ಬೆಂಗಳೂರು: ಪ್ರಕೃತಿ ವಿಪತ್ತಿನ ನಂತರ ಕೇರಳದಲ್ಲಿ ಮತ್ತೆ ಪ್ರವಾಸೋದ್ಯಮ ಎಂದಿನಂತೆ ಆರಂಭವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸ ಕೈಗೊಳ್ಳುವಂತೆ ಕೇರಳ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ವಿ.ಅನಿಲ್ ರಾಜ್ಯದ ಜನತೆಯಲ್ಲಿ ಮನವಿ ಮಾಡಿದರು.
ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ನಡೆದ “ಪ್ರವಾಸೋದ್ಯಮ ವಿಸ್ತರಣಾ ಅಭಿಯಾನ’ದಲ್ಲಿ ಮಾತನಾಡಿದ ಅವರು, ನದಿಗಳ ತವರೂರು ಎನಿಸಿರುವ ಕೇರಳ ಆಯುರ್ವೇದಿಕ್ ಕ್ಷೇತ್ರದಲ್ಲೂ ಛಾಪು ಮೂಡಿಸಿದೆ. ಅಲ್ಲದೆ ಪಶ್ಚಿಮ ಘಟ್ಟವನ್ನು ಹೊಂದಿರುವ ಈ ರಾಜ್ಯಕ್ಕೆ ವಿದೇಶಿಯರು ಕೂಡ ಅಧಿಕ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಭವಿಷ್ಯತ್ತಿನ ಹೂಡಿಕೆಗೂ ಹೇಳಿ ಮಾಡಿಸಿದ ತಾಣ ಇದಾಗಿದೆ ಎಂದು ಹೇಳಿದರು.
2018ರಲ್ಲಿ ದಿಢೀರ್ ಎಂದು ಅಪ್ಪಳಿದ ಪ್ರಕೃತಿ ವಿಕೋಪದಲ್ಲಿ ಪ್ರವಾಸೋದ್ಯಮಕ್ಕೆ ಪೆಟ್ಟುಬಿದ್ದಿತ್ತು.ಆದರೆ ಈಗ ಚೇತರಿಸಿಕೊಳ್ಳುತ್ತಿದ್ದು ಸಹಜ ಸ್ಥಿತಿಯತ್ತ ಮರಳುತ್ತಿದೆ. ಕಣ್ಣೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದ ಮೇಲೆ ಕೇರಳ ಪ್ರವಾಸೋದ್ಯಮಕ್ಕೆ ಮತ್ತಷ್ಟು ವರದಾನವಾಗಿದೆ.
ಬೇಕಲ್ ಮತ್ತು ವಯನಾಡು ಸೇರಿದಂತೆ ಉತ್ತರ ಕೇರಳವನ್ನು ಅಭಿವೃದ್ಧಿಪಡಿಸಲಾಗಿದ್ದು ವಳಿಯಪರಂಬಾ ಹಿನ್ನೀರು ಪ್ರದೇಶ, ಕುಪ್ಪಂ ಮತ್ತು ರಾಣಿಪುರಂ ನಂತಹ ಪ್ರದೇಶಗಳಿಗೂ ಆದ್ಯತೆ ನೀಡಲಾಗಿದೆ. ಯಾವುದೇ ಪ್ರವಾಸಿ ತಾಣವನ್ನು ಪ್ರವಾಸಿಗರು ಸುಲಭವಾಗಿ ತಲುಪಬಹುದಾಗಿದೆ ಎಂದರು.
ಕರ್ನಾಟಕಕ್ಕೆ 2 ನೇ ಸ್ಥಾನ: ಕೇರಳದಲ್ಲಿರುವ ಪ್ರವಾಸಿ ತಾಣವನ್ನು ಸವಿಯಲು ಅಧಿಕ ಸಂಖ್ಯೆಯಲ್ಲಿ ದೇಶಿಯರು ಭೇಟಿ ನೀಡುತ್ತಿದ್ದಾರೆ. ಹೀಗೆ ಭೇಟಿ ನೀಡುವರರ ಸಂಖ್ಯೆಯಲ್ಲಿ ತಮಿಳುನಾಡುನವರು (13 ಲಕ್ಷ) ಹೆಚ್ಚಿನವರಿದ್ದಾರೆ. 2ನೇ ಸ್ಥಾನದಲ್ಲಿ ಕರ್ನಾಟಕ ಇದ್ದು, 2018ರ ಅಂಕಿ – ಸಂಖ್ಯೆ ಪ್ರಕಾರ ಸುಮಾರು 10 ಲಕ್ಷ ಪ್ರವಾಸಿಗರು ಕರ್ನಾಟಕದಿಂದ ಆಗಮಿಸಿದ್ದಾರೆ.
ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೈನಾಡುಗೆ ಭೇಟಿ ಕೊಟ್ಟಿದ್ದಾರೆ ಎಂದು ಹೇಳಿದರು. ಕರ್ನಾಟಕ ಕೂಡ ಕೇರಳಕ್ಕೆ ಪ್ರವಾಸೋದ್ಯಮದ ಆದಾಯದ ಮೂಲ ತಾಣವಾಗಿದೆ. ಕಳೆದ ವರ್ಷದಿಂದ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲೂ ವೃದ್ಧಿಯಾಗಿದು, ಇಂಗ್ಲೆಂಡ್, ಅಮೆರಿಕ, ಜರ್ಮನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆ ಎಂದರು.
ಪ್ರವಾಸೋದ್ಯಮ ವಿಸ್ತರಣಾ ಅಭಿಯಾನವನ್ನು ಈಗಾಗಲೇ ಜೈಪುರ, ದೆಹಲಿ ಮತ್ತು ಚಂಡಿಗಡ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ ಪಾಲುದಾರಿಕೆ ಸಭೆ ನಡೆಸುತ್ತಿರುವುದು ಖುಷಿ ತಂದಿದೆ ಎಂದು ಹೇಳಿದರು. ಇಂಡಿಯಾ ಟೂರಿಸಂ ನ ನಿರ್ದೇಶಕ ಮಹಮದ್ ಫಾರೂಖ್ ಉಪಸ್ಥಿತರಿದ್ದರು.