ಉಡುಪಿ: ನೂತನ ನಾಯಕರ ಅನ್ವೇಷಣೆ, ನಾಯಕತ್ವದ ಬದಲಾವಣೆ ಮತ್ತು ವಹಿಸುವ ಹೊಣೆ ಇದು ರೋಟರಿಯ ವೈಶಿಷ್ಟ್ಯ. ಹೊಣೆ ಅರಿತು ಸಮರ್ಥ ನಾಯಕತ್ವ ನೀಡಲು ಅನುಕೂಲವಾಗುವಂತೆ ಕಾಲ ಕಾಲಕ್ಕೆ ಸೂಕ್ತ ತರಬೇತಿ ನೀಡುವ ಬದ್ಧತೆಯನ್ನು ರೋಟರಿ ಹೊಂದಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ರಾಜಾರಾಮ ಭಟ್ ಹೇಳಿದರು.
ರೋಟರಿ ಮಣಿಪಾಲ ಟೌನ್ ವತಿಯಿಂದ ಮಣಿಪಾಲದ ಹೊಟೇಲ್ ವ್ಯಾಲಿವ್ಯೂ ಇಂಟರ್‌ನ್ಯಾಷನಲ್‌ನಲ್ಲಿ ನಡೆದ ‘ಸಂಕಲ್ಪ 2019’ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಜಿ ಅಧ್ಯಕ್ಷ ಡಾ| ಯು.ಎನ್. ಉಡುಪ ಅಧ್ಯಕ್ಷತೆ ವಹಿಸಿದ್ದರು. ಅಂತಾರಾಷ್ಟ್ರೀಯ ರೋಟರಿಯ ಯೋಜನೆಗಳ ಯಶಸ್ಸಿಗೆ ಕಾರಣಕರ್ತರಾದ ಬಾಲಕೃಷ್ಣ ರಾವ್ ಅವರನ್ನು ರೋಟರಿ ಮಾಜಿ ಜಿಲ್ಲಾ ಗವರ್ನರ್ ಡಾ| ಭರತೇಶ್ ಅದಿರಾಜ್ ಗೌರವಿಸಿದರು.
ಅಸಿಸ್ಟೆಂಟ್ ಗವರ್ನರ್ ಎ. ಗಣೇಶ್ ಶುಭಾಶಂಸನೆಗೈದರು. ನಿಯೋಜಿತ ಅಸಿಸ್ಟೆಂಟ್ ಗವರ್ನರ್ ಡಾ| ಸೇಸಪ್ಪ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಿಯೋಜಿತ ಜಿಲ್ಲಾ ಗವರ್ನರ್ ಬಿ.ಎನ್. ರಮೇಶ, ಸಮಿತಿಯ ಸಭಾಪತಿ ಡಾ| ಎಚ್.ಜೆ. ಜಯಗೌರಿ, ರಾಷ್ಟ್ರೀಯ ತರಬೇತಿದಾರ ರಾಜೇಂದ್ರ ಭಟ್ ಕೆ., ತರಬೇತಿಯ ಸಮನ್ವಯಕಾರ ಜಿಲ್ಲಾ ಅಸಿಸ್ಟೆಂಟ್ ಟ್ರೈನರ್ ಸುಬ್ರಹ್ಮಣ್ಯ ಬಾಸ್ರಿ, ನಿತ್ಯಾನಂದ ಪಡ್ರೆ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲಾ ಗವರ್ನರ್ ಅಭಿನಂದನ್ ಶೆಟ್ಟಿ, ಮಾಜಿ ಅಸಿಸ್ಟೆಂಟ್ ಗವರ್ನರ್ ಜೈ ವಿಠಲ್ ಉಪಸ್ಥಿತರಿದ್ದರು. ರೋಟರಿ ಮಣಿಪಾಲ ಟೌನ್‌ನ ಪೂರ್ವಾಧ್ಯಕ್ಷ ಸಚ್ಚಿದಾನಂದ ನಾಯಕ್ ವಂದಿಸಿದರು.