ಬೆಂಗಳೂರು: ಉದ್ದೇಶಿತ ಉಪನಗರ ರೈಲು ಯೋಜನೆ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯಕ್ಕೆ ಬೇಸರ ವ್ಯಕ್ತಪಡಿಸಿರುವ ಸಂಸದ ಪಿ.ಸಿ.ಮೋಹನ್, ಉಪನಗರ ರೈಲು ಯೋಜನೆ ಜಾರಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರು ಸುತ್ತ ಉಪನಗರ ರೈಲು ವ್ಯವಸ್ಥೆ ಜಾರಿಗೊಳಿಸಲು ಸ್ಪೆಷಲ್ ಪರ್ಪಸ್ ವೆಹಿಕಲ್ ಸ್ಥಾಪಿಸಲು ಕಳೆದ ಜನವರಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಆದರೆ, ನಂತರದಲ್ಲಿ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಿಎಂಗೆ ಪತ್ರದಲ್ಲಿ ಅವರು ಮನವಿ ಮಾಡಿದ್ದಾರೆ.
ಸಂಚಾರ ದಟ್ಟಣೆ ತಗ್ಗಿಸಲು ಮೆಟ್ರೋ ರೈಲಿಗಿಂತಲೂ ಉಪನಗರ ರೈಲು ವ್ಯವಸ್ಥೆ ಉತ್ತಮವಾಗಿದೆ. ರೈಲ್ ಇಂಡಿಯಾ ಟೆಕ್ನಿಕಲ್ ಆ್ಯಂಡ್ ಇಕಾನಮಿಕ್ ಸರ್ವೀಸ್ ವರದಿ ಪ್ರಕಾರ ಉಪನಗರ ರೈಲು ಆರಂಭವಾದರೆ ಪ್ರತಿನಿತ್ಯ 32 ಲಕ್ಷ ಜನ ಸಂಚರಿಸಲು ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ರೈಲ್ವೆಯ ಉಪನಗರ ರೈಲು ಕಾಯ್ದೆಯ ಕರಡು ಕುರಿತು ರಾಜ್ಯ ಸರ್ಕಾರ ಕೆಲವು ಸ್ಪಷ್ಟೀಕರಣ ಕೇಳಿತ್ತು. ಇದೀಗ ಉಪನಗರ ರೈಲು ಕಾಯ್ದೆ ಅಂತಿಮಗೊಂಡು ಸಾಕಷ್ಟು ದಿನ ಕಳೆದರೂ ರಾಜ್ಯ ಸರ್ಕಾರ ಆ ನಿಟ್ಟಿನಲ್ಲಿ ಗಮನಹರಿಸಿಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.
ಆದ್ದರಿಂದ ರಾಜ್ಯ ಸರ್ಕಾರ ಉಪನಗರ ರೈಲು ಯೋಜನೆಗಾಗಿ ಕೂಡಲೇ ಸ್ಪೆಷಲ್ ಪರ್ಪಸ್ ವೆಹಿಕಲ್ ಸ್ಥಾಪಿಸಬೇಕು ಅದಕ್ಕೆ ಅಧಿಕಾರಿಯೊಬ್ಬರನ್ನು ನೇಮಿಸಬೇಕು. ಇಲ್ಲವೇ, ಸಮನ್ವಯತೆ ಸಾಧಿಸಲು ಪ್ರತ್ಯೇಕ ಅಧಿಕಾರಿ ನೇಮಕ ಮಾಡಬೇಕು. ಜತೆಗೆ ಬೈಯ್ಯಪನಹಳ್ಳಿ-ವೈಟ್‌ಫೀಲ್ಡ್ ನಡುವೆ ಬಹುಪಯೋಗಿ ಎಲೆಕ್ಟ್ರಿಕ್ ರೈಲು ಓಡಿಸಲು ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.