Advertisement

ಖಾಸಗಿ ವಲಯದಲ್ಲೂ ಮೀಸಲಾತಿ ಅಗತ್ಯ: ಅನೀಸ್‌ ಪಾಷಾ

01:40 PM Jun 12, 2017 | Team Udayavani |

ದಾವಣಗೆರೆ: ಖಾಸಗಿ ವಲಯದಲ್ಲೂ ಮೀಸಲಾತಿ ದೊರಕುವಂತೆ ಸರ್ಕಾರಗಳು ಕ್ರಮ ವಹಿಸಬೇಕು ಎಂದು ಕೋಮು ಸೌಹಾರ್ದ ವೇದಿಕೆಯ ಗೌರವಾಧ್ಯಕ್ಷ ಅನೀಸ್‌ ಪಾಷಾ ಹೇಳಿದ್ದಾರೆ. 

Advertisement

ಭಾನುವಾರ ರಾಜ್ಯ ವರ್ಕ್‌ಶಾಪ್‌ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘ, ದಾವಣಗೆರೆ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ವಿದ್ಯಾರ್ಥಿ ಸಂಘಟನೆಯಿಂದ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆ, ಕಾರ್ಮಿಕರ ಮಕ್ಕಳಿಗೆ ಅಭಿನಂದನಾ ಸಮಾರಂಭ, ಇಫ್ತಿಯಾರ್‌ ಕೂಟ ಉದ್ಘಾಟಿಸಿ, ಮಾತನಾಡಿದರು.

ಇಂದು ಕಾರ್ಮಿಕರ ಸ್ಥಿತಿ ತೀರಾ ಶೋಚನೀಯವಾಗಿದೆ. ದಲಿತ, ಹಿಂದುಳಿದವರಂತೂ ಕೆಲಸಕ್ಕಾಗಿ ಪರದಾಡುವ ಸ್ಥಿತಿ ಇದೆ. ಸರ್ಕಾರ ಖಾಸಗಿ ವಲಯದಲ್ಲೂ ಮೀಸಲಾತಿ ನೀಡುವ ಮೂಲಕ  ಎಲ್ಲಾ ರಂಗದಲ್ಲೂ ಹಿಂದುಳಿದವರಿಗೆ ಕೆಲಸ ಸಿಗುವ ಹಾಗೆಮಾಡಬೇಕಿದೆ ಎಂದರು. ಖಾಸಗಿ ವಲಯದಲ್ಲಿ ಮೀಸಲಾತಿ ನೀಡಿದರೂ ಕೆಲ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.

ಅವುಗಳ ಕುರಿತು ಕೂಲಂಕೂಷ ವಿಚಾರ ಮಾಡಿ, ಸೂಕ್ತ ನಿಯಮಾವಳಿ ರೂಪಿಸಿ, ಮೀಸಲಾತಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಎಲ್ಲಾ ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಖಾಸಗೀಕರಣಗೊಳಿಸಿ, ಸಾರ್ವಜನಿಕ ಸ್ವಾಮ್ಯಕ್ಕೆ ತರುವ ಹುನ್ನಾರ ನಡೆಯುತ್ತಿದೆ.

ಇದರಿಂದ ಸಮಾಜದಲ್ಲಿ ಸಮಾನತೆ, ಬಡವರ ಏಳಿಗೆ ಚಿಂತನೆ ಇಲ್ಲದೆ ಕೇವಲ ದುಡ್ಡು ಮತ್ತು ಆಧಿಕಾರದ ಛಲವುಳ್ಳ ಮುಮಚೂಣಿಗೆ ಬರುವ ಬಂಡವಾಳಶಾಹಿ ಕಂಪನಿಗಳಿಂದ ಕಾರ್ಮಿಕ ವಲಯಕ್ಕೆ ಅನ್ಯಾಯವಾಗಲಿದೆ ಎಂದು ಹೇಳಿದರು. ಇದೀಗ ಕಾರ್ಮಿಕ ಕ್ಷೇತ್ರದಲ್ಲಿ ಜಾತೀಯತೆ ಪ್ರವೇಶಿಸಿದ್ದು, ಜಾತಿ, ಧರ್ಮ ವಿಷ ಬೀಜವನ್ನು ಬಿತ್ತಲಾಗುತ್ತಿದೆ.

Advertisement

ಇದರಿಂದ ಎಲ್ಲಾ ವಿಭಾಗದಲ್ಲೂ ತಾರತಮ್ಯ ನೋಡುವಂತಹ ಸ್ಥಿತಿ ಇಂದು ನಿರ್ಮಾಣ ಆಗಿದೆ. ಜಾತಿ ಆಧಾರದಲ್ಲಿ ಕಾರ್ಮಿಕರ ನೇಮಕಮಾಡಿಕೊಳ್ಳುತ್ತಾ ಹೋದರೆ ಮುಂದೆ ದೇಶಕ್ಕೆ ದೊಡ್ಡ ಕಂಟಕ ಬಂದೊದಗಲಿದೆ ಎಂದು ಹೇಳಿದರು. ಜೆಡಿಎಸ್‌ ಯುವ ಘಟಕದ ಜಿಲ್ಲಾಧ್ಯಕ್ಷ ಜೆ. ಅಮಾನುಲ್ಲಾ ಖಾನ್‌ ಮಾತನಾಡಿದರು.

ದೇಶಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಕಾರ್ಮಿಕ ಶಕ್ತಿ ಪ್ರಸ್ತುತ ಪಟ್ಟಭದ್ರ ಹಿತಾಸಕ್ತಿಗಳು ಒಡೆದು ಆಳುವ ನೀತಿ ಅನುಸರಿಸುತ್ತಿರುವುದರಿಂದ ಸೌಲಭ್ಯ ಸಿಗದಂತೆ ಆಗಿದೆ. ಕಾರ್ಮಿಕರನ್ನು ಜೀತದಾಳು ರೀತಿ ನೋಡಲಾಗುತ್ತಿದೆ ಎಂದರು. ವರ್ಕ್‌ಶಾಪ್‌ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಮೀಲ್‌ ಅಹ್ಮದ್‌ ಬಳ್ಳಾರಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸತೀಶ್‌ ಅರವಿಂದ್‌, ಸೈಯದ್‌ ಅಶಕ್‌, ಉಷಾ ಎಚ್‌. ಕೈಲಾಸದ್‌, ಇಪಾ ಕಲಾವಿದ ಐರಣಿ ಚಂದ್ರು ವೇದಿಕೆಯಲ್ಲಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next