ಹರಪನಹಳ್ಳಿ: ವಾಲ್ಮೀಕಿ ನಾಯಕ ಸಮಾಜಕ್ಕೆ ಮೀಸಲಾತಿ ಹೆಚ್ಚಳ ಕುರಿತು ವಿಳಂಬವಾಗಲು ಮೀಸಲಾತಿಯಿಂದ ಗೆದ್ದ ಶಾಸಕರ ಸಚಿವರ ಇಚ್ಛಾಶಕ್ತಿಯೇ ಕಾರಣ ಎಂದು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಜಂಬಯ್ಯನಾಯಕ ಹೇಳಿದರು.
ಪಟ್ಟಣದ ವಾಲ್ಮೀಕಿನಗರದ ದೊಡ್ಡಗರಡಿಕೇರಿಯ ಸಮುದಾಯ ಭವನದಲ್ಲಿ ಮೀಸಲಾತಿ ಹೆಚ್ಚಳ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ಈಗಾಗಲೇ ಪಾದಾಯಾತ್ರೆ ನಡೆಸಿ ಪರಿಶಿಷ್ಟ ಪಂಗಡಕ್ಕೆ ಶೇ.7.5% ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಸಮ್ಮಿಶ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಇದಾದ ಬಳಿಕ ಯಡಿಯೂರಪ್ಪ ಹಾಗೂ ಬೊಮ್ಮಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೂ ಮನವಿ ಮಾಡಿದ್ದೇವೆ. ಆದರೆ ಮೀಸಲಾತಿ ಹೆಚ್ಚಳ ಸಂಬಂಧ ಇದುವರೆಗೂ ಯಾರು ಸಹ ಬಾಯಿಬಿಡುತ್ತಿಲ್ಲ. ಈ ಮೀಸಲಾತಿ ವಿಚಾರದಲ್ಲಿ ನಿರ್ಲಕ್ಷ ತೋರಿದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಮಾತನಾಡಿ, ಕಳೆದ 3 ದಶಕಗಳಿಂದ ಶ್ರೀಗಳ ನೇತೃತ್ವದಲ್ಲಿ ಶಾಂತಿಯುತವಾಗಿ ಪಾದಯಾತ್ರೆ ಸೇರಿದಂತೆ ವಿವಿಧ ರೀತಿಯ ಹೋರಾಟಗಳನ್ನು ಮಾಡಿಕೊಂಡು ಬಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರೂ ಸಹ ಈವರೆಗೂ ವಾಲ್ಮೀಕಿ-ನಾಯಕ ಸಮುದಾಯಕ್ಕೆ ಮೀಸಲಾತಿ ನೀಡಲು ಸರ್ಕಾರ ಮೀನಮೇಷ ಎಣಸುತ್ತಿರುವುದನ್ನು ಖಂಡಿಸುತ್ತೇವೆ ಎಂದರು.
ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವರ ವರದಿ ಅನುಷ್ಠಾನಗೊಳಿಸುವಂತೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಾರ್ಚ್ 30ರಂದು ಜರುಗುವ ರಾಜ್ಯಮಟ್ಟದ ವಿಶೇಷ ಸಭೆಗೆ ತಾಲೂಕಿನ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ವಾಲ್ಮೀಕಿ ಜಾತ್ರಾ ಸಮಿತಿ ತಾಲೂಕು ಅಧ್ಯಕ್ಷ ಆಲದಹಳ್ಳಿ ಷಣ್ಮುಖಪ್ಪ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಆನಂದಪ್ಪ ಮಾತನಾಡಿದರು. ತಾಪಂ ಮಾಜಿ ಅಧ್ಯಕ್ಷ ಲಕ್ಕಳ್ಳಿ ಹನುಮಂತಪ್ಪ, ಬಿಜೆಪಿ ಎಸ್‌ಟಿ ಘಟಕದ ತಾಲೂಕು ಅಧ್ಯಕ್ಷ ಟಿ. ಮನೋಜ್, ವಾಲ್ಮೀಕಿ ನಾಯಕ ಸಮಾಜದ ಸಂಘಟನಾ ಕಾರ್ಯದರ್ಶಿ ತಿಮ್ಮೇಶ್, ನ್ಯಾಯವಾದಿಗಳಾದ ಕೆ.ಎಂ.ಪ್ರಾಣೇಶ, ಜಿಟ್ಟಿನಕಟ್ಟಿ ಮಂಜುನಾಥ, ರೈತ ಸಂಘದ ದ್ಯಾಮಜ್ಜಿ ಹನುಮಂತಪ್ಪ, ಏಕಲವ್ಯ ಸಂಘರ್ಷ ಸಮಿತಿ ಅಧ್ಯಕ್ಷ ರಾಯದುರ್ಗದ ಪ್ರಕಾಶ್, ಶಿಕ್ಷಕ ಹನುಮಂತಪ್ಪ, ವಾಲ್ಮೀಕಿ ನಾಯಕ ಮಹಿಳಾ ಘಟಕದ ಮಂಜುಳಾ, ಪವಿತ್ರ, ಶೋಭಾ, ಮುಖಂಡರುಗಳಾದ ಕವಸರ ನಾಗರಾಜ, ಹನುಮಂತಪ್ಪ, ದೊಡ್ಡಗರಡಿ ಕಮ್ಮಾರ ದೊಡ್ಡಹಾಲಪ್ಪ, ಕೆ.ಅಂಜಿನಪ್ಪ, ಸಿ.ನಾಗರಾಜ, ಬಿ. ದುರುಗಪ್ಪ ಇದ್ದರು.