರ ಸಂಸ್ಥೆಗಳ ಜತೆಗೆ ವಿಲೀನ ಮಾಡುವ ಸಂದರ್ಭ ನೀರಿನ ಶುಲ್ಕ, ವಿವಿಧ ತೆರಿಗೆ, ಇತರ ವಿಚಾರಗಳನ್ನೆಲ್ಲ ಇತ್ಯರ್ಥ ಮಾಡಿಕೊಂಡು, ಅನಂತರ ಸಮಸ್ಯೆ ಸೃಷ್ಟಿಯಾಗದಂತೆ ನೋಡಿಕೊಳ್ಳುವುದು ಸರಕಾರ ಹಾಗೂ ವಿಲೀನ ಮಾಡಿಕೊಳ್ಳುವ ಸಂಸ್ಥೆಯ ಕರ್ತವ್ಯ. ಆದರೆ ಈ ಎಚ್ಚರಿಕೆಗಳನ್ನು ತೆಗೆದುಕೊಳ್ಳದೆ ಇರುವುದರಿಂದ ಸಮಸ್ಯೆ ಈಗಲೂ ಉಳಿದುಕೊಂಡಿದೆ.

Advertisement

ಶುಲ್ಕಕ್ಕಿಂತ ಬಡ್ಡಿಯೇ ಅಧಿಕ!
ಎರಡೂ ಪಂ.ಗಳವರು ನೀರು ಬಳಸುತ್ತಿದ್ದ ಸಂದರ್ಭದಲ್ಲಿ ನೀರಿನ ಮೀಟರ್‌ ಕೆಟ್ಟಿರುವುದನ್ನು ಸಕಾಲದಲ್ಲಿ ದುರಸ್ತಿಪಡಿಸದೆ ಇರುವುದರಿಂದ ಪಾಲಿಕೆಯ ನೀರು ಸರಬರಾಜು ನಿಯಮದಂತೆ ದಂಡನಾ ಶುಲ್ಕ ವಿಧಿಸಿ ಬಿಲ್ಲು ಜಾರಿಯಾಗಿದೆ. ಹೀಗಾಗಿ ನೀರಿನ ಶುಲ್ಕ 92 ಲಕ್ಷವಿದ್ದರೆ, ದಂಡನಾ ಶುಲ್ಕ 1.45 ಕೋ.ರೂ. ಇದೆ!

ನಗರಾಭಿವೃದ್ಧಿ ಸಚಿವರ ಗಮನಕ್ಕೆ ತರಲಾಗಿದೆ
ನೀರಿನ ಶುಲ್ಕ 2.37 ಕೋ.ರೂ ಬಾಕಿ ಇರುವುದಾಗಿ ಈಗಲೂ ದಾಖಲೆಗಳಲ್ಲಿ ಉಲ್ಲೇಖವಿದೆ. ಇದನ್ನು ಮನ್ನಾ ಮಾಡುವಂತೆ ಸರಕಾರವನ್ನು ಈಗಾಗಲೇ ಕೋರಲಾಗಿದೆ. ನಗರಾಭಿವೃದ್ಧಿ ಸಚಿವರು ಈ ಕುರಿತು ಪರಿಶೀಲಿಸುವ ಭರವಸೆ ನೀಡಿದ್ದಾರೆ.
– ಮಹಮ್ಮದ್‌ ನಝೀರ್‌, ಆಯುಕ್ತರು, ಪಾಲಿಕೆ

2 ಗ್ರಾ.ಪಂ.ನ ಬಾಕಿ ಲೆಕ್ಕಾಚಾರ
ನೀರಿನ ಶುಲ್ಕ 92,51,281 ರೂ., ದಂಡ ಮೊತ್ತ 1,45,01,808 ರೂ., ಒಟ್ಟು ಬಾಕಿ 2,37,53,089 ರೂ.

 ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next