ಅಹ್ಮದಾಬಾದ್: ಮೀಸಲಾತಿ ರಹಿತ ಸಾಮಾನ್ಯ ವರ್ಗಕ್ಕೆ ಶೇ.10 ಮೀಸಲಾತಿ ಕಾನೂನಿನ ಅನುಷ್ಠಾನ ತಮ್ಮ ಸರಕಾರದ ರಾಜಕೀಯ ಇಚ್ಛಾಶಕ್ತಿಯಿಂದಲೇ ಸಾಧ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಹ್ಮದಾಬಾದ್‌ನಲ್ಲಿ ನಿರ್ಮಾಣ ಗೊಂಡಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ವೈದ್ಯಕೀಯ ಸಂಶೋಧನಾ ಕೇಂದ್ರದ 1,500 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾನ್ಯ ವರ್ಗದ ಮೀಸಲಾತಿ ನೀತಿಯು ಹಾಲಿ ಇರುವ ಮೀಸಲಾತಿಗಳಿಗೆ ಧಕ್ಕೆ ತಾರದು ಎಂದು ಆಶ್ವಾಸನೆ ನೀಡಿದರು.
“ಹೊಸ ಮೀಸಲಾತಿ ದೇಶದ 900 ವಿಶ್ವವಿದ್ಯಾಲಯಗಳ 40,000 ಕಾಲೇಜುಗಳಲ್ಲಿ ಇದೇ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ. ಹಾಗಾಗಿ, ಈ ಕಾಲೇಜುಗಳಲ್ಲಿನ ಸೀಟುಗಳ ಸಂಖ್ಯೆ ಯಲ್ಲೂ ಶೇ. 10ರಷ್ಟು ಹೆಚ್ಚಳವಾಗಲಿದೆ’ ಎಂದು ತಿಳಿಸಿದ ಅವರು, ಕಳೆದ ನಾಲ್ಕೂವರೆ ವರ್ಷಗಳಲ್ಲಿ ನಮ್ಮ ಸರಕಾರ, ವಿವಿಧ ರಂಗಗಳಲ್ಲಿ ಕೋಟಿಗಟ್ಟಲೆ ಉದ್ಯೋಗಾವಕಾಶ ಸೃಷ್ಟಿ ಮಾಡಿದೆ ಎಂದು ಹೇಳಿದರು.
ಆಯುಷ್ಮಾನ್‌ಗೆ ಸೇರ್ಪಡೆ: ಉದ್ಘಾಟನೆ ಗೊಂಡ ಹೊಸ ಆಸ್ಪತ್ರೆಯನ್ನು ಆಯುಷ್ಮಾನ್ ಭಾರತ ಯೋಜನೆ ಜತೆಗೆ ಸಮ್ಮಿಳಿತಗೊಳಿಸಲಾಗುತ್ತದೆ. ಇದರಿಂದ, ಬಡವರಿಗೆ ಉಚಿತ ವೈದ್ಯಕೀಯ ಚಿಕಿತ್ಸೆಗಳು ಲಭ್ಯವಾಗಲಿವೆ. ಸರ್ದಾರ್ ಪಟೇಲರು ಅಹ್ಮದಾಬಾದ್ ನಗರದ ಮೇಯರ್ ಆಗಿದ್ದಾನಿಂದಲೂ ಆರೋಗ್ಯ ಸೇವೆಗಳಿಗೆ ಪ್ರಾಮುಖ್ಯ ನೀಡಲಾಗುತ್ತಿದ್ದು, ಇದೇ ಆಶಯವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ನೂತನ ಆಸ್ಪತ್ರೆಯಲ್ಲಿ ಹೆಲಿಪ್ಯಾಡ್, ಮತ್ತಿತರ ಹೊಸ ವೈದ್ಯಕೀಯ ಸೇವೆಗಳೂ ಲಭ್ಯವಿವೆ ಎಂದರು.
“ಯುವ ಜನತೆ ಆಶೋತ್ತರ ಈಡೇರಿಸಲು ಬದ್ಧ’
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗಾಗಿ “ವಿಜಯ ಲಕ್ಷ್ಯ 2019′ ಅಭಿಯಾನ ಆರಂಭಿಸಿರುವ ಬಿಜೆಪಿ ಯುವ ಮೋರ್ಚಾವನ್ನು ಕೊಂಡಾಡಿರುವ ಮೋದಿ, ದೇಶದ ಯುವ ಜನರ ಮೇಲೆ ತಮಗೆ ಅಪಾರ ಭರವಸೆಯಿದ್ದು ಬಿಜೆಪಿಯು ಯುವ ಜನತೆಯ ಆಶೋತ್ತರಗಳನ್ನು ಈಡೇರಿಸುವಲ್ಲಿ ದೃಢ ನಿಶ್ಚಯ ಹೊಂದಿದೆ ಎಂದಿದ್ದಾರೆ.
ಆಯುಷ್ಮಾನ್ ಭಾರತ್ ಯೋಜನೆಯ ಮೊದಲ 100 ದಿನಗಳನ್ನು ಪೂರೈಸಿದ ಭಾರತ ಸರಕಾರಕ್ಕೆ ಅಭಿನಂದನೆಗಳು. ಈ ಯೋಜನೆಯಿಂದ ಸಾಕಷ್ಟು ಮಂದಿ ಅನುಕೂಲ ಪಡೆದಿರುವುದನ್ನು ನೋಡಿ ಸಂತೋಷವಾಗುತ್ತಿದೆ.
ಬಿಲ್ ಗೇಟ್ಸ್