Advertisement

Reservation For Kannadigas; ಕಂಪೆನಿಗಳಿಗೆ ತೊಂದರೆ ಮಾಡುವುದಿಲ್ಲ: ಸಚಿವ ಲಾಡ್‌

12:36 AM Jul 18, 2024 | Team Udayavani |

ಬೆಂಗಳೂರು: ಕೆಲಸ ಕೊಟ್ಟರೆ ಕೌಶಲ ತಾನಾಗಿಯೇ ಬರುತ್ತದೆ. ಇಲ್ಲಿನ ಸಂಪನ್ಮೂಲ, ವಾತಾವರಣ ಎಲ್ಲವನ್ನೂ ನೋಡಿಯೇ ಹೂಡಿಕೆದಾರರು ಬರುತ್ತಾರೆ. ಕನ್ನಡಿಗರಿಗೆ ಅನುಕೂಲ ಆಗಲಿ ಎಂದು ಈ ಮಸೂದೆ ತರುತ್ತಿದ್ದೇವೆಯೇ ಹೊರತು, ಖಾಸಗಿ ಸಂಸ್ಥೆಗಳಿಗೆ ತೊಂದರೆ ಕೊಡುವುದಕ್ಕಲ್ಲ. ಮಸೂದೆಯ ಬಗ್ಗೆ ಚರ್ಚೆ ಆಗಲಿ. ಅಗತ್ಯಬಿದ್ದರೆ ಪುನರ್‌ ಪರಿಶೀಲನೆ ಮಾಡೋಣ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಹೇಳಿದ್ದಾರೆ.

Advertisement

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಚಾರದಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಕೌಶಲಭರಿತ ಕಾರ್ಮಿಕರು ಎನ್ನುವ ಸಂಸ್ಥೆಗಳು ಕೆಲಸ ಕೊಟ್ಟರೆ ತಾನೆ ಕೌಶಲ ಬರುವುದು. ನಾನೂ ಉದ್ದಿಮೆದಾರರ ಕುಟುಂಬದಿಂದಲೇ ಬಂದವನು. ಅದರ ಬಗ್ಗೆ ಜ್ಞಾನ ಇಲ್ಲವೆಂದಲ್ಲ. ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ. 50 ಹಾಗೂ ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಶೇ. 75ರಷ್ಟು ಮೀಸಲಾತಿ ನೀಡುವುದರಿಂದ ಸಂಸ್ಥೆಗಳಿಗೆ ಆಗುವ ನಷ್ಟವೇನು ಎಂಬುದನ್ನು ಅವರೂ ಹೇಳಲಿ ಎಂದು ಸವಾಲು ಹಾಕಿದ್ದಾರೆ.

ಕಾನೂನು ಹೋರಾಟಕ್ಕೆ ಸಿದ್ಧ
ಇದರ ವಿರುದ್ಧ ಯಾರಾದರೂ ನ್ಯಾಯಾಲಯದ ಮೆಟ್ಟಿಲೇರಿದರೆ ಸರಕಾರವೂ ಕಾನೂನು ಹೋರಾಟಕ್ಕೆ ಸಿದ್ಧವಿದೆ. ಆದರೂ ನ್ಯಾಯಾಲಯಕ್ಕೆ ಹೋಗದಂತೆ ಮನವಿ ಮಾಡುತ್ತೇವೆ. ಕಿರಣ್‌ ಮಜುಂದಾರ್‌ ಷಾ ಸೇರಿದಂತೆ ಸಾಕಷ್ಟು ಉದ್ದಿಮೆಗಳಲ್ಲಿ ತೀರಾ ಪರಿಚಿತರೇ ಇದ್ದಾರೆ. ಅವರು ಚರ್ಚೆ ಮಾಡಲಿ. ಸರಕಾರ ಮುಕ್ತ ಮನಸ್ಸಿನಿಂದ ಅವರ ಸಲಹೆಗಳನ್ನು ಸ್ವೀಕರಿಸಲಿದೆ ಎಂದು ಹೇಳಿದರು.

ಸಿನಿ ಕಾರ್ಮಿಕರಿಗೆ ಭದ್ರತೆ
ಸಚಿವ ಸಂಪುಟ ಸಭೆಯಲ್ಲಿ ಇದಿಷ್ಟೇ ಅಲ್ಲದೆ, ಚಿತ್ರರಂಗದಲ್ಲಿ ದುಡಿಯುವ ಕಾರ್ಮಿಕರ ರಕ್ಷಣೆಗೂ ಅನುಮೋದನೆ ನೀಡಲಾಗಿದೆ. ಸಿನಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡುವ ಮಸೂದೆವೊಂದನ್ನು ತರು ತ್ತಿದ್ದೇವೆ. ಚಿತ್ರಮಂದಿರಗಳು ಮಾರಾಟ ಮಾಡುವ ಟಿಕೆಟ್‌ ದರದ ಶೇ.1 ಅಥವಾ 2ರಷ್ಟು ಮೊತ್ತವನ್ನು ಕಾರ್ಮಿಕ ಕಲ್ಯಾಣ ನಿಧಿಗೆ ಉಪಕರ(ಸೆಸ್‌)ದ ರೂಪದಲ್ಲಿ ಸಂದಾಯ ಮಾಡಬೇಕು. ಅದನ್ನು ಬಳಸಿಕೊಂಡು ಸಿನಿ ಕಾರ್ಮಿಕರಿಗೆ ವಿಮೆ ಇತ್ಯಾದಿ ಸೌಲಭ್ಯಗಳನ್ನು ಕೊಡಲಾಗುತ್ತದೆ ಎಂದು ಸಚಿವ ಲಾಡ್‌ ವಿವರಿಸಿದರು.

