Advertisement

ಉಕ್ಕಿನ ಸೇತುವೆ ವಿರೋಧಿಸಿ ಮರುಹೋರಾಟ

06:44 AM Jan 02, 2019 | |

ಬೆಂಗಳೂರು: ಸುಮಾರು ಒಂದೂವರೆ ವರ್ಷದ ಹಿಂದೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೈಬಿಟ್ಟಿದ್ದ “ಉಕ್ಕಿನ ಸೇತುವೆೆ’ ಯೋಜನೆ ಆರಂಭಿಸುವ ಇಂಗಿತವನ್ನು ಸಮ್ಮಿಶ್ರ ಸರ್ಕಾರ ವ್ಯಕ್ತಪಡಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

Advertisement

ಈ ಹಿಂದೆ ಅಂದರೆ, 2016ರ ಜೂನ್‌-ಜುಲೈನಲ್ಲಿ ಘೋಷಿಸಿದ್ದ ಉಕ್ಕಿನ ಸೇತುವೆ ನಿರ್ಮಾಣ ಯೋಜನೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಯೋಜನೆಯಿಂದ ಕಾಂಗ್ರೆಸ್‌ ಹೈಕಮಾಂಡ್‌ಗೆ “ಕಿಕ್‌ಬ್ಯಾಕ್‌’ ಹೋಗಿದೆ ಎಂಬ ಆರೋಪ ಕೇಳಿಬಂದಿತ್ತು.

ಅಷ್ಟೇ ಅಲ್ಲ, ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯ ಕೆ.ಗೋವಿಂದರಾಜು ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದಾಗ, ವಶಪಡಿಸಿಕೊಂಡ ಡೈರಿಯಲ್ಲಿ ಕೂಡ “ಸ್ಟೀಲ್‌ ಬ್ರಿಡ್ಜ್’ ಪ್ರಸ್ತಾಪ ಇತ್ತು. ಕಳೆದ ವಿಧಾನಸಭೆ ಚುನಾವಣೆ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಉಕ್ಕಿನ ಸೇತುವೆ ಉಲ್ಲೇಖೀಸಿ ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದ್ದರು.

ಸುಮಾರು 1,800 ಕೋಟಿ ರೂ. ವೆಚ್ಚದಲ್ಲಿ 6.7 ಕಿ.ಮೀ. ಉದ್ದದ ಉಕ್ಕಿನ ಸೇತುವೆ ನಿರ್ಮಿಸುವುದಾಗಿ ಅಂದು ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದ ಕೆ.ಜೆ.ಜಾರ್ಜ್‌ ಪ್ರಕಟಿಸಿದ್ದರು. ಇದಾಗಿ ಕೆಲವೇ ದಿನಗಳ ಅಂತರದಲ್ಲಿ ಯೋಜನಾ ವೆಚ್ಚ 200 ಕೋಟಿ ರೂ. ಹೆಚ್ಚಳವಾಗಿತ್ತು.

ಅಂದಾಜು 800 ಮರಗಳು ಈ ಯೋಜನೆಗೆ ಬಲಿ ಆಗಲಿದ್ದವು. ಇದನ್ನು ವಿರೋಧಿಸಿ ಪರಿಸರವಾದಿಗಳು, ಪ್ರಗತಿಪರರು, ಗಿರೀಶ್‌ ಕಾರ್ನಾಡ್‌ ಸೇರಿದಂತೆ ರಂಗಕರ್ಮಿಗಳು ಬೀದಿಗಿಳಿದು ಪ್ರತಿಭಟಿಸಿದ್ದರು. ಐದು ಸಾವಿರಕ್ಕೂ ಹೆಚ್ಚು ಜನ ಮಾರ್ಗದುದ್ದಕ್ಕೂ ಮಾನವ ಸರಪಳಿ ನಿರ್ಮಿಸಿ, ಸತ್ಯಾಗ್ರಹ ಮಾಡಿದ್ದರು.

