ಕಲಬುರಗಿ: ಸಮಾಜಕ್ಕಾಗಿ ಮತ್ತು ಸಮಾಜ ನಂಬುವಂತ ಸಂಶೋಧನೆ ಮಾಡಿ. ಅದಕ್ಕಾಗಿ ಒಂದಷ್ಟು ಶ್ರಮವಹಿಸಿ. ಅದರಿಂದ ನಿಮ್ಮ ಜೀವನಕ್ಕೆ ಮಹತ್ವ ಸಿಗಲಿದೆ ಎಂದು ಗುವಿವಿ ಕುಲಪ್ರತಿ ಪ್ರೊ| ಎಸ್.ಆರ್. ನಿರಂಜನ್ ಹೇಳಿದರು.
ಇಲ್ಲಿನ ಗುವಿವಿ ಮಂಥನ ಸಭಾಗಂಣದಲ್ಲಿ ಶುಕ್ರವಾರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಿಂದ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದ ಕುರಿತು ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಮಾಲೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ನಿಮ್ಮದೊಂದು ಸಂಶೋಧನೆ ಸಮಾಜದಲ್ಲಿನ ಜನರಿಗೆ ಅನುಕೂಲ ಆಗುವಂತಿದ್ದರೆ ಅದೂ ನಿಜಕ್ಕೂ ಉತ್ತಮ ಸಂಶೋಧನೆ. ಅದು ನಿಮ್ಮನ್ನು ರಾಷ್ಟ್ರ , ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡುತ್ತದೆ. ವಿಷಯಗಳ ಸುತ್ತಲಿನ ಪರಿಧಿಯಲ್ಲಿ ಕಳೆದು ಹೋಗದೆ ಅದರ ತಳಕ್ಕೆ ಹೋಗಿ ಹುಡುಕಿ ಬರೆಯಿರಿ. ಪ್ರತಿಯೊಂದು ಪ್ರಬಂಧ ಜಾಗತಿಕ ಮಟ್ಟದಲ್ಲಿ ನಿಮ್ಮ ಸ್ಥಾನವನ್ನು ಖಾತರಿ ಮಾಡುತ್ತದೆ ಎಂದರು.
ಗುವಿವಿಯಲ್ಲಿ ಹಲವಾರು ಉಪನ್ಯಾಸ ಮಾಲಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವ ಹೊಣೆ ಸಂಶೋಧನಾ ವಿದ್ಯಾರ್ಥಿಗಳ ಮೇಲಿದೆ. ಒಂದು ಉಪನ್ಯಾಸ ವಿದ್ಯಾರ್ಥಿಗೆ ಆಮ್ಲಜನಕ ಇದ್ದಂತೆ. ಅದನ್ನು ಎಷ್ಟು ಸರಿಯಾಗಿ ಬಳಕೆ ಮಾಡಲಾಗುತ್ತದೋ ಅಷ್ಟು ಒಳ್ಳೆಯ ಭವಿಷ್ಯ ರೂಪುಗೊಳ್ಳುವುದು ಎಂದರು.
ಗುವಿವಿ ಕುಲಸಚಿವ ಪ್ರೊ| ದಯಾನಂದ ಅಗಸರ ಮಾತನಾಡಿ, ಸಾಮಾಜಿಕ ಕಳಕಳಿಯಿಂದ ಮಾಡಿದ ಸಂಶೋಧನೆ ಸಮಾಜಕ್ಕೆ ಸಹಾಯಕವಾಗುತ್ತದೆ ಎಂದು ಹೇಳಿದರು. ಉಪನ್ಯಾಸ ಮಾಲಿಕೆ ವಿಷಯವನ್ನು ಪ್ರೊ| ಮೂಲ್ಗೆ ಮಂಡಿಸಿದರು. ಪ್ರೊ| ವೆಂಕಟರಮನ್, ಸಂಶೋಧನಾ ವಿದ್ಯಾರ್ಥಿಗಳಾದ ಮೋಹನ್, ಮೊಹನರೆಡ್ಡಿ, ವಿದ್ಯಾರ್ಥಿನಿ ಹಿನಾ, ಪರ್ವಿನಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೆ ವೇಳೆ ಆಯ್ಕೆಗೊಂಡ ಪ್ರಬಂಧ ಮಂಡಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ವಿದ್ಯಾರ್ಥಿನಿ ನಗ್ಮಾ ಎಸ್. ನಿರೂಪಿಸಿದರು. ಪ್ರೊ| ಪ್ರತಿಮಾ ಮಠದ ಸ್ವಾಗತಿಸಿದರು. ಪ್ರೊ| ಚಂದ್ರಕಾಂತ ಕೆಳಮನಿ ಪರಿಚಯಿಸಿದರು. ವಿದ್ಯಾರ್ಥಿ ಕಲ್ಯಾಣಾಧಿಧಿಕಾರಿ ಕೆ.ಸಿದ್ದಪ್ಪ, ಪ್ರೊ| ಶಿವಣ್ಣವರ, ಪ್ರೊ| ಸಣ್ಣಕ್ಕಿ, ಪ್ರೊ| ಅಂಬಿಕಾ ಪ್ರಸಾದ, ಪ್ರೊ| ಕೆ. ಲಿಂಗಪ್ಪ, ಪ್ರೊ| ಸುಲೊಚನಾ, ಡಾ| ಆನಂದ ನಾಯಕ, ಡಾ| ಪ್ರಕಾಶ ನಾಯಕ, ಪ್ರೊ| ಗಾಯಕವಾಡ ಹಾಜರಿದ್ದರು.