Advertisement

ತಡರಾತ್ರಿ ದಟ್ಟ ಕಾಡಿನಲ್ಲಿ ಕಾರಿನೊಳಗೆ 6 ತಾಸು ಕಳೆದ ಮೂವರನ್ನು ರಕ್ಷಿಸಿದ ಪೊಲೀಸ್‍ ಅಧಿಕಾರಿ

02:04 PM Sep 23, 2020 | sudhir |

ಚಾಮರಾಜನಗರ: ಇಂಥ ಘಟನೆಗಳನ್ನು ಸಿನಿಮಾಗಳಲ್ಲಿ, ಕಥೆಗಳಲ್ಲಿ ನೋಡಿರುತ್ತೇವೆ. ಜೀವ ಭಯದಲ್ಲಿದ್ದವರನ್ನು ಹೀರೋ ಬಂದು ರಕ್ಷಿಸಿ ಕಾಪಾಡುತ್ತಾನೆ. ನಿಜ ಜೀವನದಲ್ಲಿ ಹೀಗಾಗುತ್ತದೆಯೇ ಅಂದುಕೊಳ್ಳುತ್ತೇವೆ! ಆದರೆ ಅಂಥದೇ ಸಿನಿಮೀಯ ರೀತಿಯ ಘಟನೆ ಜಿಲ್ಲೆಯ ಬಿಳಿಗಿರಿರಂಗನಬೆಟ್ಟ ಅರಣ್ಯದಲ್ಲಿ ನಡೆದಿದೆ.

Advertisement

ಜಿಲ್ಲೆಯ ಬಿಳಿಗಿರಿರಂಗನಬೆಟ್ಟ ದಟ್ಟ ಅರಣ್ಯದ ಹಳ್ಳವೊಂದರಲ್ಲಿ ಸಿಲುಕಿಕೊಂಡ ಕಾರಿನೊಳಗೆ ರಾತ್ರಿ ವೇಳೆ ಸುಮಾರು 6 ತಾಸು ಕಳೆದಿದ್ದ ತಂದೆ ಮಗ ಹಾಗೂ ಚಾಲಕನನ್ನು ಪೊಲೀಸ್‍ ಇನ್ ಸ್ಪೆಕ್ಟರ್ ಒಬ್ಬರು ರಕ್ಷಿಸಿ ಹೀರೋ ಆಗಿದ್ದಾರೆ!

ಬೆಂಗಳೂರು ನಿವಾಸಿ ಉದ್ಯಮಿ ಎನ್‍. ರೂಪೇಶ್‍ ಕುಮಾರ್ ರೆಡ್ಡಿ, ಅವರ ಪುತ್ರ ತೇಜೇಶ್ವರ ಹಾಗೂ ಚಾಲಕ ಕೇಶವ ಅವರನ್ನು ಚಾಮರಾಜನಗರ ಡಿಸಿಐಬಿ ಇನ್ ಸ್ಪೆಕ್ಟರ್ ಮಹದೇವಶೆಟ್ಟಿ ಮತ್ತು ತಂಡದವರು ರಕ್ಷಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಘಟನೆ ವಿವರ :
ರೂಪೇಶ್‍ ಕುಮಾರ್ ಅವರು ತಮ್ಮ ಪುತ್ರನೊಂದಿಗೆ ಸೆ. 16ರಂದು ಜಿಲ್ಲೆಯ ಬಿಳಿಗಿರಿರಂಗನಬೆಟ್ಟಕ್ಕೆ ಭೇಟಿ ನೀಡಿದ್ದರು. ಅಂದು ರಾತ್ರಿ ತಮ್ಮ ಪುತ್ರ ಮತ್ತು ಚಾಲಕನೊಂದಿಗೆ ಬಿಳಿಗಿರಿರಂಗನಬೆಟ್ಟದಿಂದ ಕೆ.ಗುಡಿಗೆ ಬರುತ್ತಿದ್ದರು. ಆಗ ಮಾರ್ಗ ಮಧ್ಯದ ಹಳ್ಳವೊಂದರಲ್ಲಿ ಅವರ ಕಾರು ಸಿಲುಕಿತು. ಮೊಬೈಲ್‍ ಫೋನ್‍ ನೆಟ್‍ ವರ್ಕ್ ಕೂಡ ಇರಲಿಲ್ಲ. ಹೀಗಾಗಿ ಹುಲಿ, ಆನೆಗಳ ಭಯದಿಂದ ಕಾರಿನೊಳಗೇ ಮೂವರೂ ಕುಳಿತರು. ಸುಮಾರು 6 ಗಂಟೆಗಳ ಕಾಲ ಹೀಗೇ ಕಾಲ ಕಳೆದಿದ್ದಾರೆ.