Advertisement

ಪರ-ವಿರೋಧದ ದನಿ: ತೀವ್ರ ವಿರೋಧದ ನಡುವೆಯೇ ಸರ್ಕಾರ ಈ ಯೋಜನೆಗೆ ಟೆಂಡರ್‌ ಕರೆದು, ಎಲ್‌ ಆಂಡ್‌ ಟಿ ಕಂಪನಿಗೆ ಗುತ್ತಿಗೆ ನೀಡಿತ್ತು. ಜತೆಗೆ 200 ಕೋಟಿ ರೂ. ಬಿಡುಗಡೆ ಮಾಡಿತ್ತು ಎನ್ನಲಾಗಿದೆ. ಮತ್ತೂಂದೆಡೆ ಹೆಬ್ಟಾಳ, ಸಹಕಾರನಗರ ಹಾಗೂ ಸುತ್ತಮುತ್ತಲ ಜನ, ವಾಹನದಟ್ಟಣೆಗೆ ಮುಕ್ತಿ ಕಲ್ಪಿಸುವ ಉಕ್ಕಿನ ಸೇತುವೆ ಸೇರಿ ಯಾವುದೇ ಯೋಜನೆಗೆ ತಮ್ಮ ಸಹಮತ ಇದೆ ಎಂದು ಯೋಜನೆ ಪರವಾಗಿ ದನಿ ಎತ್ತಿದ್ದರು.

ಈ ಮಧ್ಯೆ ನಮ್ಮ ಬೆಂಗಳೂರು ಪ್ರತಿಷ್ಠಾನವು ಯೋಜನೆಯನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿತ್ತು. ಮತ್ತೂಂದೆಡೆ ಯೋಜನೆಗೆ ಸಂಬಂಧಿಸಿದಂತೆ “ಪರಿಸರ ಪರಿಣಾಮ ನಿರ್ಧರಣಾ ಅಧ್ಯಯನ ವರದಿ’ಯನ್ನು ಮಾಡಿಯೇ ಇಲ್ಲ ಎಂದು ಆರೋಪಿಸಿ ನಿವೃತ್ತ ಐಎಎಸ್‌ ಅಧಿಕಾರಿ ವಿ.ಬಾಲಸುಬ್ರಮಣ್ಯನ್‌ ನೇತೃತ್ವದಲ್ಲಿ ನಾಗರಿಕ ಕ್ರಿಯಾ ಸಮಿತಿ ಚೆನ್ನೈನ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ)ದ ಮೊರೆಹೋಗಿತ್ತು.

ವಿಚಾರಣೆ ನಡೆಸಿದ ಎನ್‌ಜಿಟಿ, ಪರಿಸರ ಪರಿಣಾಮ ನಿರ್ಧರಣಾ ಅಧ್ಯಯನ ನಡೆಸುವುದು ಅತ್ಯಗತ್ಯ ಎಂದು ಹೇಳಿತ್ತು. ತದನಂತರ ನ್ಯಾಯಾಧೀಕರಣದಿಂದ ನಿರ್ದೇಶನ ಬಂದ ಬೆನ್ನಲ್ಲೇ ಟೆಂಡರ್‌ ರದ್ದುಗೊಳಿಸುವುದರೊಂದಿಗೆ ಯೋಜನೆ ಕೈಬಿಟ್ಟಿರುವುದಾಗಿ ಸರ್ಕಾರ ಘೋಷಿಸಿತ್ತು.

“ಸರ್ಕಾರವೇ ಯೋಜನೆ ಕೈಬಿಟ್ಟಿದ್ದರಿಂದ ಎನ್‌ಜಿಟಿಯಲ್ಲಿದ್ದ ಪ್ರಕರಣ ತಾನಾಗೇ ವಜಾಗೊಂಡಿತ್ತು. ಈಗ ಮತ್ತೆ ಸರ್ಕಾರ ಅದೇ ಯೋಜನೆ ಕೈಗೆತ್ತಿಕೊಂಡರೆ, ನಾವು ಪುನಃ ಎನ್‌ಜಿಟಿ ಮೊರೆ ಹೋಗಬೇಕಾಗುತ್ತದೆ. ಆಗ, ಕಾನೂನು ಸಮರ ಮತ್ತೆ ಶುರುವಾಗಲಿದೆ,’ ಎಂದು ನಿವೃತ್ತ ಐಎಎಸ್‌ ಅಧಿಕಾರಿ ವಿ.ಬಾಲಸುಬ್ರಮಣಿಯನ್‌ ಹೇಳಿದ್ದಾರೆ.

