Advertisement

Siddaramaiah: ಕ್ರೀಡಾಪಟುಗಳಿಗೆ ಎಲ್ಲಾ ಇಲಾಖೆಗಳ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ; ಸಿಎಂ

03:17 PM Oct 18, 2023 | Team Udayavani |

ಬೆಂಗಳೂರು:  ಪ್ರಸ್ತುತ ಪೊಲೀಸ್‌ ಮತ್ತು ಅರಣ್ಯ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ ನೇಮಕಾತಿಯಲ್ಲಿ ಶೇ.3 ರಷ್ಟು ಮೀಸಲಾತಿ ನೀಡಲಾಗುತ್ತಿದ್ದು, ಇತರ ಇಲಾಖೆಗಳಲ್ಲಿಯೂ ಶೇ.2 ರಷ್ಟು ಮೀಸಲಾತಿ ನೀಡುವ ಕುರಿತು ಸಕಾರಾತ್ಮಕವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Advertisement

ಇತ್ತೀಚೆಗೆ ಚೀನಾದಲ್ಲಿ ನಡೆದ 19ನೇ ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಪಡೆದ ರಾಜ್ಯದ ಕ್ರೀಡಾಪಟುಗಳು ಮತ್ತು ತರಬೇತುದಾರರನ್ನು ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸನ್ಮಾನಿಸಿ, ನಗದು ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದರು.

ದೇಶ ಮತ್ತು ರಾಜ್ಯದ ಗೌರವ ಹೆಚ್ಚು ಮಾಡಿದ್ದೀರಿ. ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ವಿಷಯ. ಈ ಬಾರಿ ಚೀನಾದಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಅತ್ಯಧಿಕ ಪದಕಗಳನ್ನು ಗೆದ್ದಿದ್ದಾರೆ. ಕಳೆದ ಬಾರಿ 70, ಈ ಬಾರಿ 107 ಪದಕ ಗೆದ್ದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇಡೀ ಜಗತ್ತಿನಲ್ಲಿ ಜನಸಂಖ್ಯೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಏಷ್ಯನ್‌ ಗೇಮ್ಸ್‌ನಲ್ಲಿಯೂ ಮೊದಲ-ಎರಡನೇ ಸ್ಥಾನ ಬಂದರೆ ಗೌರವ ಹೆಚ್ಚಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರ ಕ್ರೀಡೆಗೆ ಉತ್ತೇಜನ ನೀಡಲು ಬದ್ಧವಾಗಿದ್ದು, ತಾವು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಏಷ್ಯನ್‌ ಗೇಮ್ಸ್‌, ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಬಹುಮಾನ ಮೊತ್ತ ನೀಡುವ ಕುರಿತು ಘೋಷಿಸಲಾಗಿತ್ತು. ಅತಿ ಹೆಚ್ಚು ಮೊತ್ತದ ಬಹುಮಾನ ಘೋಷಿಸಿದ ಮೊದಲ ರಾಜ್ಯ ನಮ್ಮದು ಎಂದು ಅವರು ವಿವರಿಸಿದರು.

Advertisement

ಈಗ ನಮ್ಮ ರಾಜ್ಯದಿಂದ 8 ಜನ ಪದಕ ಪಡೆದಿದ್ದಾರೆ, ಸರ್ಕಾರ ಮತ್ತು ಏಳು ಕೋಟಿ ಕನ್ನಡಿಗರ ವತಿಯಿಂದ ಅಭಿನಂದನೆಗಳು. ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವುದು ಸಣ್ಣ ವಿಷಯವಲ್ಲ. ಇದಕ್ಕೆ ಅಪಾರ ಪರಿಶ್ರಮದ ಅಗತ್ಯವಿದೆ. ನೀವು ಅದ್ಭುತ ಸಾಧನೆ ಮಾಡಿದ್ದೀರಿ. ಓಲಿಂಪಿಕ್ಸ್‌ನಲ್ಲಿಯೂ ಪದಕ ಗೆಲ್ಲುವ ಪ್ರಯತ್ನ ಮಾಡಿ ಎಂದು ಶುಭ ಹಾರೈಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾಗೇಂದ್ರ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ನಸೀರ್‌ ಅಹ್ಮದ್‌, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್‌ ಪ್ರಸಾದ್‌ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಪದಕ ವಿಜೇತರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಂದರ್ಭದಲ್ಲಿ ಏಷ್ಯನ್‌ ಗೇಮ್ಸ್‌ನ ಪದಕ ವಿಜೇತ ರಾಜ್ಯದ ಕ್ರೀಡಾಪಟುಗಳಾದ ರಾಜೇಶ್ವರಿ ಗಾಯಕ್ವಾಡ್‌ (ಕ್ರಿಕೆಟ್- ಚಿನ್ನ), ರೋಹನ್‌ ಬೋಪಣ್ಣ (ಟೆನ್ನಿಸ್- ಮಿಕ್ಸ್‌ಡ್‌ ಡಬಲ್ಸ್- ಚಿನ್ನ), ಮಿಜೋ ಚಾಕೋ ಕುರಿಯನ್‌, ನಿಹಾಲ್‌ ಜೋಯಲ್‌ (ಅಥ್ಲೆಟಿಕ್ಸ್‌ ಪುರುಷರ 4*400 ಮೀ. ರಿಲೇ -ಕಾಯ್ಡಿರಿಸಿದ ಕ್ರೀಡಾಪಟು- ಚಿನ್ನ), ಮಿಥುನ್‌ ಮಂಜುನಾಥ್‌ (ಪುರುಷರ ಬ್ಯಾಡ್ಮಿಂಟನ್- ಬೆಳ್ಳಿ), ಸಾಯಿ ಪ್ರತೀಕ್‌ (ಪುರುಷರ ಬ್ಯಾಡ್ಮಿಂಟನ್‌ ಬೆಳ್ಳಿ), ದಿವ್ಯಾ (ಶೂಟಿಂಗ್‌- ಎರಡು ಬೆಳ್ಳಿ ಪದಕ), ಹಾಗೂ ತರಬೇತುದಾರರಾದ ವಿ.ತೇಜಸ್ವಿನಿ ಬಾಯಿ (ಕಬಡ್ಡಿ- ಚಿನ್ನ), ಅಂಕಿತ ಬಿ.ಎಸ್. (ಹಾಕಿ- ಕಂಚು), ಸಿ.ಎ.ಕುಟ್ಟಪ್ಪ (ಬಾಕ್ಸಿಂಗ್‌ ಮುಖ್ಯ ತರಬೇತುದಾರರು- 1 ಬೆಳ್ಳಿ ಮತ್ತು 4 ಕಂಚು) ಅವರಿಗೆ ರಾಜ್ಯ ಸರ್ಕಾರದ ವತಿಯಿಂದ ಸನ್ಮಾನ ಮಾಡಿ, ನಗದು ಪುರಸ್ಕಾರ ಪ್ರದಾನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next