ಬೆಂಗಳೂರು: ಜೆಡಿಎಸ್ ಬಂಡಾಯ ಶಾಸಕರು ರಾಜ್ಯಸಭೆ ಚುನಾವಣೆ ನಂತರ ಅಧಿಕೃತವಾಗಿ ಕಾಂಗ್ರೆಸ್ ಸೇರಲು ಮಹೂರ್ತ ನಿಗದಿಯಾಗಿದೆ.
ಮಾರ್ಚ್ 23 ರಂದು ರಾಜ್ಯಸಭೆ ಚುನಾವಣೆ ನಡೆಯಲಿದ್ದು ಅಂದು ಮತ ಚಲಾವಣೆ ನಂತರ ಮಾರ್ಚ್ 24 ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ಏಳು ಬಂಡಾಯ ಶಾಸಕರು ಮೈಸೂರಿನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.
ಮೈಸೂರು ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು ಅದೊಂದು ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನವೂ ಆಗಿರುವುದರಿಂದ ಹೆಚ್ಚಿನ ಜನ ಸೇರಿಸಲು ಏಳೂ ಶಾಸಕರಿಗೂ ಸೂಚಿಸಲಾಗಿದೆ ಎಂದು ಹೇಳಲಾಗಿದೆ.
ಹೈಕೋರ್ಟ್ ಮೊರೆ
ಜೆಡಿಎಸ್ ಬಂಡಾಯ ಶಾಸಕರು ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತದಾನ ಮಾಡದಂತೆ ತಡೆಯಲು ಮುಂದಾಗಿರುವ ಜೆಡಿಎಸ್, ಅವರ ವಿರುದ್ಧದ ಕ್ರಮದ ವಿಚಾರದಲ್ಲಿ ನ್ಯಾಯಕ್ಕಾಗಿ ಹೈಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದೆ.
ಈ ಹಿಂದೆ 2016 ರಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೀಕರ್‌ಗೆ ನೀಡಿರುವ ದೂರಿನ ಬಗ್ಗೆ ಇದುವರೆಗೂ ಕ್ರಮ ಕೈಗೊಳ್ಳದ ಕಾರಣ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.