Advertisement

ಪಂಚಮಸಾಲಿ, ಒಕ್ಕಲಿಗರಿಗೆ ಮೂರು ತಿಂಗಳಲ್ಲಿ ಮೀಸಲಾತಿ: ಸಚಿವ ಮುರುಗೇಶ ನಿರಾಣಿ

10:52 AM Jan 07, 2023 | Team Udayavani |

ವಿಜಯಪುರ: ನಮ್ಮ ಸರ್ಕಾರ ಪ್ರಕಟಿಸಿರುವ ಹೊಸ ಸ್ವರೂಪದ ಮೀಸಲಾತಿಯಿಂದ ಯಾವುದೇ ಸಮುದಾಯಕ್ಕೆ ಅನ್ಯಾಯ ಆಗದಂತೆ ಹೊಸ ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ. ಪಂಚಮಸಾಲಿ, ಒಕ್ಕಲಿಗ ಮಾತ್ರವಲ್ಲ ಇತರೆ ಸಮುದಾಯಗಳಿಗೂ ಮೂರು ತಿಂಗಳಲ್ಲಿ ಕಾನೂನು ತೊಡಕಾಗದಂತೆ ಮೀಸಲು ಸೌಲಭ್ಯ ದಕ್ಕಲಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಭರವಸೆ ನೀಡಿದರು.

Advertisement

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕೇಂದ್ರ ಸರ್ಕಾರ ಆರ್ಥಿಕ ಹಿಂದುಳಿದ ವರ್ಗಕ್ಕೆ ಶೇ.10 ಘೋಷಿಸಿದೆ. ಮತ್ತೊಂದೆಡೆ ಕೆಲವು ಸಮುದಾಯಗಳು ಎರಡು-ಮೂರು ಕಡೆಗಳಲ್ಲಿ ಮೀಸಲು ಪಡೆಯುತ್ತಿವೆ. ಇಂತ ಸಮುದಾಯಗಳನ್ನು ಒಂದು ಕಡೆ ಮಾತ್ರ ಮೀಸಲು ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಇದರಿಂದ ಉಳಿಕೆಯಾಗುವ ಶೇ.4-5 ಪ್ರಮಾಣವನ್ನು ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗರಿಗೆ ಮೀಸಲು ಹೆಚ್ಚಿಸಲು ಯೋಚಿಸಿಯೇ 2ಸಿ, 2ಡಿ ಯೋಜಿಸಿದ್ದೇವೆ ಎಂದು ವಿವರಿಸಿದರು.

ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೇ ಪಂಚಮಸಾಲಿ ಸಮುದಾಯವನ್ನು 3ಬಿ ಪ್ರವರ್ಗಕ್ಕೆ ಸೇರಿಸಿದ್ದಲ್ಲದೇ, ಬಸವರಾಜ ಬೊಮ್ಮಾಯಿ, ನಾರಾಯಣಸ್ವಾಮಿ, ಸಿ.ಎಂ.ಉದಾಸಿ ಹಾಗೂ ನನ್ನ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚಿಸಿತ್ತು. ಆಗ ನಮ್ಮ ಸಮಿತಿ 2ಎ ಮಾಡಲು ಶಿಫಾರಸು ಮಾಡಿತ್ತು. ಕಾಂಗ್ರೆಸ್ ಆಡಳಿತದಲ್ಲಿದ್ದ ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜ ತಿರಸ್ಕಾರ ಮಾಡಿದ್ದರು ಎಂದು ವಿವರಿಸಿದರು.

ಇದನ್ನೂ ಓದಿ:ಅಬ್ಬಾ! 20 ಕೋಟಿ ಬೆಲೆ ಬಾಳುವ ಶ್ವಾನವಿದು…

ಪಂಚಮಸಾಲಿ ಮೀಸಲಾತಿ ಹೋರಾಟದ ಸ್ವರೂಪ ಹಾಗೂ ನಿಲುವಿನಲ್ಲಿ ಕೂಡಲಸಂಗಮ ಪೀಠಕ್ಕೂ ನಮಗೂ ತಾತ್ವಿಕ ವ್ಯತ್ಯಾಸವಿದೆ. ಈ ಕಾರಣದಿಂದ ಅವರು ಮಾಡುವ ಹೋರಾಟದಲ್ಲಿ ನಾವು ಪಾಲ್ಗೊಳ್ಳುತ್ತಿಲ್ಲ. ಆದರೆ ಸಮಾಜಕ್ಕೆ ಮೀಸಲು ಕಲ್ಪಿಸುವ ವಿಷಯದಲ್ಲಿ ನಮಗೂ ಬದ್ದತೆ ಇದೆ. ಹೀಗಾಗಿಯೇ ಕಾನೂನಾತ್ಮಕವಾಗಿ ನಾವು ಸಮುದಾಯಕ್ಕೆ ಮೀಸಲು ಕಲ್ಪಿಸಲು ಹೋರಾಟ ನಡೆಸಿದ್ದೇವೆ. ಸೌಜನ್ಯದ ಹೋರಾಟಕ್ಕಷ್ಟೇ ನಮ್ಮ ಬೆಂಬಲ ಎಂದರು.