ಗೊಂದಲ ಹುಟ್ಟು ಹಾಕಿ ಸಿಎಂ ಟ್ವೀಟ್‌-ಡಿಲೀಟ್‌
ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‌-ಡಿಲೀಟ್‌ ವಿಚಾರ ಭಾರೀ ಗೊಂದಲ ಸೃಷ್ಟಿಸಿದ್ದು ಕೊನೆಗೆ ಬುಧವಾರ ಮಧ್ಯಾಹ್ನ ಆಡಳಿತ ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಯ ಮೀಸಲು ಪ್ರಮಾಣದ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಮಂಗಳವಾರ ರಾತ್ರಿ ಮಾಡಿದ ಟ್ವೀಟ್‌ನಲ್ಲಿ ರಾಜ್ಯದ ಎಲ್ಲ ಖಾಸಗಿ ಕೈಗಾರಿಕೆಗಳಲ್ಲಿ ಸಿ ಮತ್ತು ಡಿ ದರ್ಜೆ ಹುದ್ದೆಗಳಿಗೆ ನೂರಕ್ಕೆ ನೂರರಷ್ಟು ಕನ್ನಡಿಗರ ನೇಮಕ ಕಡ್ಡಾಯಗೊಳಿಸುವ ಮಸೂದೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತ್ತು ಎಂದು ಸಿದ್ದರಾಮಯ್ಯ ತಿಳಿಸಿದ್ದರು.

Advertisement

ಆದರೆ ಈ ಬಗ್ಗೆ ವಿವಾದ ಸೃಷ್ಟಿಯಾಗುತ್ತಿದ್ದಂತೆ ಬುಧವಾರ ಟ್ವೀಟ್‌ ಡಿಲೀಟ್‌ ಮಾಡಿ ಹೊಸ ಮಾಹಿತಿ ಹಂಚಿಕೊಂಡರು. ಕನ್ನಡಿಗರು ಕನ್ನಡದ ನೆಲದಲ್ಲಿ ಉದ್ಯೋಗ ವಂಚಿತರಾಗುವುದನ್ನು ತಪ್ಪಿಸಿ, ತಾಯ್ನಾಡಿನಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂಬುದು ನಮ್ಮ ಸರಕಾರದ ಆಶಯ. ಕನ್ನಡಿಗರ ಹಿತ ಕಾಯುವುದು ನಮ್ಮ ಆದ್ಯತೆಯಾಗಿದೆ ಎಂದು ಹೇಳುವ ಮೂಲಕ ಆಡಳಿತಾತ್ಮಕ ಹುದ್ದೆಗೆ ಶೇ.50ರ ಮಿತಿಯನ್ನು ಸ್ಪಷ್ಟಗೊಳಿಸಿದ್ದಾರೆ.

ರಾಜ್ಯದಲ್ಲಿ ಕನ್ನಡಿಗರ ಸ್ವಾಭಿಮಾನ ಎತ್ತಿ ಹಿಡಿಯುವುದಕ್ಕೆ ನಮ್ಮ ಸರಕಾರ ಬದ್ಧವಾಗಿದೆ. ಮುಂದೆ ಸೃಷ್ಟಿಯಾಗುವ ಉದ್ಯೋಗದಲ್ಲಿ ಕನ್ನಡಿಗರಿಗೆ ಇಂತಿಷ್ಟು ಉದ್ಯೋಗ ಮೀಸಲಿಡುವವರೆಗೂ ನಮ್ಮ ಸರಕಾರ ಕೆಲಸ ಮಾಡುತ್ತದೆ. ಈ ನಿಟ್ಟಿನಲ್ಲಿ ಮಸೂದೆ ತಂದಿದ್ದೇವೆ. ತಂತ್ರಜ್ಞಾನಕ್ಕೆ ಸಂಬಂಧಪಟ್ಟ ವಿಚಾರಗಳಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ವಿನಾಯಿತಿ ನೀಡುತ್ತೇವೆ. ಸದನ ನಡೆಯುತ್ತಿರುವುದರಿಂದ ಹೆಚ್ಚಿನ ಚರ್ಚೆ ಮಾಡುವುದಿಲ್ಲ.” – ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next