ಕಲಬುರಗಿ: ಕಳೆದ ನಾಲ್ಕು ವರ್ಷಗಳ ಹಿಂದೆ ಯಾವ ಉದ್ದೇಶಕ್ಕಾಗಿ 371 ಜೆ ಕಲಂ ಜಾರಿಯಾಗಿದೆಯೋ ಅದಿನ್ನೂ ಈಡೇರಿಲ್ಲ. ಈಡೇರುವ ನಿಟ್ಟಿನಲ್ಲಿ ಹಲವಾರು ತೊಡಕುಗಳಿವೆ. ಅವುಗಳಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಮತ್ತೂಂದು ಹಂತದ ಹೋರಾಟದ ಅವಶ್ಯಕತೆ ಇದೆ. ಆದ್ದರಿಂದ ಮೀಸಲಾತಿ ಹಕ್ಕಿಗಾಗಿ ಅಭಿಯಾನ ರೂಪದ ಹೋರಾಟ ಮಾಡಲಾಗುವುದು ಎಂದು ಹೆ„ದ್ರಾಬಾದ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಅಧ್ಯಕ್ಷ ಲಕ್ಷಣ ದಸ್ತಿ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ನಾಳೆ ರವಿವಾರ 26ರಂದು ಬೆಳಗ್ಗೆ 10-30ಕ್ಕೆ ಪಕ್ಷಾತೀತವಾಗಿ ಎಲ್ಲಾ ಸಂಘಟನೆಗಳ ಮುಖಂಡರು ಹಾಗೂ ಬುದ್ದಿಜೀವಿಗಳ ಸಭೆಯನ್ನು ಕನ್ನಡ ಭವನದಲ್ಲಿ ಕರೆಯಲಾಗಿದೆ ಎಂದರು.
ಕಲಂ ಜಾರಿಯಾಗಿದ್ದರೂ, ವೀರೇಂದ್ರ ಪಾಟೀಲ ಮುಖ್ಯಮಂತ್ರಿ ಇದ್ದಾಗ ತೋರುತ್ತಿರುವ ನಿರ್ಲಕ್ಷವನೇ ಇಂದಿನ ಸಿದ್ದರಾಮಯ್ಯ ಅವರ ಸರಕಾರವೂ ತೋರುತ್ತಿದೆ ಎಂದು ಅಪಾದಿಸಿದ ಅವರು, ಮೀಸಲಾತಿ ಹಾಗೂ ಅಭಿವೃದ್ಧಿ ಸಮಗ್ರವಾಗಿ ನಡೆಯಬೇಕು. ಕೇವಲ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಸೀಟುಗಳು ಸಿಕ್ಕಾಕ್ಷಣ ಎಲ್ಲವೂ ಅಭಿವೃದ್ಧಿ ಆಗಿ ಹೋಗುವುದಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಹೆ„ದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಮೊದಲು 60 ಕೋಟಿ ರೂ.ಗಳನ್ನು ಕೊಡಲಾಗುತ್ತಿತ್ತು. ಈಗ 1000 ಕೋಟಿ ರೂ.ಗಳನ್ನು ಕೊಡಲಾಗುತ್ತಿದೆ. ಹಾಗೆ ನೋಡಬೇಕಾದರೆ ಈ ಹಣ ಏತಕ್ಕೂ ಸಾಲದು. ಕನಿಷ್ಠ 25000 ಕೋಟಿ ರೂ.ಗಳನ್ನು ಮಂಡಳಿಗೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
371(ಜೆ) ಅನುಷ್ಠಾನಕ್ಕೆ ಪ್ರತ್ಯೇಕ ಮಂತ್ರಾಲಯ ರಚಿಸುವಂತೆ, ನಿರ್ವಹಣೆ ಹಾಗೂ ಮೌಲ್ಯಮಾಪನ ನಡೆಯಲು ಪ್ರತಿ ಜಿಲ್ಲೆಯಲ್ಲಿ ಕಾನೂನು ಅರಿವು ಕೇಂದ್ರ ಸ್ಥಾಪಿಸುವಂತೆ, ವಿಶೇಷ ಸ್ಥಾನಮಾನದಡಿ ಸಮಸ್ಯೆಗಳ ನಿವಾರಣೆಗಾಗಿ ಅಪೀಲು ಹೋಗಲು ಒಂದು ಟ್ರಿಬ್ಯುನಲ್ ರಚಿಸುವಂತೆ,
ಈ ಭಾಗದ ನೇಮಕಾತಿ ಹಾಗೂ ಬಡ್ತಿ ವಿಷಯದಲ್ಲಿ ನ್ಯಾಯಸಮ್ಮತ ಫಲ ಪಡೆಯಲು ಎಲ್ಲ ಕ್ಷೇತ್ರದ ಪರಿಣಿತರನ್ನು ಒಳಗೊಂಡ ಒಂದು ಉಪ ಸಮಿತಿ ರಚಿಸುವಂತೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಂಡಳಿಗೆ ಬಜೆಟ್‌ನಲ್ಲಿ ಹಣ ಮೀಸಲಿಡುವಂತೆ ಅವರು ಆಗ್ರಹಿಸಿದರು.
ಈ ಎಲ್ಲ ಬೇಡಿಕೆಗಳ ಕುರಿತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಲೋಕಸಭೆಯಲ್ಲಿನ ಕಾಂಗ್ರೆಸ್ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರ ನೇತತ್ವದಲ್ಲಿ ಸಭೆ ನಡೆಸಲಾಗುವುದು. ಈ ಭಾಗದ ಹಕ್ಕಿಗಾಗಿ ಬೀದಿಗಿಳಿದು ಹೋರಾಟಕ್ಕೆ ಸಮಿತಿ ಪಣ ತೊಡಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ. ಮಾಜೀದ ಢಾಂಗೆ, ಮಿರಾಜುದ್ದೀನ್, ನಿಂಗಣ್ಣ ಉದನೂರ, ರಾಹುಲ್ ಹೊನ್ನಳ್ಳಿ, ಧರ್ಮಸಿಂಗ್ ತಿವಾರಿ, ಸಂತೋಷ ಭೈರಾಮಡಗಿ, ಆಕಾಶ ರಾಠೊಡ ಹಾಜರಿದ್ದರು.