Advertisement

ಇನ್ನು ಜಾತಿ ಗಣತಿ ವರದಿ ಆಧಾರದಲ್ಲಿ ಮೀಸಲಾತಿ ಪ್ರಕ್ರಿಯೆ?

01:16 AM Mar 21, 2024 | Team Udayavani |

ಮಂಗಳೂರು: 2021ರಲ್ಲಿ ಆಗಬೇಕಿತ್ತು. 2022ರಲ್ಲಿ ಸಾಧ್ಯವಾಗಲಿಲ್ಲ, 2023ರಲ್ಲಿ ವಿಧಾನಸಭಾ ಚುನಾವಣೆ ಬಂತು… ಈಗ 2024… ಈಗ ಲೋಕಸಭಾ ಚುನಾವಣೆ ಸಮಯ. ಇನ್ಯಾವಾಗಲೋ ಗೊತ್ತಿಲ್ಲ!

Advertisement

ಇದು ರಾಜ್ಯದಲ್ಲಿ ನಡೆಯಬೇಕಿರುವ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಚುನಾವಣೆಯ ವಿಧಿ.

ಇದರ ಮಧ್ಯೆಯೇ ಹಿಂದುಳಿದ ವರ್ಗಗಳ ಆಯೋಗದ ಜಾತಿ ಗಣತಿ ವರದಿ ಆಧರಿಸಿಯೇ ಮೀಸಲು ನಿಗದಿಪಡಿಸುತ್ತದೆ ಎಂಬ ಮಾತೂ ಕೇಳಿಬರುತ್ತಿದೆ. ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯಲ್ಲಿ ಅತಿ ಮುಖ್ಯ ಪಾತ್ರ ವಹಿಸಿರುವ ಜಿ.ಪಂ. ಹಾಗೂ ತಾ.ಪಂ.ಗಳಲ್ಲಿ ಚುನಾಯಿತ ಆಡಳಿತವಿಲ್ಲದೆ ಮೂರು ವರ್ಷ ಕಳೆದಿವೆ. ಪಂಚಾಯತ್‌ರಾಜ್‌ ವ್ಯವಸ್ಥೆಯಲ್ಲಿ ಇದು ದಾಖಲೆ. 3 ವರ್ಷಗಳಿಂದ ಅಧಿಕಾರಶಾಹಿಗಳದ್ದೇ ಆಡಳಿತ. ಜನರ ಆಶೋತ್ತರಗಳಿಗೆ ಸ್ಪಂದಿಸುವ, ನಿಯಮಿತವಾಗಿ ಯೋಜನೆಗಳ ಪ್ರಗತಿ ಪರಿಶೀಲಿಸುವ ಜನಪ್ರತಿನಿಧಿಗಳಿಲ್ಲ. ಇದರಿಂದ ಒಟ್ಟೂ ವ್ಯವಸ್ಥೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಯಾವುದೋ ಒಂದು ನಿಯಮದಡಿ ಒಂದಷ್ಟು ಅನುದಾನ ಬರುತ್ತದೆ, ಹೇಗೋ ಆಡಳಿತ ಅದರ ಪಾಡಿಗೆ ನಡೆಯುತ್ತಿದೆ ಎಂಬಂತಾಗಿದೆ.

ಮೀಸಲಾತಿ ಕಗ್ಗಂಟು
ಜಿ.ಪಂ. ಹಾಗೂ ತಾ.ಪಂ. ಕ್ಷೇತ್ರಗಳ ಪುನರ್‌ ವಿಂಗಡಣೆ ಹಾಗೂ ಮೀಸಲಾತಿ ನಿಗದಿ ವಿಷಯ ಬಹಳ ವರ್ಷಗಳಿಂದ ಅಂತಿಮಗೊಂಡಿಲ್ಲ. ಹಲವು ಬಾರಿ ಸರಕಾರವನ್ನು ಹೈಕೋರ್ಟ್‌ ಸಹ ತರಾಟೆಗೆ ತೆಗೆದುಕೊಂಡಿದೆ. ಕಳೆದ ಡಿಸೆಂಬರ್‌ನಲ್ಲಿ ಸರಕಾರವು ಆದಷ್ಟು ಬೇಗ ಜಿ.ಪಂ./ತಾ.ಪಂ. ಚುನಾವಣೆ ಪೂರ್ವಭಾವಿ ಕೆಲಸಗಳನ್ನು ಮುಗಿಸುತ್ತೇವೆ ಎಂದು ಹೈಕೋರ್ಟ್‌ಗೆ ತಿಳಿಸಿತ್ತು. ಹಾಗಾಗಿ ಜನವರಿ-ಫೆಬ್ರವರಿಯಲ್ಲೇ ಚುನಾವಣೆ ನಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಲಭ್ಯ ಮಾಹಿತಿ ಪ್ರಕಾರ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆ ಮುಗಿದಿದ್ದರೂ ಮೀಸಲಾತಿ ಅಂತಿಮಗೊಂಡಿಲ್ಲ. ಇದೇವೇಳೆ ಲೋಕಸಭಾ ಚುನಾವಣೆ ಪ್ರಕಟವಾಗಿದೆ. ಇನ್ನು ಈ ಚುನಾವಣೆ ಮುಗಿದ ಮೇಲೆಯೇ ಪಂಚಾಯತ್‌ ಚುನಾವಣೆಗೆ ಸಾಧ್ಯ.