ಬೆಳಗಿನ ಜಾವ 2 ಗಂಟೆ ಸಮಯಕ್ಕೆ ಗಾಂಜಾ ಅಕ್ರಮ ಸಾಗಾಣಿಕೆ ಜಾಡು ಹಿಡಿದು ಗಸ್ತು ತಿರುಗುತ್ತಿದ್ದ ಡಿಸಿಐಬಿ ಇನ್‍ಸ್ಪೆಕ್ಟರ್ ಮಹದೇವ ಶೆಟ್ಟಿ ಅವರು ಅದೇ ಮಾರ್ಗದಲ್ಲಿ ಹೋಗಿದ್ದಾರೆ. ಇವರ ಕಾರು ಹಳ್ಳದಲ್ಲಿ ಸಿಲುಕಿಕೊಂಡಿರುವುದನ್ನು ಗಮನಿಸಿ, ಅವರನ್ನು ಕಾರಿನಿಂದ ಇಳಿಸಿ ತಮ್ಮ ಜೀಪಿನಲ್ಲಿ ಕೂರಿಸಿಕೊಂಡು ಅವರು ತಂಗಿದ್ದ ಹೋಟೆಲಿಗೆ ಬಿಟ್ಟಿದ್ದಾರೆ.

Advertisement

ಇದನ್ನೂ ಓದಿ : ಅಂಪೈರ್ ವಿರುದ್ಧ ಮತ್ತೆ ಗರಂ ಆದ ಕ್ಯಾಪ್ಟನ್ ಕೂಲ್ ಧೋನಿ : ಆಗಿದ್ದೇನು ಗೊತ್ತಾ ?

ಈ ವಿಷಯವನ್ನು ಇಂದು ರೂಪೇಶ್‍ ರೆಡ್ಡಿ ಅವರು, ಜಿಲ್ಲಾ ಪೊಲೀಸ್‍ ವರಿಷ್ಠಾಧಿಕಾರಿ ದಿವ್ಯಾ ಸರಾ ಥಾಮಸ್‍ ಅವರಿಗೆ ಮೆಸೇಜ್‍ ಮೂಲಕ ತಿಳಿಸಿದ್ದಾರೆ. ತಮ್ಮ ಮೂವರ ಜೀವವನ್ನು ಉಳಿಸಿದ ಇನ್‍ ಸ್ಪೆಕ್ಟರ್ ಹಾಗೂ ಎಸ್ಪಿಯವರಿಗೆ ಧನ್ಯವಾದವನ್ನು ತಿಳಿಸಿದ್ದಾರೆ.

ಈ ಮೆಸೇಜನ್ನು ಎಸ್ಪಿ ಅವರು ಇಂದು ತಮ್ಮ ಫೇಸ್‍ ಬುಕ್‍ ಪುಟದಲ್ಲಿ ಹಂಚಿಕೊಂಡಿದ್ದು, ಉತ್ತಮ ಕೆಲಸ ಮಾಡಿದ ಡಿಸಿಐಬಿ ಇನ್‍ಸ್ಪೆಕ್ಟರ್ ಮಹದೇವಶೆಟ್ಟಿ ಮತ್ತು ಸಿಬ್ಬಂದಿ ವರ್ಗಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next