ಹರಪನಹಳ್ಳಿ: ಜನಸಂಚಾರ ಇಲ್ಲದೇ ಸಂಪೂರ್ಣವಾಗಿ ಸ್ತಬ್ಧಗೊಂಡಿದ್ದ ಹರಪನಹಳ್ಳಿ ಪಟ್ಟಣ ಸಹಜ ಸ್ಥಿತಿಗೆ ಮರಳುತ್ತಿರುವುದು ಎಲ್ಲರ ಮೊಗದಲ್ಲಿ ಸಂತಸ ಮೂಡಿಸಿದೆ.
ಕಳೆದ 43 ದಿನಗಳಿಂದ ಲಾಕ್‌ಡೌನ್ ಸೋಮವಾರ ನಿರ್ಬಂಧಗಳೊಂದಿಗೆ ಸಡಿಲವಾಗಿದ್ದು, ವೈನ್‌ಶಾಪ್ ಗಳು, ಮಾರುಕಟ್ಟೆ ಪ್ರಾರಂಭವಾಗಿದ್ದು, ವ್ಯಾಪಾರವಿಲ್ಲದೇ ಬಿಕೋ ಎನ್ನುತ್ತಿದ್ದ ಮಾರುಕಟ್ಟೆ, ವೈನ್‌ಶಾಪ್‌ಗ್ಳ ಮುಂದೆ ಸಾಮಾಜಿಕ ಅಂತರದ ಮೂಲಕ ಎಲ್ಲೆಡೆ ಜನಜಂಗುಳಿ ಕೂಡಿದೆ. ಕ್ಷೌರಿಕ ಅಂಗಡಿಗಳು ಹೊರತುಪಡಿಸಿ ಉಳಿದಂತೆ ವಾಣಿಜ್ಯ ಚಟುವಟಿಕೆಗಳು ನಿಧಾನವಾಗಿ ಆರಂಭವಾಗುತ್ತಿದೆ. ಆದರೆ ಪಕ್ಕದ ದಾವಣಗೆರೆ ನಗರದಲ್ಲಿ ಕೋವಿಡ್ 19 ಬೆಂಬಿಡದೇ ಕಾಡುತ್ತಿರುವುದು ತಾಲೂಕಿನ ಜನರಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ.
ಷರತ್ತು ಸಡಿಲಗೊಳಿರುವ ಪೊಲೀಸರು ಪಟ್ಟಣದ ವಿವಿಧೆಡೆ ಹಾಕಲಾಗಿದ್ದ ಬ್ಯಾರಿಕೇಡ್ ತೆಗೆದು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಹೀಗಾಗಿ ಬಿಕೋ ಎನ್ನುತ್ತಿದ್ದ ರಸ್ತೆಗಳು ತುಂಬಿ ತುಳುಕುತ್ತಿವೆ. ಸಾರ್ವಜನಿಕರ ಓಡಾಟ ಮತ್ತು ವಾಹನಗಳ ಸಂಚಾರ ಎಂದಿನಂತೆ ಕಂಡು ಬಂತು. ವಿವಿಧ ಇಲಾಖೆಗಳ ಸಿಬ್ಬಂದಿ ಹೆಚ್ಚಿನ ಪ್ರಮಾಣದಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ದೃಶ್ಯ ಕಂಡು ಬಂತು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸುವಂತೆ ಸೂಚನೆ ಕೊಡಲಾಗಿದೆ.
ಹಾಲು, ಹಣ್ಣು, ತರಕಾರಿ ಹಾಗೂ ಅಗತ್ಯ ವಸ್ತುಗಳನ್ನು ಬೆಳಗ್ಗೆ 7 ರಿಂದ ಬೆಳಗ್ಗೆ 11 ಗಂಟೆವರೆಗೆ ಮಾತ್ರ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಬಂಗಾರದ ಅಂಗಡಿ, ಬಟ್ಟೆ ಅಂಗಡಿ, ಬುಕ್ ಸ್ಟಾಲ್ ಸೇರಿದಂತೆ ಎಲ್ಲಾ ಚಟುವಟಿಕೆಗಳನ್ನು ಪ್ರಾರಂಭಿಸಲು ಅನುಮತಿ ನೀಡಲಾಗಿದೆ. ಬೆಳಗ್ಗೆ 9ರಿಂದ ಸಂಜೆ 7 ಗಂಟೆವರೆಗೆ ವಾಹನಗಳ ಸಂಚಾರ, ಸಾರ್ವಜನಿಕರ ಓಡಾಟಕ್ಕೆ ಅವಕಾಶ ನೀಡಿದ್ದರಿಂದ ಪಟ್ಟಣದಲ್ಲಿ ಮುಂಜಾನೆಯಿಂದಲೇ ತಮ್ಮ ತಮ್ಮ ಕೆಲಸದಲ್ಲಿ ತೊಡಗಿರುವುದು ಕಂಡು ಬಂತು. ಸಾರ್ವಜನಿಕರು ಸುಖಾಸುಮ್ಮನೆ ರಸ್ತೆಯಲ್ಲಿ ತಿರುಗಾಡುವಂತಿಲ್ಲ. ಅಂತಹವರ ವಾಹನ ವಶಕ್ಕೆ ಪಡೆಯಲಾಗುವುದು ಎಂದು ಉವಿಭಾಗಾಧಿಕಾರಿ ವಿ.ಕೆ.ಪ್ರಸನ್ನಕುಮಾರ್ ಎಚ್ಚರಿಸಿದ್ದಾರೆ.
ಮದ್ಯಪ್ರಿಯರು ಖುಷಿ: ಮದ್ಯದಂಡಿಗಳು ಬೆಳಗ್ಗೆ ಪ್ರಾರಂಭವಾಗುತ್ತಿದ್ದಂತೆ ಸರದಿ ಸಾಲಿನಲ್ಲಿ ನಿಂತುಕೊಂಡು ಮದ್ಯವನ್ನು ಖರೀದಿಸುತ್ತಿದ್ದ ದೃಶ್ಯ ಕಂಡು ಬಂತು. ಕೆಲವೆಡೆ ವಿಡಿಯೋ ಮಾಡಿಸಲಾಗುತ್ತಿತ್ತು. ಆದರೆ ಬಹುತೇಕ ಅಂಗಡಿಗಳಲ್ಲಿ ಹೆಚ್ಚಿನ ಮುಖಬೆಲೆಯ ಮದ್ಯ ಸ್ಟಾಕ್ ಇರಲಿಲ್ಲ. ಅಂತಹ ಅಂಗಡಿಗಳಿಗೆ ನಾಳೆ ಮದ್ಯ ಸರಬರಾಜು ಮಾಡಲಾಗುತ್ತದೆ. ಅಕ್ರಮ ಮಾರಾಟ ಮಾಡಿರುವುದು ಕಂಡು ಬಂದಿಲ್ಲ. ವೈನ್ ಶಾಪ್ ಬಳಿ ವಿಡಿಯೋ ಮಾಡಿರುವುದು ಗಮನಕ್ಕಿಲ್ಲ, ಇಲಾಖೆಯಿಂದ ಮಾಡಿಸಿಲ್ಲ ಎಂದು ಅಬಕಾರಿ ನಿರೀಕ್ಷಕ ಎನ್.ದಶರಥ ನಾಯ್ಕ ತಿಳಿಸಿದ್ದಾರೆ.