ಯೋಜನೆಗೆ ವಿರೋಧವೇಕೆ?: ನಗರದ ಸಂಚಾರದಟ್ಟಣೆ ತಗ್ಗಿಸಲು ಸ್ಟೀಲ್‌ ಬ್ರಿಡ್ಜ್ ಪರಿಹಾರವಲ್ಲ. ಇದು ಖಾಸಗಿ ವಾಹನಗಳನ್ನು ಪ್ರೋತ್ಸಾಹಿಸುತ್ತದೆ. ಇದಕ್ಕಾಗಿ ನೂರಾರು ಮರಗಳನ್ನು ಕಡಿಯಲಾಗುತ್ತಿದೆ. ಪಾದಚಾರಿಗಳಿಗೂ ಇದರಿಂದ ಅನುಕೂಲ ಆಗುವುದಿಲ್ಲ.

ಇದೇ ಹಣದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ಸೂಕ್ತ. ಅಷ್ಟಕ್ಕೂ ಯೋಜನೆ ಕೈಗೆತ್ತಿಕೊಳ್ಳುವ ಮುನ್ನ ಪರಿಸರ ಪರಿಣಾಮ ನಿರ್ಧರಣಾ ಅಧ್ಯಯನವನ್ನೂ ನಡೆಸಿಲ್ಲ ಎಂಬುದನ್ನು ಎನ್‌ಜಿಟಿ ಗಮನಕ್ಕೆ ತರಲಾಗಿತ್ತು. ಇದನ್ನು ನ್ಯಾಯಾಧೀಕರಣ ಮಾನ್ಯಮಾಡಿತ್ತು ಎಂದು ಬಾಲಸುಬ್ರಮಣಿಯನ್‌ ಹೇಳುತ್ತಾರೆ.  

ಪರಿಸರಕ್ಕೆ ಹಾನಿ ಮಾಡಿ, ಕೆಲವೇ ವರ್ಗಗಳಿಗೆ ಅನುಕೂಲ ಕಲ್ಪಿಸುವ ಈ ಯೋಜನೆ ಕೈಬಿಡುವಂತೆ ಹಿಂದೆ ಸತ್ಯಾಗ್ರಹ ನಡೆಸಲಾಗಿತ್ತು. ತೀವ್ರ ವಿರೋಧದ ಹಿನ್ನೆಲೆಯಲ್ಲಿ ಕೈಬಿಟ್ಟಿದ್ದ ಯೋಜನೆಗೆ ಮತ್ತೆ ಕೈಹಾಕಿರುವುದು ಅಚ್ಚರಿ ಮೂಡಿಸಿದೆ ಎಂದು ಸಾರ್ವಜನಿಕ ನೀತಿ ಮತ್ತು ನಗರ ಆಡಳಿತ ತಜ್ಞ ಶ್ರೀಧರ್‌ ಪಬ್ಬಿಸೆಟ್ಟಿ ತಿಳಿಸುತ್ತಾರೆ.

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಕೂಡ ಈ ಯೋಜನೆ ಬಗ್ಗೆ ಅಧ್ಯಯನ ನಡೆಸಿ, ಉಕ್ಕಿನ ಸೇತುವೆ ನಿರ್ಮಾಣದಿಂದ 2,244 ಮರಗಳು ಬಲಿ ಆಗಲಿವೆ. ಇದರಲ್ಲಿ 80 ವರ್ಷ ಮೀರಿದ ಸಾಕಷ್ಟು ಮರಗಳಿವೆ. ಅವೆಲ್ಲಾ ಜೀವವೈವಿಧ್ಯತೆಯಿಂದಲೂ ಕೂಡಿರುವುದಾಗಿ ವರದಿಯಲ್ಲಿ ತಿಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next