15ನೇ ಹಣಕಾಸು
ಆಯೋಗದ ಹಣ ಬಾಕಿ
ಜಿ.ಪಂ.ಗೆ ಬರುವ ಅನುದಾ ನದಲ್ಲಿ ದೊಡ್ಡ ಪ್ರಮಾಣದ್ದು ಎಂದರೆ 15ನೇ ಹಣಕಾಸು ಆಯೋಗದ್ದು. ಜಿ.ಪಂ.ನಲ್ಲಿ ಚುನಾಯಿತ ಆಡಳಿತ ಇದ್ದರೆ ಮಾತ್ರ ಈ ಅನುದಾನ ಲಭ್ಯವಾಗಲಿದೆ. ದ.ಕ. ಜಿ.ಪಂ.ನಲ್ಲಿ 202-21ರಲ್ಲಿ ಕೇಂದ್ರದ ಪಾಲು 412 ಕೋಟಿ ರೂ. ಬಂದಿದೆ. 2021-22ಲ್ಲಿ 284 ಕೋಟಿ ರೂ. ಮಾತ್ರ ಬಂದಿದೆ. 2022-23ರಲ್ಲಿ ಅನುದಾನ ಶೂನ್ಯ. ಇದು ಹಲವು ರೀತಿಯ ಕುಡಿಯುವ ನೀರು, ರಸ್ತೆ ಇತ್ಯಾದಿ ಕಾಮಗಾರಿಗಳಿಗೆ ಅಗತ್ಯವಾದ ಅನುದಾನ. ಈಗ ಇದರ ಕೊರತೆ ಕಾಡುತ್ತಿದೆ ಎನ್ನುತ್ತಾರೆ ಜಿ.ಪಂ. ಮಾಜಿ ಸದಸ್ಯರಾದ ಜನಾರ್ದನ ಗೌಡ.

Advertisement

ಮೀಸಲಾತಿ ನಿಗದಿಗೆ ಜಾತಿ
ಗಣತಿ ವರದಿ ಪರಿಗಣನೆ?
ಜಿ.ಪಂ/ತಾ.ಪಂ. ಚುನಾವಣೆಗೆ ಇನ್ನೂ ಮೀಸಲು ನಿಗದಿಪಡಿಸಿಲ್ಲ. ಅದನ್ನು ಹಿಂದುಳಿದ ವರ್ಗಗಳ ಆಯೋಗದ ಜಾತಿ ಗಣತಿ ವರದಿಯ ಆಧಾರದಲ್ಲಿ ನಿಗದಿ ಪಡಿಸುವ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ ಎನ್ನುತ್ತಾರೆ ವಿಧಾನ ಪರಿಷತ್‌ ಸದಸ್ಯ ಡಾ| ಮಂಜುನಾಥ ಭಂಡಾರಿ. ಹಿಂದಿನ ಸರಕಾರಗಳ ನಿಲುವಿನಂತೆ ಕೇವಲ ಪರಿಶಿಷ್ಟರಿಗೆ ಮಾತ್ರವೇ ಮೀಸಲಾತಿ ಇದ್ದು ಒಬಿಸಿ ಕೆಟಗರಿಯವರು ಸಾಮಾನ್ಯ ವರ್ಗಕ್ಕೇ ಮೀಸಲಾತಿ ಪಡೆಯುವಂತಾಗುತ್ತಿತ್ತು. ಇದರಿಂದ ಒಬಿಸಿಯವರಿಗೆ ಅನ್ಯಾಯವಾಗುತ್ತದೆ ಎಂಬ ಕಾರಣಕ್ಕಾಗಿ ಮೀಸಲಾತಿ ವೇಳೆ ಅವರನ್ನೂ ಪರಿಗಣಿಸುವ ಬಗ್ಗೆ ವೈಜ್ಞಾನಿಕ ವರದಿಯಾಗಿರುವ ಜಯಪ್ರಕಾಶ್‌ ಹೆಗ್ಡೆ ಸಮಿತಿ ವರದಿಯನ್ನು ಸರಕಾರ ಪರಿಗಣಿಸುವ ಸಾಧ್ಯತೆಗಳಿವೆ.

ರಾಜ್ಯ ಸರಕಾರ ಇನ್ನೂ ಜಿ.ಪಂ./ತಾ.ಪಂ. ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ, ಲೋಕಸಭೆ
ಚುನಾವಣೆ ಮುಗಿಯದೆ ಜಿ.ಪಂ.ಚುನಾವಣೆ ನಡೆಸುವುದು ಸಾಧ್ಯವಾಗದು.
– ಶಶಿಕಿರಣ್‌ ಶೆಟ್ಟಿ , ಅಡ್ವೊಕೇಟ್‌ ಜನರಲ್‌

-ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next