ಬೆಂಗಳೂರು: ಹುಲಿ ಉಗುರು, ಆನೆ ದಂತ, ಜಿಂಕೆ ಕೊಂಬು ಸಹಿತ ಅಕ್ರಮವಾಗಿ ಇಟ್ಟುಕೊಂಡಿರುವ ಯಾವುದೇ ವನ್ಯಜೀವಿಯ ಅಂಗಾಂಗ, ಟ್ರೋಫಿಯನ್ನು ಸರಕಾರಕ್ಕೆ ಹಿಂದಿರುಗಿಸಲು ಒಂದು ಬಾರಿ ಕಾಲಾವಕಾಶ ನೀಡಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದೆ. ಕೆಲವರು ಕಾನೂನಿನ ಅರಿವಿಲ್ಲದೆ ಇಂತಹ ಉತ್ಪನ್ನಗಳನ್ನು ತಲ ತಲಾಂತರದಿಂದ ತಮ್ಮ ಮನೆಯಲ್ಲಿಟ್ಟುಕೊಂಡಿದ್ದು, 2 ಬಾರಿ ಅವಕಾಶ ನೀಡಿದರೂ ಪ್ರಮಾಣಪತ್ರ ಪಡೆದಿರುವುದಿಲ್ಲ. ಈ ಬಗ್ಗೆ ಶುಕ್ರವಾರ ಸಚಿವ ಸಂಪುಟದಲ್ಲಿ ಚರ್ಚಿಸಲಾಗಿದ್ದು, ಇಂತಹ ವಸ್ತುಗಳನ್ನು ಸರಕಾರಕ್ಕೆ ಸ್ವಯಂಪ್ರೇರಿತವಾಗಿ ಹಿಂದಿರುಗಿಸಲು ಮಾತ್ರ ಒಂದು ಬಾರಿ ಅವಕಾಶ ನೀಡಲು ತೀರ್ಮಾನಿಸಲಾಗಿದೆ.
ಅತಿ ಶೀಘ್ರದಲ್ಲೇ ಈ ಬಗ್ಗೆ ಅಧಿಸೂಚನೆ ಹೊರಡಿಸಿ 3 ತಿಂಗಳ ಕಾಲಾವಕಾಶ ನೀಡಲಾಗುವುದು. ರೂಪುರೇಷೆ ಸಿದ್ಧಪಡಿಸಲಾಗುವುದು. ಆ ಅವಧಿಯಲ್ಲಿ ಈ ಹಿಂದೆ 1973ರಲ್ಲಿ ಮತ್ತು 2003ರಲ್ಲಿ ಅಧಿಕೃತ ಘೋಷಣೆ ಮಾಡಿಕೊಂಡು ಹಕ್ಕಿನ ಪ್ರಮಾಣ ಪತ್ರ ಪಡೆಯದವರು ತಮ್ಮಲ್ಲಿ ಹುಲಿ ಉಗುರು, ಆನೆ ಬಾಲದ ಉಂಗುರ, ಜಿಂಕೆಯ ಕೊಂಬು, ಆನೆ ದಂತ, ಹುಲಿ, ಜಿಂಕೆ ಚರ್ಮ, ಕಾಡೆಮ್ಮೆ ಕೊಂಬು, ಹುಲಿ, ಸಿಂಹ, ಚಿರತೆ, ಜಿಂಕೆ, ಕಡವೆ, ಕಾಡೆಮ್ಮೆ, ಆನೆ ಸಹಿತ ಯಾವುದೇ ವನ್ಯಜೀವಿಯ ಮುಖದ ಸಂಸ್ಕರಿಸಿದ ಅಥವಾ ಸಂಸ್ಕರಿಸದ ಟ್ರೋಫಿ, ಆನೆಯ ದಂತದಿಂದ ಮಾಡಿದ ಆಲಂಕಾರಿಕ ವಸ್ತು ಇತ್ಯಾದಿಗಳಿದ್ದಲ್ಲಿ ಸರಕಾರಕ್ಕೆ ಮರಳಿಸಬೇಕಾಗುತ್ತದೆ.
ಈ ಕಾಲಾವಕಾಶ ಮುಗಿದ ಬಳಿಕ ಯಾರಾದರೂ ಇಂತಹ ವನ್ಯಜೀವಿ ಉತ್ಪನ್ನಗಳನ್ನು ತಮ್ಮಲ್ಲಿ ಇಟ್ಟುಕೊಂಡಿದ್ದರೆ, ಸಾಗಾಟ, ಮಾರಾಟ ಮಾಡಿದರೆ, ಉಡುಗೊರೆ ನೀಡಿದರೆ ಅವರ ವಿರುದ್ಧ ವನ್ಯಜೀವಿ ಸಂರಕ್ಷಣೆ ಕಾಯಿದೆ ಅಡಿಯಲ್ಲಿ ಕಾನೂನು ಕ್ರಮ ಜರಗಿಸಲಾಗುತ್ತದೆ.
-ಈಶ್ವರ ಖಂಡ್ರೆ, ಅರಣ್ಯ ಸಚಿವ