Advertisement

ತ್ಯಾಜ್ಯ ಸಮರ್ಪಕ ವಿಂಗಡಣೆಗೆ ಶಿಸ್ತುಕ್ರಮ ಅಗತ್ಯ

01:17 AM Jun 06, 2019 | Lakshmi GovindaRaj |

ಬೆಂಗಳೂರು: ನಗರದಲ್ಲಿ ತ್ಯಾಜ್ಯ ವಿಂಗಡಣೆ ಸಮರ್ಪಕವಾಗಿ ಆಗಬೇಕಾದರೆ ನಾಗರಿಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆಯಿದೆ ಎಂದು ರಾಜ್ಯಪಾಲ ವಿ.ಆರ್‌.ವಾಲಾ ತಿಳಿಸಿದರು.

Advertisement

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬುಧವಾರ ರಾಜಭವನದಲ್ಲಿ ಆಯೋಜಿಸಿದ್ದ “ನಮ್ಮ ಕಸ ನಮ್ಮ ಜವಾಬ್ದಾರಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಿಯಮ ಪಾಲಿಸದವರಿಗೆ ದಂಡ ವಿಧಿಸಿದಾಗ ಮಾತ್ರವೇ ಸಮಾಜದಲ್ಲಿ ಸುಧಾರಣೆ ತರಲು ಸಾಧ್ಯವಾಗುತ್ತದೆ. ಶಿಕ್ಷೆ ಇಲ್ಲದೆ ಸುಧಾರಣೆ ತರುವುದು ಅಸಾಧ್ಯ ಎಂದರು.

ರಾಜಭವನದ ಸುತ್ತಮುತ್ತ ಸೇರಿದಂತೆ ನಗರದ ಹಲವೆಡೆಗಳಲ್ಲಿ ತ್ಯಾಜ್ಯ ಸುರಿಯುತ್ತಾರೆ. ಪಾಲಿಕೆಯವರು ಅದನ್ನು ತೆರವುಗೊಳಿಸುವ ಮೊದಲೇ ಅದಕ್ಕೆ ಬೆಂಕಿ ಹಾಕುತ್ತಿದ್ದು, ಇಂತಹ ಚಟುವಟಿಕೆಗಳಿಗೆ ಪಾಲಿಕೆ ಕಡಿವಾಣ ಹಾಕಬೇಕಿದೆ. ಪರಿಸರ ರಕ್ಷಣೆ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡಿದರೆ ಮುಂದೆ ಎದುರಾಗುವ ಸಮಸ್ಯೆ ನಿವಾರಣೆ ಮಾಡಬಹುದು ಎಂದು ತಿಳಿಸಿದರು.

ನಾಗರಿಕರು ದಿನ ಕಳೆದಂತೆ ಪರಿಸರವನ್ನು ಹಾಳು ಮಾಡುತ್ತಿರುವುದರಿಂದ ಹವಾಮಾನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದ್ದು, ಸರಿಯಾದ ಸಮಯಕ್ಕೆ ಮಳೆ ಬರುತ್ತಿಲ್ಲ. ನಾವು ಪರಿಸರವನ್ನು ರಕ್ಷಿಸಿದರೆ ಮಾತ್ರ ಅದು ನಮ್ಮನ್ನು ರಕ್ಷಿಸುತ್ತದೆ. ಆದ್ದರಿಂದ ನಾವು ಪರಿಸದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವತ್ಛಭಾರತ ಅಭಿಯಾನದಿಂದ ಜನರಲ್ಲಿ ಸ್ವತ್ಛತೆ ಕಾಪಾಡುವ ಬಗ್ಗೆ ಕಾಳಜಿ ಮೂಡಿದೆ. ಇದರಿಂದಾಗಿ ದೇಶದ ಶೇ.99ರಷ್ಟು ಜಿಲ್ಲೆಗಳಲ್ಲಿ ಜನರು ಶೌಚಾಲಯಗಳನ್ನು ಬಳಸುತ್ತಿದ್ದು, ರಾಜ್ಯದ ಎಲ್ಲ ಗ್ರಾಮಗಳಲ್ಲಿಯೂ ಶೌಚಾಲಯ ಬಳಸುತ್ತಿದ್ದಾರೆ ಎಂದು ಹೇಳಿದರು.

Advertisement

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯ ಸಮಿತಿ ಅಧ್ಯಕ್ಷ ನ್ಯಾ.ಸುಭಾಷ್‌ ಬಿ ಅಡಿ ಮಾತನಾಡಿ, ನಗರದಲ್ಲಿ ಉತ್ಪತ್ತಿಯಾಗುವ ಶೇ.64ರಷ್ಟು ಮಿಶ್ರತ್ಯಾಜ್ಯವನ್ನು ಕ್ವಾರಿಗಳಲ್ಲಿ ಸುರಿಯಲಾಗುತ್ತಿದೆ. ಇದರಿಂದಾಗಿ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಮುಂದಿನ ಪೀಳಿಗೆ ಅನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಉತ್ಪತ್ತಿಯಾಗುವ ಮಿಶ್ರ ತ್ಯಾಜ್ಯವನ್ನು ನಾಗರಿಕರು ಮೂಲದಿಂದಲೇ ವಿಂಗಡಿಸಿ ನೀಡಿದಾಗ ಅದನ್ನು ಸಂಸ್ಕರಿಸಿ ಗೊಬ್ಬರ ತಯಾರಿಸಲು ಅನುಕೂಲವಾಗುತ್ತದೆ. ಜತೆಗೆ ರೈತರಿಗೂ ಗೊಬ್ಬರ ಪೂರೈಕೆಗೆ ಅನುಕೂಲವಾಗುತ್ತದೆ. ಇದಕ್ಕೆ ಮನೋಬಲದ ಅವಶ್ಯಕತೆಯಿದೆ ಎಂದರು.

ಸಮರ್ಪಕವಾಗಿ ತ್ಯಾಜ್ಯವಿಲೇವಾರಿ ಆಗದಿರುವುದಕ್ಕೆ ಸರ್ಕಾರ ಹಾಗೂ ನಾಗರಿಕರ ನಿರ್ಲಕ್ಷ್ಯವೇ ಕಾರಣ. ಸರ್ಕಾರ ಹಲವಾರು ನಿಯಮ ಜಾರಿಗೆ ಬಂದರೂ, ಸಮರ್ಪಕವಾಗಿ ಅನುಷ್ಠಾನವಾಗುವುದಿಲ್ಲ. ಪ್ರತಿಯೊಂದು ಮನೆಗಳಲ್ಲಿಯೇ ಕಸ ವಿಂಗಡಣೆಯಾಗಿ ಸಂಸ್ಕರಣೆಯಾದರೆ, ದೊಡ್ಡ ಕಾಂತ್ರಿಯೇ ಆಗಲಿದೆ.
-ಅಭಯ್‌ ಶ್ರೀನಿವಾಸ್‌ ಓಕಾ, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next