Advertisement

2011 ಜನಗಣತಿ ಆಧಾರದಲ್ಲಿ ಮೂರು ತಿಂಗಳಲ್ಲಿ ಈಗಿರುವ ಮೀಸಲಾತಿಯಲ್ಲಿನ ಯಾವ ಸಮುದಾಯಕ್ಕೂ ಅನ್ಯಾಯವಾಗದಂತೆ 2ಸಿ, 2ಡಿ ಮೀಸಲು ಕಲ್ಲಿಸಲಾಗುತ್ತದೆ. ಚುನಾವಣೆ ಪೂರ್ವದಲ್ಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಪಂಚಮಸಾಲಿ ಸಮುದಾಯದ ಹೋರಾಟದ ವೇದಿಕೆಯಲ್ಲಿ ಬಣಜಿಗ ಸಮಾಜದ ಬಗ್ಗೆ ಸಭೆ ಹಗುರವಾಗಿ ಮಾತನಾಡುವ ನೀವು, ನಿಮ್ಮ ಮಾತುಗಳಿಂದ ಸೌಹಾರ್ದದ ಸಮಾಜಲ್ಲಿ ಕಂದಕ ನಿರ್ಮಾಣ ಆಗುತ್ತಿದೆ. ಸಭೆಯಲ್ಲಿ ಚಪ್ಪಾಳೆ ಗಿಟ್ಟಿಸಿಕೊಳ್ಳಲು ಆಡುವ ನಿಮ್ಮ ಮಾತುಗಳಿಗೆ ಚುನಾವಣೆಯಲ್ಲಿ ಸೂಕ್ತ ಉತ್ತರ ಸಿಗಲಿದೆ ಎಂದು ಪರೋಕ್ಷವಾಗಿ ಯತ್ನಾಳ ಹಾಗೂ ವಿಜಯಾನಂದ ಕಾಶಪ್ಪನವರ ಅವರಿಗೆ ಎಚ್ಚರಿಕೆ ನೀಡಿದರು.

ಇಷ್ಟಕ್ಕೂ ನಾವು ಬಚ್ಚಾಗಳೇ ಆಗಿರುವುದರಿಂದ ಅತಿ ಬುದ್ದಿವಂತರಾದ ತಾವು ನಮಗೆ ಮಾರ್ಗದರ್ಶನ ಮಾಡಿದರೂ ಸ್ವೀಕಸಲು ಸಿದ್ದರಿದ್ದೇವೆ ಎಂದು ಸಚಿವ ನಿರಾಣಿ ಶಾಸಕ ಯತ್ನಾಳ ಅವರನ್ನು ಕುಟುಕಿದರು.

ಕೂಡಲಸಂಗಮ ಹಾಗೂ ಹರಿಹರ ಪೀಠಗಳನ್ನು ಒಗ್ಗೂಡಿಸಲು ಬಬಲೇಶ್ವರ, ಇಂಡಿ ಭಾಗದಲ್ಲಿ ನಾವು ಸಮಾಜವನ್ನು ಸಂಘಟಿಸಿ ಮಾಡಿದ ಕಾರ್ಯಕ್ರಮದ ವೇದಿಕೆ ಬಂದ ನೀವು ಎಲ್ಲರ ಬಗ್ಗೆ ಹಗುರವಾಗಿ ಮಾತನಾಡಿದಿರಿ. ಮೂರು ಪೀಠ ಮಾಡುವಲ್ಲಿ ನನ್ನ ಪಾತ್ರವಿದೆ. ದೊಡ್ಡ ಸಂಖ್ಯೆಯ ಸಮುದಾಯಕ್ಕೆ ಮೂರಲ್ಲ, ಪಂಚಮಸಾಲಿ ಸಮುದಾಯಕ್ಕೆ ಪಂಚಪೀಠ ಮಾಡುತ್ತೇವೆ. ಎಲ್ಲ ಪೀಠಕ್ಕೆ ನನ್ನ ಸಹಕಾರ, ಕೊಡುಗೆ ಇದೆ, ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next