Advertisement

ಅಧಿಕಾರಿಗಳಿಂದ ಸಮಸ್ಯೆ ನಿವಾರಿಸಿಕೊಳ್ಳಿ; ಶಾಸಕ ಓಲೇಕಾರ

06:24 PM Jul 20, 2022 | Team Udayavani |

ಗುತ್ತಲ: ಬಡವರಿಗೆ ತಾಲೂಕು ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಕೆಲಸ ಮಾಡಿಕೊಳ್ಳಲು ಹೆಚ್ಚಿನ ಸಮಯ ಬೇಕಾಗುತ್ತದೆ. ಈಗ ನಿಮ್ಮಲ್ಲಿಗೇ ಅಧಿಕಾರಿಗಳು ಬಂದಿದ್ದಾರೆ. ಹಾಗಾಗಿ, ನಿಮ್ಮ ಕೆಲಸಗಳನ್ನು ಈಗಲೇ ಸರಿಪಡಿಸಿಕೊಳ್ಳಿ ಎಂದು ಶಾಸಕ ನೆಹರು ಓಲೇಕಾರ ನೆಗಳೂರ ಗ್ರಾಮಸ್ಥರಿಗೆ ತಿಳಿಸಿದರು.

Advertisement

ನೆಗಳೂರ ಗ್ರಾಮದಲ್ಲಿ ಮಂಗಳವಾರ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮದಲ್ಲಿರುವ ತೊಂದರೆಗಳನ್ನು ಬಗೆಹರಿಸಿಕೊಳ್ಳಲು ನಿಮಗೆ ಅವಕಾಶವಿದೆ. ಆದಷ್ಟು ಶಾಂತ ರೀತಿಯಿಂದ ನಿಮ್ಮ ಅರ್ಜಿಗಳನ್ನು ತೆಗೆದುಕೊಂಡು ಬನ್ನಿ. ಎಲ್ಲರಿಗೂ ಅವಕಾಶ ನೀಡಲಾಗುತ್ತದೆ ಎಂದರು.

ಗ್ರಾಮದಲ್ಲಿ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ದುರುಗವನಗುಂಡಿಯಿಂದ ಹರಿದು ಹೋಗುವ ನೀರಿಗೆ ಯೋಜನೆ ರೂಪಿಸಲಾಗುವುದು ಎಂದ ಅವರು, ಎಂಎಸ್‌ ಐಎಲ್‌ ಅನ್ನು ಈಗಿರುವ ಸ್ಥಳದಿಂದ ಬೇರೆ ಕಡೆ ವರ್ಗಾಯಿಸಲು ಅಧಿಕಾರಿಗಳಿಗೆ ತಿಳಿಸಿದರು.

ರಸ್ತೆ ದುರಸ್ತಿ, ವಿವಿಧ ಪಿಂಚಣಿ ಯೋಜನೆಗಳ ಮಂಜೂರಾತಿ, ಜಮೀನುಗಳ ಪಟ್ಟಾ, ಪ್ರಾಥಮಿಕ ಆರೋಗ್ಯ ಮತ್ತು ಪಶು ಆರೋಗ್ಯ ಕೇಂದ್ರದಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಕೊರತೆ, ಮೆಟ್ರಿಕ್‌ ಪೂರ್ವ ವಿದ್ಯಾರ್ಥಿಗಳ ವಸತಿ ಗೃಹದ ನಿರ್ಮಾಣ, ಬೆಳೆ ಹಾನಿಯಾಗಿದ್ದರೂ ಅಧಿ ಕಾರಿಗಳು ಭೇಟಿ ನೀಡದ ವಿಷಯ ಹಾಗೂ ಪರಿಹಾರ ದೊರೆಯದಿರುವುದು, ನೆರೆ ಸಂತ್ರಸ್ತರ ಪುನರ್ವಸತಿ ಯೋಜನೆಯಲ್ಲಿ ಮನೆ ನಿರ್ಮಿಸುವುದು, ಗಂಗಾ ಕಲ್ಯಾಣ, ತ್ರಿಚಕ್ರ ವಾಹನ, ಬೆಳೆ ವಿಮೆ, ಮಾರುತಿ ದೇವಸ್ಥಾನ ಮತ್ತು ಹಾಲು ಉತ್ಪಾದಕರ ಸಂಘಕ್ಕೆ ಹಣ ಮಂಜೂರಾತಿ, ಪಡಿತರ ಚೀಟಿ, ಸಮರ್ಪಕ ಯೂರಿಯಾ ಗೊಬ್ಬರ ಪೂರೈಕೆ, ಎಂಡಿಆರ್‌ ಎಸ್‌ ಶಾಲಾ ಅಭಿವೃದ್ಧಿ ಮತ್ತು ಕಾಲೇಜು ಮಂಜೂರಾತಿ, ಶಾಲಾ ಕಟ್ಟಡಗಳ ನಿರ್ಮಾಣ, ಸಿಡಿ ನಿರ್ಮಾಣ, ಮಂಗಗಳ ಕಾಟ ತಡೆಗೆ ಕ್ರಮ ಮುಂತಾದ ಸಮಸ್ಯೆಗಳ ಕುರಿತು ಸುಮಾರು 136 ಅರ್ಜಿಗಳನ್ನು ಸಲ್ಲಿಸಲಾಯಿತು.

ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಜಮೀನು ಸ್ವಾಧೀನ ಪಡಿಸಿಕೊಂಡರೂ ಈವರೆಗೆ ಪರಿಹಾರ ದೊರೆತಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಅನೇಕ ಸಬೂಬ ಹೇಳುತ್ತಾರೆ. ನಮಗೆ ಪರಿಹಾರ ಕೊಡಿಸಿ ಎಂದು ಶಾಸಕ ನೆಹರೂ ಓಲೇಕಾರ ಅವರಿಗೆ ಅನೇಕ ರೈತರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಯುಟಿಪಿ ಅಧಿಕಾರಿಗಳನ್ನು ಕರೆದು ರೈತರಿಗೆ ಬರುವ ಹಣ ನೀಡಲು ತಿಳಿಸಿದರು.

Advertisement

ಹುಚ್ಚಬಸಪ್ಪನವರ ಓಣಿಯಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣದ ಕುರಿತು ಗ್ರಾಪಂ ಸದಸ್ಯರು ಮತ್ತು ನಾಗಪ್ಪ ಹುಚ್ಚಬಸಪ್ಪನವರ ಮಧ್ಯೆ ಮಾತಿನ ಚಕಿಮಿಕಿ ನಡೆಯಿತು. ಹಲವಾರು ಬಾರಿ ನಾವು ಕೆಲಸ ಮಾಡಲು ಬಂದಾಗ ಕೆಲಸಕ್ಕೆ ಅಡ್ಡಿಪಡಿಸಿ ಈಗ ಮತ್ತೆ ಮಾಡಿ ಎಂದರೆ ಹೇಗೆ ಎಂದು ಗ್ರಾಪಂ ಸದಸ್ಯರು ತರಾಟೆ ತೆಗೆದುಕೊಂಡರು. ಕಾರ್ಯಕ್ರಮದಲ್ಲಿ ಗ್ರೇಡ್‌ 2 ತಹಶೀಲ್ದಾರ್‌ ಪಿ.ಎಸ್‌. ಕುಂಬಾರ, ತಾಪಂ ಇಒ ಡಾ|ಬಸವರಾಜಪ್ಪ, ಉಪ ತಹಶೀಲ್ದಾರ್‌ ಎಂ.ಡಿ. ಕಿಚಡೇರ, ಬಿಇಒ ಮೌನೇಶ ಕಮ್ಮಾರ, ಕಂದಾಯ ನಿರೀಕ್ಷಕ ಆರ್‌.ಎನ್‌.ಮಲ್ಲಾಡದ, ಟಿಎಚ್‌ಒ ಡಾ|ಪಿ.ಎಸ್‌.ಕುಂದೂರ, ಪಿಎಸ್‌ಐ ಜಿ.ಜಗದೀಶ, ಗ್ರಾಪಂ ಅಧ್ಯಕ್ಷ ರುದ್ರಗೌಡ ರೊಡ್ಡಗೌಡ್ರ, ಕೆಸಿಸಿ ಬ್ಯಾಂಕ್‌ ನಿರ್ದೇಶಕ ಮುತ್ತಣ್ಣ ಯಲಿಗಾರ, ಜಿಪಂ ಸದಸ್ಯ ಸಿದ್ಧರಾಜ ಕಲಕೋಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಗೌಡಪ್ಪಗೌಡ ಪಾಟೀಲ, ಗ್ರಾಮ ಲೆಕ್ಕಿಗ ಪಕ್ಕೀರೇಶ ಬಾರ್ಕಿ ಸೇರಿದಂತೆ ಗ್ರಾಪಂ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next